Home Mangalorean News Kannada News ಮೋಗ್ಲಿಂಗ್ ಸ್ಮಾರಕ ನಿರ್ಮಾಣವಾಗಲಿ ; ಸದಾಶಿವ ಉಳ್ಳಾಲ್

ಮೋಗ್ಲಿಂಗ್ ಸ್ಮಾರಕ ನಿರ್ಮಾಣವಾಗಲಿ ; ಸದಾಶಿವ ಉಳ್ಳಾಲ್

Spread the love

ಮೋಗ್ಲಿಂಗ್ ಸ್ಮಾರಕ ನಿರ್ಮಾಣವಾಗಲಿ ; ಸದಾಶಿವ ಉಳ್ಳಾಲ್

ಮಂಗಳೂರು: ಕನ್ನಡದ ಪ್ರಥಮ ಪತ್ರಿಕೆ ‘ಮಂಗಳೂರ ಸಮಾಚಾರ’ ಮಂಗಳೂರಿನಲ್ಲಿ ಆರಂಭಗೊಂಡ ಹಿನ್ನೆಲೆಯಲ್ಲಿ ಪತ್ರಿಕೆಯ ಸ್ಥಾಪಕ ಸಂಪಾದಕ ಹರ್ಮನ್ ಮೋಗ್ಲಿಂಗ್ ಅವರ ಸ್ಮಾರಕ ಮಂಗಳೂರಿನಲ್ಲಿ ನಿರ್ಮಾಣವಾಗುವುದು ಅಗತ್ಯ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಅವರು ಅಭಿಪ್ರಾಯಪಟ್ಟರು.

ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಮಂಗಳೂರಿನ ಬಲ್ಮಠದ ಥೀಯೊಲಾಜಿಕಲ್ ಕಾಲೇಜು ಆವರಣದಲ್ಲಿ ಏರ್ಪಡಿಸಿದ ಸಂಪಾದಕ ಹರ್ಮನ್ ಮೋಗ್ಲಿಂಗ್ ಅವರ ಪ್ರತಿಮೆಗೆ ಗೌರವಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಮೊಗ್ಲಿಂಗ್ ಸ್ಮಾರಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ವಿಸ್ತೃತವಾದ ಸಮಾಲೋಚನಾ ಸಭೆ ನಡೆಸುವುದಾಗಿ ಸದಾಶಿವ ಉಳ್ಳಾಲ್ ಅವರು ಭರವಸೆ ನೀಡಿದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ, ನ್ಯಾಯಯುತ ಹಾಗೂ ಸಮಾನತೆಯ ಸಮಾಜ ನಿರ್ಮಾಣದಲ್ಲಿ ಪತ್ರಿಕಾರಂಗ ಪ್ರಮುಖ ಪಾತ್ರ ವಹಿಸಿದೆ. ಕರ್ನಾಟಕದಲ್ಲಿ ಪತ್ರಿಕೋದ್ಯಮ ಆರಂಭಿಸಿದ ಮೊಗ್ಲಿಂಗ್ ಅವರು ಮಂಗಳೂರಿಗೂ ಹಿರಿಮೆ‌ ತಂದಿದ್ದಾರೆ ಎಂದರು.

ಕರ್ನಾಟಕ ಥಿಯೋಲಾಜಿಕಲ್ ಕಾಲೇಜ್ ಪ್ರಿನ್ಸಿಪಾಲ್ ಡಾ. ಎಚ್.ಎಮ್. ವಾಟ್ಸನ್ ಅವರು ಮಾತನಾಡಿ, ಮಂಗಳೂರ ಸಮಾಚಾರ ಸಂಪಾದಕ ಮೋಗ್ಲಿಂಗ್ ಅವರ ಸ್ಮಾರಕ ಮಂಗಳೂರಿನಲ್ಲಿ ಶೀಘ್ರ ನಿರ್ಮಾಣವಾಗುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಶುಭಕೋರಿ ಮಾತನಾಡಿದರು. ಹಿರಿಯ ಪತ್ರಿಕಾ ಛಾಯಗ್ರಾಹಕ ವಿಶ್ವನಾಥ ಸುವರ್ಣ ಭಾಗವಹಿಸಿದ್ದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಮಿತಿ ಸದಸ್ಯರಾದ ಈಶ್ವರ್ ವಾರಣಾಸಿ, ಗಿರಿಧರ್ ಶೆಟ್ಟಿ, ಡೋನಾಲ್ಡ್ ಪಿಂಟೋ, ಹಮೀದ್ ವಿಟ್ಲ, ಶಿವಪ್ರಸಾದ್ ಆಲೆಟ್ಟಿ, ಗಣೇಶ್ ಕುಕ್ಕುದಡಿ, ಜಯಶ್ರೀ ಕೊಯಂಗೋಡಿ ಮೊದಲಾದವರು ಉಪಸ್ಥಿತರಿದ್ದರು.

ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.


Spread the love

Exit mobile version