ಮೊಬೈಲ್‍ನಲ್ಲಿ ವಿಡಿಯೋ ಚಿತ್ರೀಕರಣ: ನಾಮನಿರ್ದೇಶಿತ ಸದಸ್ಯೆ ನಡೆಗೆ ಆಕ್ಷೇಪ, ವಿಪಕ್ಷದಿಂದ ಸಭಾತ್ಯಾಗ

Spread the love

ಮೊಬೈಲ್‍ನಲ್ಲಿ ವಿಡಿಯೋ ಚಿತ್ರೀಕರಣ: ನಾಮನಿರ್ದೇಶಿತ ಸದಸ್ಯೆ ನಡೆಗೆ ಆಕ್ಷೇಪ, ವಿಪಕ್ಷದಿಂದ ಸಭಾತ್ಯಾಗ

  • ನಾಮನಿರ್ದೇಶಿತ ಸದಸ್ಯೆಯ ಬಾಯಿ ಮುಚ್ಚಿಸಲಾಗದವರು ಆಡಳಿತ ಹೇಗೆ ನಡೆಸುತ್ತೀರಿ: ಚಂದ್ರಶೇಖರ್ ಖಾರ್ವಿ ಆಕ್ರೋಶ

ಕುಂದಾಪುರ: ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ ನಾಮನಿರ್ದೇಶಿತ ಸದಸ್ಯೆಯೋರ್ವರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿರುವುದನ್ನು ಆಕ್ಷೇಪಿಸಿ ನಡೆದ ವಾಕ್ಸಮರದಲ್ಲಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ನಡೆದಿದೆ.

ಸೋಮವಾರ ಇಲ್ಲಿನ ಪುರಸಭೆಯ ವಿಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ಚಂದ್ರಶೇಖರ್ ಖಾರ್ವಿ, ಸ್ಥಾಯಿ ಸಮಿತಿಯ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ನಾಮನಿರ್ದೇಶಿತ ಸದಸ್ಯೆ ಪುಷ್ಪಾ ಶೆಟ್ ಮಧ್ಯಪ್ರವೇಶಿಸಿ ಚರ್ಚೆಗಿಳಿಸಿದರು. ನಾಮನಿರ್ದೇಶಿತ ಸದಸ್ಯರು ಸಲಹೆ ಕೊಡಬಹುದೇ ವಿನಃ ಚುನಾಯಿತ ಸದಸ್ಯರ ಜೊತೆ ಚರ್ಚೆಗಿಳಿಯುವ ಅಧಿಕಾರ ಇಲ್ಲ ಎಂದು ಸದಸ್ಯ ಚಂದ್ರಶೇಖರ್ ಖಾರ್ವಿ ಹೇಳಿದರು. ಮತ್ತೆ ಚರ್ಚೆ ಮುಂದುವರೆಸಿದ ಪುಷ್ಪಾ ಶೇಟ್ ವಿರುದ್ದ ಆಕ್ರೋಶ ವ್ಯಕ್ತವಾಯಿತು. ಈ ವೇಳೆ ನಾಮ ನಿರ್ದೇಶಿತ ಸದಸ್ಯೆ ಪುಷ್ಪಾ ಶೇಟ್ ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಚಿತ್ರೀಕರಣ ಸೆರೆ ಹಿಡಿಯುವುದನ್ನು ಗಮನಿಸಿದ ಸದಸ್ಯ ಚಂದ್ರಶೇಖರ್ ಖಾರ್ವಿ, ಇದೆಂತಹ ಸಭ್ಯತೆ. ನಾಮನಿರ್ದೇಶಿತ ಸದಸ್ಯರು ಸದನದಲ್ಲಿ ಅಗೌರವ ತೋರುತ್ತಿದ್ದಾರೆ. ಇಂತಹ ಸಭೆಯಲ್ಲಿ ನಾವು ಕೂರಬೇಕಾ. ಗಂಭೀರ ಚರ್ಚೆ ನಡೆಯುತ್ತಿರುವಾಗ ವಿಡಿಯೋ ಮಾಡುವವರು ಎಂಥ ಸದಸ್ಯರು ಎಂದರು ವಾಗ್ದಾಳಿ ನಡೆಸಿದರು.

