ಮೊದಲ ಹೆಣ್ಮಕ್ಕಳ ಶಾಲಾ ಕಟ್ಟಡ ನೆಲಸಮ

Spread the love

ಮೊದಲ ಹೆಣ್ಮಕ್ಕಳ ಶಾಲಾ ಕಟ್ಟಡ ನೆಲಸಮ

ಮೈಸೂರು: ನಗರದ ನಾರಾಯಣಶಾಸ್ತ್ರಿ ರಸ್ತೆಯ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆಯಿದ್ದ ಕಟ್ಟಡವನ್ನು ಪೊಲೀಸರ ಭಾರೀ ಭದ್ರತೆ ನಡುವೆ ಸಂಪೂರ್ಣ ನೆಲಸಮಗೊಳಿಸಲಾಗಿದ್ದು, ಇದರೊಂದಿಗೆ ಮೈಸೂರು ಒಡೆಯರ ಕನಸಿನ ಕೂಸು, ರಾಜ್ಯದ ಮೊದಲ ಹೆಣ್ಣು ಮಕ್ಕಳ ಶಾಲಾ ಕಟ್ಟಡ ಇತಿಹಾಸದ ಪುಟ ಸೇರಿದೆ

ಪೊಲೀಸರು ನಾಕಾಬಂದಿ ವಿಧಿಸಿ 4 ಹಿಟಾಚಿ, 3 ಜೆಸಿಬಿಗಳ ಮೂಲಕ ಕಟ್ಟಡ ನೆಲಸಮ ಕಾರ್ಯಾಚರಣೆ ಆರಂಭಿಸಿ, ಕೆಲವೇ ಗಂಟೆಗಳಲ್ಲಿ ಸುಮಾರು ಶತಮಾನ ದಾಟಿದ್ದ ಕಟ್ಟಡವನ್ನು ನೆಲಸಮಗೊಳಿಸಲಾಯಿತು.

ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಶಶಿಧರ್ ಸೇರಿದಂತೆ ದೇವರಾಜ, ಕೃಷ್ಣರಾಜ, ಲಕ್ಷ್ಮಿಪುರಂ ಇನ್ನಿತರ ಪೊಲೀಸ್ ಠಾಣೆ ಗಳ ಇನ್ಸ್‌ಪೆಕ್ಟರ್‌ಗಳು, ಸಬ್‌ಇನ್ಸ್‌ಪೆಕ್ಟರ್‌ಗಳು ಹಾಗೂ 250ಕ್ಕೂ ಹೆಚ್ಚು ಸಿಬ್ಬಂದಿ ಬಂದೋಬಸ್ತ್ ಮಾಡಲಾಗಿತ್ತು. ಸಂಪರ್ಕ ರಸ್ತೆಗಳ 200-300 ಮೀಟರ್ ಅಂತರದಲ್ಲಿ ಬ್ಯಾರಿಕೇಡ್ ಅಳವಡಿಸಿ, ಕಟ್ಟೆಚ್ಚರ ವಹಿಸಲಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮಹಾರಾಣಿ(ಎನ್‌ಟಿಎಂ) ಮಾದರಿ ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು, ಕಟ್ಟಡ ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕಟ್ಟಡದ ಹತ್ತಿರಕ್ಕೆ ಪ್ರವೇಶ ನಿರಾಕರಿಸಿದ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಪರಿಸ್ಥಿತಿ ಕೈ ಮೀರುವ ಮುನ್ಸೂಚನೆ ಅರಿತ ಪೊಲೀ ಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ರಾತ್ರೋರಾತ್ರಿ ಆರ್ಭಟಿಸಿದ ಜೆಸಿಬಿ, ಹಿಟಾಚಿಗಳ ಸದ್ದು ಕೇಳಿದ ಸ್ಥಳೀ ಯರು ಬ್ಯಾರಿಕೇಡ್ ಅಳವಡಿಸಿದ್ದ ಸ್ಥಳದಲ್ಲಿ ನಿಂತು ಕಟ್ಟಡ ನೆಲಸಮಗೊಳ್ಳುವುದನ್ನು ನೋಡುತ್ತಿದ್ದ ದೃಶ್ಯ ಕಂಡುಬಂತು.

3 ದಿನದ ಹಿಂದೆ ಶಾಲೆ ಸ್ಥಳಾಂತರ: ಮೈಸೂರು ನಾರಾ ಯಣ ಶಾಸ್ತ್ರಿ ರಸ್ತೆಯಲ್ಲಿನ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆಯನ್ನು ಎದುರಿಗಿರುವ ಮಹಾರಾಣಿ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಕಟ್ಟಡಕ್ಕೆ ಫೆ.3ರಂದು ಸ್ಥಳಾಂತರಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಗಳು, ಪೊಲೀಸ್ ಬಂದೋಬಸ್ತ್ ನಡುವೆ ಶಾಲೆ ಸ್ಥಳಾಂತರಿಸಿದರು. ಆ ವೇಳೆ ಶಾಲೆ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಮಹಾರಾಣಿ(ಎನ್‌ಟಿಎಂ) ಮಾದರಿ ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು, ಕೆಲ ಗಂಟೆಗಳ ನಂತರ ಬಿಡುಗಡೆ ಮಾಡಿದ್ದರು. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಎನ್‌ಟಿಎಂ ಶಾಲಾ ಕಟ್ಟಡ, ಆವರಣ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಬಿಆರ್ಸಿ ಕಟ್ಟಡ ಹಾಗೂ ಆವರಣವನ್ನೊಳಗೊಂಡ 36591.66 ಚದರಡಿ ಜಾಗವನ್ನು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ-ವಿವೇಕ ಸ್ಮಾರಕದ ನಿರ್ಮಾಣಕ್ಕಾಗಿ ಮೈಸೂರಿನ ಶ್ರೀ ರಾಮಕೃಷ್ಣ ಮಠ ಹಾಗೂ ಮಿಷನ್‌ಗೆ ಉಚಿತವಾಗಿ ಮಂಜೂರು ಮಾಡಿ, 2013ರ ಜನವರಿ 1ರಂದು ಸರ್ಕಾರ ಆದೇಶಿಸಿತ್ತು.

ಆದೇಶ ಪಾಲಿಸುವುದರೊಂದಿಗೆ ಎನ್‌ಟಿಎಂ ಸರ್ಕಾರಿ ಶಾಲೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದ ಕಟ್ಟಡಕ್ಕೆ ಸ್ಥಳಾಂತರಿಸಲು ಸೂಚನೆ ನೀಡಿ ಸರ್ಕಾರ ಜ.7ರಂದು ಮತ್ತೊಂದು ಆದೇಶ ಹೊರಡಿಸಿತ್ತು. ಇದರನ್ವಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಜ.29ರಂದು ಜ್ಞಾಪಕ ಪತ್ರ ಹೊರಡಿಸಿ, ಕ್ರಮಕ್ಕೆ ಸೂಚಿಸಿ ದ್ದರು. ಈ ಹಿನ್ನೆಲೆಯಲ್ಲಿ ಎನ್‌ಟಿಎಂ ಶಾಲೆಯನ್ನು ಎದುರಿನ ಶಿಕ್ಷಕಿಯರ ತರಬೇತಿ ಸಂಸ್ಥೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಫೆ.4ರಿಂದ ಅಲ್ಲಿಯೇ ತರಗತಿಗಳು ನಡೆಯುತ್ತಿವೆ.


Spread the love