
ಮೋದಿ ನಾಯಕತ್ವದಲ್ಲಿರುವ ನಾವು ಭಾಗ್ಯಶಾಲಿಗಳು: ಜೆ.ಪಿ.ನಡ್ಡಾ
ಕುಂದಾಪುರ: ಭವಿಷ್ಯದ ದಿನಗಳಲ್ಲಿ ಜಾಗತಿಕ ನಾಯಕತ್ವ ವಹಿಸುವ ಬಿಜೆಪಿ ದೇಶಕ್ಕೆ ಅನಿವಾರ್ಯ ಎನ್ನುವ ಭಾವನೆಗಳು ಇದೆ. ನಾವೇನು ಹೇಳುತ್ತೇವೆಯೋ ಅದನ್ನು ಮಾಡುತ್ತೇವೆ ಎನ್ನುವ ಬದ್ಧತೆ ಇದೆ. ಬಿಜೆಪಿಗೆ ಮಾರ್ಗದರ್ಶಕರಾಗಿದ್ದ ಡಾ.ವಿ.ಎಸ್.ಆಚಾರ್ಯ, ಎ.ಜಿ.ಕೊಡ್ಗಿ ಎಂದೆಂದಿಗೂ ಸ್ಮರಣಿಯರು. ನರೇಂದ್ರ ಮೋದಿಯಂತಹ ಬದ್ಧತೆಯುಳ್ಳ ನಾಯಕರ ಆಡಳಿತದ ಅಮೃತ ಕಾಲಘಟ್ಟದಲ್ಲಿ ಇರುವ ನಾವುಗಳು ಭಾಗ್ಯಶಾಲಿಗಳು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಳ್ಳಿಕಟ್ಟೆಯ ನಗು ಸಿಟಿ ಮೈದಾನದಲ್ಲಿ ಸೋಮವಾರ ಬೈಂದೂರು ಬಿಜೆಪಿ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಮೋದಿಯವರ ಇಚ್ಛಾ ಶಕ್ತಿಯಿಂದಾಗಿ ರಷ್ಯಾ ಹಾಗೂ ಉಕ್ರೇನ್ ಯುದ್ಧ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ 25,200 ಭಾರತೀಯರನ್ನು ಕ್ಷೇಮವಾಗಿ ತಾಯ್ನಾಡಿಗೆ ಕರೆತರಲಾಗಿದೆ. ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಶೇ.65-75ರಷ್ಟು ವ್ಯಾಕ್ಸಿನ್ ನೀಡಿಕೆಯಾಗಿದ್ದರೇ, ಭಾರತದಲ್ಲಿ 220 ಕೋಟಿ ರೂ. ವೆಚ್ಚ ಮಾಡಿ ಪ್ರಥಮ, ದ್ವಿತೀಯ ಹಾಗೂ ಬೂಸ್ಟರ್ ಡೋಸ್ಗಳನ್ನು ನೀಡಿದ್ದರಿಂದಾಗಿ ಜನ ಮಾಸ್ಕ್ ಇಲ್ಲದೆ ನಿರ್ಭಿತಿಯಿಂದ ಇದ್ದಾರೆ. ವಿರೋಧ ಪಕ್ಷದ ಹೇಳಿಕೆ ಹಾಗೂ ಅಪಪ್ರಚಾರದಿಂದ ಯಾರು ವಿಚಲಿತರಾಗಬೇಕಿಲ್ಲ. ಪಿಎಫ್ಐ, ಕೆಎಫ್ಡಿಯಂತಹ ಸಮಾಜಘಾತಕ ಶಕ್ತಿಗಳ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿರುವ ಕಾಂಗ್ರೆಸ್ ಪಕ್ಷ, ಭ್ರಷ್ಟಾಚಾರವನ್ನು ಪೆÇ್ರೀತ್ಸಾಹಿಸುತ್ತಾ ಬಂದಿರುವುದರಿಂದ ಲೋಕಾಯುಕ್ತವನ್ನು ಬಲಹೀನವನ್ನಾಗಿಸಿತ್ತು. ದ್ವೇಷಪೂರಿತ ಹಾಗೂ ಒಡೆದು ಆಳುವ ನೀತಿಯನ್ನೆ ಹೊಂದಿರುವ ದೇಶದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿ ಬಿಜೆಪಿಯನ್ನು ಮುನ್ನೆಡೆಸಿದ್ದರಿಂದಾಗಿ ದೇಶ ಇಂದು ಜಾಗತಿಕ ಮಟ್ಟದಲ್ಲಿ ಗೌರವವನ್ನು ಪಡೆದುಕೊಳ್ಳುತ್ತಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ, ನಾನು ಹಿಂದೂ. ಹಿಂದೂತ್ವವಾದಿ ಅಲ್ಲ. ಹಿಂದೂತ್ವವಾದಿಗಳೆಲ್ಲರೂ ಭಯೋತ್ಪಾದಕರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಹಿಂದೂ ಎಂದರೆ ದೇಹ. ಹಿಂದೂತ್ವ ಎಂದರೆ ಆತ್ಮ ಅಥವಾ ಜೀವ. ದೇಹಕ್ಕೆ ಜೀವ ಇದ್ದರೆ ಮಾತ್ರ ಬೆಲೆ. ನಿಮಗೆ ದೇಹ ಮಾತ್ರ ಇದೆ. ಜೀವ ಇಲ್ಲ. ದೇಹದಿಂದ ಜೀವ ಹೋದರೆ ಯಾರೂ ಕೂಡ ಮೂರುಕಾಸಿನ ಬೆಲೆ ಕೊಡೋದಿಲ್ಲ. ಹೆಚ್ಚು ದಿನವೂ ಇಟ್ಟುಕೊಳ್ಳುವುದಿಲ್ಲ. ಸ್ಮಾಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಹಾಗೆಯೇ ಕಾಂಗ್ರೆಸ್ ಕೂಡ ಊರಿನೊಳಗೆ ಇಟ್ಟುಕೊಳ್ಳಲು ಯೋಗ್ಯವಾಗಿರುವ ಪಕ್ಷ ಅಲ್ಲ. ಕಾಂಗ್ರೆಸ್ ಅನ್ನು ರಾಜಕೀಯವಾಗಿ ಸ್ಮಶಾನಕ್ಕೆ ಕಳುಹಿಸುವ ಕೆಲಸವನ್ನು ನೀವೆಲ್ಲರೂ ಮಾಡಬೇಕು ಎಂದರು.
ಈಗಿರುವುದು ಸ್ವತಂತ್ರಪೂರ್ವದ ಕಾಂಗ್ರೆಸ್ ಅಲ್ಲ. ಇದು ಇಟೆಲಿಯ ಕಾಂಗ್ರೆಸ್. ಚೀನಾದೊಂದಿಗೆ ಸಂಬಂಧ ಇಟ್ಟುಕೊಂಡು ದೇಶದ ವಿರುದ್ದ ಕೆಲಸ ಮಾಡುವ, ಭಾರತವನ್ನು ದುರ್ಬಲಗೊಳಿಸುವ ಸಂಚು ರೂಪಿಸುತ್ತಿರುವ ಕಾಂಗ್ರೆಸ್. ಅವರದೆ ಪಕ್ಷದ ದಲಿತ ಶಾಸಕರ ಮನೆಗೆ ಬೆಂಕಿ ಹಾಕಿರುವ ಪ್ರಕರಣವನ್ನು ಖಂಡಿಸುವ ಯೋಗ್ಯತೆಯೂ ಸಿದ್ದರಾಮಯ್ಯನವರಿಗಿರಲಿಲ್ಲ. ಇದನ್ನೆಲ್ಲಾ ಗಮನಿಸಿದರೆ ಸಿದ್ದರಾಮಯ್ಯನವರ ಹುಟ್ಟಿಗೆ ಬೆಲೆ ಇದೆಯಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸಿಟಿ ರವಿ ವಾಕ್ ಪ್ರಹಾರವನ್ನೇ ನಡೆಸಿದರು.
ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಕಾಶ್ಮೀರದಲ್ಲಿ ರಾಷ್ಟ್ರ ಧ್ವಜ ಹಾರಿಸುವಂತಿರಲಿಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲೂ ಇದೇ ಪರಿಸ್ಥಿತಿ ತಲೆದೋರಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಪರಿವರ್ತನೆ ಮಾಡಿದ್ದೇವೆ. ರೈತ ಪರವಾದ ಪ್ರತ್ಯೇಕ ಬಜೆಟ್ ನೀಡಿದ ಹೆಗ್ಗಳಿಕೆಯೂ ಬಿಜೆಪಿ ಪಕ್ಷಕ್ಕೆ ಇದೆ. ಮುಖ್ಯಮಂತ್ರಿ ಬೊಮ್ಮಾಯಿ ಮಂಡಿಸಿರುವ ಬಜೆಟ್ನಲ್ಲಿ ಮಹಿಳೆಯರಿಗೆ 500 ರೂ. ನೀಡುವ, ಮೀನುಗಾರಿಕೆಗೆ ಉತ್ತೇಜನ ನೀಡುವ, ವಿದ್ಯಾರ್ಥಿಗಳಿಗೆ, ಕೃಷಿಕರಿಗೆ, ರೈತರಿಗೆ ಹಾಗೂ ಬಡವರ ಅಭಿವೃಧ್ಧಿಗೆ ಪೂರಕವಾಗಿರುವ ಹಲವು ಅಂಶಗಳು ಇದೆ. ಇಂದು ಇಡೀ ರಾಜ್ಯದಲ್ಲಿ ಕೇಸರಿ ಅಲೆ ಎದ್ದು ನಿಂತಿದೆ. ಬೈಂದೂರಿನ ವಿಜಯ ಸಂಕಲ್ಪ ಯಾತ್ರೆ ವಿಜಯ ಯಾತ್ರೆಯಾಗಿ ಬದಲಾಗಿದೆ. ನಾವೆಲ್ಲರೂ ದೇಶದಲ್ಲಿ ಆರಾಮವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ವೈಖರಿ ಕಾರಣ. ರಾಜ್ಯದಲ್ಲಿ ನಮ್ಮ ಪರವಾದ ಅಲೆ ಇದೆ. ಖಂಡಿತವಾಗಿಯೂ ನಾವು ಮತ್ತೆ ಅಧಿಕಾರದ ಗದ್ದುಗೆಗೆ ಏರುತ್ತೇವೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಿರುದ್ಯೋಗಿಗಳಾಗುತ್ತಾರೆ ಎಂದು ವ್ಯಂಗ್ಯವಾಡಿದರು.
ಹೊಸಾಡು ಶಕ್ತಿ ಕೇಂದ್ರದ ಬೂತ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶಾಲು ಹೊದಿಸಿ ಗೌರವಿಸಿದರು. ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ಶಾಸಕ ಸುಕುಮಾರ ಶೆಟ್ಟಿಯವರ ಬೈಂದೂರು ಅಭಿವೃದ್ದಿಯ ಕುರಿತಾದ ಯೋಜನೆಗಳ ಕೈಪಿಡಿಯನ್ನು ಜೆ.ಪಿ ನಡ್ಡಾ ಬಿಡುಗಡೆಗೊಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿದರು.
ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಕಿದಿಯೂರು ಉದಯ್ ಕುಮಾರ ಶೆಟ್ಟಿ, ಶಾಸಕ ಲಾಲಾಜಿ ಮೆಂಡನ್, ವಿಧಾನಪರಿಷತ್ ಸದಸ್ಯ ನವೀನ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಕಿಶೋರ ಕುಮಾರ ಬಿ, ಸದಾನಂದ ಉಪ್ಪಿನಕುದ್ರು, ಶರತ್ ಕುಮಾರ ಶೆಟ್ಟಿ ಉಪ್ಪುಂದ, ಉಮೇಶ್ ಶೆಟ್ಟಿ ಕಲ್ಗದ್ದೆ, ಆನಂದ ಖಾರ್ವಿ, ರವಿ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರೀಯದರ್ಶಿನಿ ಬೆಸ್ಕೂರ್ ನಿರೂಪಿಸಿದರು, ಪ್ರಕಾಶ್ ಪೂಜಾರಿ ಜಡ್ಡು ವಂದಿಸಿದರು.