ಮೈಸೂರು: ಶೀಘ್ರವೇ ದಶಪಥ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ

Spread the love

ಮೈಸೂರು: ಶೀಘ್ರವೇ ದಶಪಥ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುವ ಮುನ್ನವೇ ಬಹುನಿರೀಕ್ಷಿತ ಮೈಸೂರು-ಬೆಂಗಳೂರು ದಶಪಥ ರಸ್ತೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಉದ್ಘಾಟಿಸಲಿದ್ದಾರೆ.

ಅದೇ ದಿನ ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವಂತಹ ಮಹತ್ವದ ಮೈಸೂರು-ಕುಶಾಲನಗರ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಮತ್ತು ಬಾಕಿ ಕೆಲಸಗಳನ್ನು ಮಾ.5ರೊಳಗೆ ಪೂರ್ಣಗೊಳಿಸುವುದಕ್ಕೂ ಭರದ ತಯಾರಿ ಮಾಡಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಸೂರು-ಕುಶಾಲನಗರ ಹೆದ್ದಾರಿ ವಿಭಾಗದ ಎನ್‌ಎಚ್-275 ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಸಂಸದ ಪ್ರತಾಪಸಿಂಹ ಸಂಬಂಧಿಸಿದ ಅಧಿಕಾರಿಗಳಿಗೆ ಭೂ ಸ್ವಾಧೀನ ಸೇರಿ ಇನ್ನಿತರ ಪ್ರಕ್ರಿಯೆ ಮುಗಿಸುವಂತೆ ಸೂಚಿಸಿದರು. 92.35 ಕಿಲೋ ಮೀಟರ್ ಉದ್ದದ ನಾಲ್ಕು ಪಥದ ರಸ್ತೆಯನ್ನು 3529 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 1113 ಕೋಟಿ ರೂ. ಭೂ ಸ್ವಾಧೀನಕ್ಕೆ ಮತ್ತು 2416 ಕೋಟಿ ರೂ. ಕಾಮಗಾರಿ ನಿರ್ವಹಣೆಗೆ ಮೀಸಲಿಡಲಾಗಿದೆ. ಫೆ.20ರಂದು ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.

ನಾಲ್ಕು ಪಥದ ರಸ್ತೆ ಸಂಬಂಧ ಒಂದೂವರೆ ವರ್ಷಗಳಿಂದ ಸಭೆ ಮಾಡಿದ್ದೇನೆ. ಮಾ.5ರೊಳಗೆ ಭೂಸ್ವಾಧೀನ ಪ್ರಕ್ರಿಯೆ, ಪರಿಹಾರದ ಕೆಲಸ, ಭೂ ಮಾಲೀಕತ್ವದ ವಿವಾದ ಸೇರಿ ಬಾಕಿ ಕೆಲಸವನ್ನು ಪೂರ್ಣಗೊಳಿಸುವಂತೆ ಮನವಿಯೊಂದಿಗೆ ಆದೇಶ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮಾ.5ರೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿದರು. ಮೈಸೂರು, ಹುಣಸೂರು, ತಾಲೂಕು ತಹಸಿಲ್ದಾರ್‌ಗಳು ಸಭೆಯಲ್ಲಿ ಹಾಜರಿದ್ದು, ಭೂ ಸ್ವಾಧೀನಕ್ಕೆ ಇರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಲಹೆ ಪಡೆದರು.

ಹುಣಸೂರು ತಾಲೂಕಿನಲ್ಲಿ ಅರಣ್ಯ ಪ್ರದೇಶ ವೀಕ್ಷಣೆಗೆ ಗುರುವಾರ ಭೇಟಿ ನೀಡುವುದಾಗಿ ತಿಳಿಸಿದರು. ಗೋಮಾಳದಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದರೆ ಪರಿಹಾರವಿಲ್ಲದೇ ತೆರವು ಮಾಡಿಸುವಂತೆ ಮೈಸೂರು ಉಪ ವಿಭಾಗಾಧಿಕಾರಿ ಕೆ.ಆರ್. ರಕ್ಷಿತ್‌ಗೆ ಸೂಚಿಸಿದರು. ಹಂಗಾಮಿ ಸಾಗುವಳಿ ಮಾಡುವವರಿಗೆ ಮಾಲೀಕತ್ವ ಇಲ್ಲ,ದಾಖಲೆಗಳು ಇಲ್ಲವೆಂದು ಗೊತ್ತಾಗಿದೆ. ಸರ್ವೆ ಮಾಡಿ ಗುರುತು ಮಾಡಿದ ಮೇಲೆ ನಮ್ಮದೆಂದು ಬರುವ ಸಾಧ್ಯತೆ ಇದೆ. ಮೂಲ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕಿದೆ ಎಂದು ಡಿಡಿಎಲ್‌ಆರ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಡಿಸಿ ಈ ವಿಚಾರದಲ್ಲಿ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆ ಇದ್ದಲ್ಲಿ ಪರಿಹಾರ ಕಂಡುಕೊಳ್ಳೋಣ ಎಂದರು.

ಮೈಸೂರು-ಕುಶಾಲನಗರ ರಸ್ತೆ ಕಾಮಗಾರಿಗೆ ಅನುಕೂಲವಾಗುವಂತೆ ಕ್ವಾರಿ ಗುರುತಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮೀಸಲಿಡಬೇಕು. ಹುಣಸೂರು ತಾಲೂಕಿನಲ್ಲಿ ಖಾಸಗಿ ವ್ಯಕ್ತಿಗೆ ಕ್ವಾರಿ ಕೊಟ್ಟಿರುವುದನ್ನು ಹಿಂಪಡೆಯಬೇಕು ಎಂದು ಸಂಸದ ಪ್ರತಾಪಸಿಂಹ ಹೇಳಿದರು.


Spread the love