ಮಧ್ಯಪ್ರವೇಶಿಸಿದ ಅಧ್ಯಕ್ಷೆ ವೀಣಾ ಭಾಸ್ಕರ್, ವಿಡಿಯೋ ಮಾಡಬೇಡಿ ಎಂದು ಸೂಚಿಸಿದಾಗ ಸಭೆ ನಡೆಯುವಾಗ ವಿಡಿಯೋ ತೆಗೆಯಲಿಕ್ಕಿಲ್ಲ ಎಂದು ಕಾನೂನು ಮಾಡಿ ಎಂದು ನಾಮನಿರ್ದೇಶಿತ ಸದಸ್ಯೆ ಪುಷ್ಪಾ ಶೇಟ್ ವಾಗ್ವಾದಕ್ಕಿಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರಾದ ಚಂದ್ರಶೇಖರ್ ಖಾರ್ವಿ, ಚುನಾಯಿತ ಸದಸ್ಯರು ಹೇಳಿದ ಮೇಲೆಯೂ ನಾಮನಿರ್ದೇಶಿತ ಸದಸ್ಯರು ವಾಗ್ವಾದ ನಡೆಸುತ್ತಾರೆಂದರೆ ಈ ಸದನಕ್ಕೆ ಗೌರವ ಇಲ್ಲವೇ? ಕಳೆದ ಬಾರಿ ನಾನು ವಿಡಿಯೋ ಮಾಡಿದಾಗ ದೊಡ್ಡ ಮಟ್ಟದ ಚರ್ಚೆ ನಡೆದು ವಿಡಿಯೋ ಡಿಲೀಟ್ ಮಾಡಿಸಿದ್ದೀರಿ. ಈಗಲೂ ವಿಡಿಯೋ ಡಿಲೀಟ್ ಮಾಡಿಸಿ. ನಾಮನಿರ್ದೇಶಿತ ಸದಸ್ಯರ ಬಾಯಿ ಮುಚ್ಚಿಸಲು ನಿಮಗೆ ಸಾಧ್ಯವಾಗಿಲ್ಲವೆಂದರೆ ಏನು ಆಡಳಿತ ಕೊಡುತ್ತೀರಿ. ಇಂತಹ ಸಭೆಯಲ್ಲಿ ಕೂರಲು ನಮ್ಮಿಂದ ಸಾಧ್ಯವಿಲ್ಲ ಎಂದು ಸಭಾತ್ಯಾಗ ನಡೆಸಲು ಮುಂದಾದರು. ಇದಕ್ಕೆ ಹಿರಿಯ ಸದಸ್ಯೆ ದೇವಕಿ ಸಣ್ಣಯ್ಯ ಕೈಜೋಡಿಸಿದರು. ಆಡಳಿತ ಪಕ್ಷದ ಸದಸ್ಯರು ಸಭಾತ್ಯಾಗ ಮಾಡದಂತೆ ಮನವಿ ಮಾಡಿಕೊಂಡ ಮೇಲೆಯೂ ಇಬ್ಬರು ಸದಸ್ಯರು ಸಭೆಯಿಂದ ಹೊರನಡೆದರು.

ಬಳಿಕ ಮಾತನಾಡಿದ ಆಡಳಿತ ಪಕ್ಷದ ಹಿರಿಯ ಸದಸ್ಯ ಮೋಹನ್‍ದಾಸ್ ಶೆಣೈ, ಕಳೆದ ಬಾರಿ ಇದೇ ರೀತಿಯ ಒಂದು ಘಟನಾವಳಿ ನಡೆದಿತ್ತು ಬಿಟ್ಟರೆ ನನ್ನ ಅನುಭವದ ಪ್ರಕಾರ ಸದಸ್ಯರು ವಿಡಿಯೋ ಚಿತ್ರೀಕರಣ ಮಾಡಿದ ಘಟನೆ ನಡೆದಿಲ್ಲ. ಇದು ಸರಿಯಲ್ಲ. ಇಂತಹ ಘಟನೆಗಳಿಂದ ಚರ್ಚೆ ದಾರಿ ತಪ್ಪುತ್ತದೆ ವಿನಃ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ವೈಯಕ್ತಿಕ ಗಲಾಟೆಗಳನ್ನು ಸದನದೊಳಗೆ ತರುವುದು ಸರಿಯಲ್ಲ. ನಮ್ಮ ನಡತೆಗಳನ್ನು ಮಾಧ್ಯಮದ ಮೂಲಕ ಜನರು ಗಮನಿಸುತ್ತಾರೆ ಎಂದರು. ಬಳಿಕ ಹೊರಗೆ ಹೋಗಿ ಇಬ್ಬರೂ ಸದಸ್ಯರ ಮನವೊಲಿಸುವ ಮೂಲಕ ಹಿರಿಯ ಸದಸ್ಯ ಮೋಹನ್ ದಾಸ್ ಶೆಣೈ ಇಬ್ಬರನ್ನು ಸಭೆಗೆ ಕರೆತಂದರು. ಮತ್ತೆ ಅಭಿವೃದ್ದಿ ವಿಚಾರಗಳ ಬಗ್ಗೆ ಚರ್ಚೆ ಆರಂಭವಾಯಿತು.

ಹೆದ್ದಾರಿ ಅವ್ಯವಸ್ಥೆ: ಕೇಸು ದಾಖಲಿಸಲು ನಿರ್ಣಯ:
ಕಳೆದ 10 ವರ್ಷಗಳಿಂದ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆದರೆ ಇನ್ನೂ ಸಹ ನಗರಕ್ಕೆ ಮಾತ್ರ ಪ್ರವೇಶವೂ ಇಲ್ಲ, ನಿರ್ಗಮನವೂ ಇಲ್ಲದಂತಾಗಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಭೆಗೆ ಕರೆದರೂ ಬರುವುದಿಲ್ಲ. ನಮ್ಮ ಈ ಹಿಂದಿನ ನಿರ್ಣಯಗಳಿಗೂ ಬೆಲೆ ಇಲ್ಲ. ಮೇಲ್ಸೆತುವೆಯಾದರೂ ನಗರದ ಜನರಿಗೆ ಮಾತ್ರ ಇದರ ಪ್ರಯೋಜನ ಸಿಕ್ಕಿಲ್ಲ. ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಹಾಗೂ ನಿರ್ಲಕ್ಷ್ಯ ತೋರಿದ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ವಹಿಸಿಕೊಂಡ ನವಯುಗ ಸಂಸ್ಥೆ ವಿರುದ್ಧ ಐಪಿಸಿ ಸೆಕ್ಷನ್ 133 ರಡಿ ಕೇಸು ದಾಖಲಿಸಬೇಕು ಎಂದು ಸದಸ್ಯ ಗಿರೀಶ್ ಜಿಕೆ ಸಲಹೆ ನೀಡಿದರು. ಪ್ರಾಧಿಕಾರ ಹಾಗೂ ಗುತ್ತಿಗೆದಾರರ ವಿರುದ್ಧ ಐಪಿಸಿ ಸೆಕ್ಷನ್ 133 ರಡಿ ಕೇಸು ದಾಖಲಿಸಬೇಕು ಎನ್ನುವುದಾಗಿ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಯಿತು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ವಿಪಕ್ಷ ಸದಸ್ಯ ಚಂದ್ರಶೇಖರ್ ಖಾರ್ವಿ, ಕೇಸು ದಾಖಲಿಸುವ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ಇದರೊಂದಿಗೆ ನಾವೆಲ್ಲರೂ ಅಧ್ಯಕ್ಷರು, ಹಿರಿಯ ಸದಸ್ಯರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕು. ಆಗ ಮಾತ್ರ ನಮ್ಮ ಬೇಡಿಕೆ ಈಡೇರಬಹುದು. ಈ ಬಗ್ಗೆಯೂ ಗಮನಹರಿಸುವ ಎಂದರು. ಇದಕ್ಕೆ ಸದಸ್ಯರಾದ ಕೆ.ಜಿ. ನಿತ್ಯಾನಂದ, ದೇವಕಿ ಸಣ್ಣಯ್ಯ ಮತ್ತಿತರರು ಸಹಮತ ವ್ಯಕ್ತಪಡಿಸಿದರು. ನಾಮನಿರ್ದೇಶಿತ ಸದಸ್ಯೆ ಪುಷ್ಪಾ ಶೇಟ್ ಮಾತನಾಡಿ, ನಾವೆಲ್ಲರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕಚೇರಿಗೆ ತೆರಳಿ ಮುತ್ತಿಗೆ ಹಾಕುವ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪುರಸಭೆಯ ಕಟ್ಟಡದ ಪೈಂಟಿಂಗ್ ಕಾಮಗಾರಿಗೆ ಟೆಂಡರ್ ಕರೆಯದೇ, ಕಾಮಗಾರಿ ಮಾಡಿರುವುದಕ್ಕೆ ಸದಸ್ಯೆ ದೇವಕಿ ಸಣ್ಣಯ್ಯ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಚಂದ್ರಶೇಖರ್ ಖಾರ್ವಿ, ಸಂತೋಷ್ ಶೆಟ್ಟಿ, ಗಿರೀಶ್ ಜಿ.ಕೆ., ಪ್ರಭಾಕರ್ ಮಧ್ಯೆ ಚರ್ಚೆ ನಡೆಯಿತು. ಕೊನೆಗೆ ಇನ್ನು ಮುಂದಿನ ದಿನಗಳಲ್ಲಿ ಎಲ್ಲ ಕಾಮಗಾರಿಗೂ ಟೆಂಡರ್ ಕರೆದೇ ಕಾಮಗಾರಿ ಕೈಗೊಳ್ಳಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಪುರಸಭೆಯ ಮಾಜಿ ಉಪಾಧ್ಯಕ್ಷ 2 ಬಾರಿಯ ಸದಸ್ಯ, ವಕೀಲ ಗಡಾದ್ ರಾಮಕೃಷ್ಣ ರಾವ್ ಅವರಿಗೆ ಸಭೆಯಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ಮೂಲಕ ಆತ್ಮಕ್ಕೆ ಶಾಂತಿ ಕೋರಲಾಯಿತು. ಹಿರಿಯ ಸದಸ್ಯ ಮೋಹನ್‍ದಾಸ್ ಶೆಣೈ ನುಡಿನಮನ ಸಲ್ಲಿಸಿದರು.

ಅಧ್ಯಕ್ಷೆ ವೀಣಾ ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಕರ್ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.


Spread the love