ಮೋದಿ ನೇತೃತ್ವದ ಬಿಜೆಪಿ ಸರಕಾರ ಕಾರ್ಪೋರೆಟ್ ಕಂಪೆನಿಗಳ ಏಜೆಂಟ್ – ವಿನಯ್ ಕುಮಾರ್ ಸೊರಕೆ

Spread the love

ಮೋದಿ ನೇತೃತ್ವದ ಬಿಜೆಪಿ ಸರಕಾರ ಕಾರ್ಪೋರೆಟ್ ಕಂಪೆನಿಗಳ ಏಜೆಂಟ್ – ವಿನಯ್ ಕುಮಾರ್ ಸೊರಕೆ

ಉಡುಪಿ: ಕಾಂಗ್ರೆಸ್ ಸರ್ಕಾರ ಮಾಡಿದ ಭೂ ಸುಧಾರಣೆ ಕಾನೂನಿನಿಂದ ಕೃಷಿಕರು, ರೈತರು ಹಾಗೂ ಬಡವರು ಇಂದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರೆ ಅದೇ ಕಾನೂನನ್ನು ಬದಲಾವಣೆ ಮಾಡಬೇಕು ಎನ್ನುವ ಮೂಲಕ ವ್ಯಾಪಾರಸ್ಥರು, ಕಾರ್ಪೋರೆಟ್ ಕಂಪೆನಿಗಳಿಗೆ ಅನುಕೂಲ ಕಲ್ಪಿಸುವ ಮೂಲಕ ಕಾರ್ಪೋರೆಟ್ ಕಂಪೆನಿಗಳ ಏಜೆಂಟ್ ಆಗಿ ಈಗಿನ ಮೋದಿ ನೇತೃತ್ವದ ಬಿಜೆಪಿ ಸರಕಾರ ವರ್ತಿಸುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಅವರು ಮಂಗಳವಾರ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವತಿಯಿಂದಬಡಪಾಯಿ ಬೀಡಿ ಕಾರ್ಮಿಕರ ಜೀವನಕ್ಕೆ ಮಾರಕ ವಾಗಲಿರುವ ಕಾಯ್ದೆಯನ್ನು ತರಲು ಹೊರಟಿರುವ ಕೇಂದ್ರ ಸರಕಾರದ ವಿರುದ್ದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಕರ್ನಾಟಕ ರಾಜ್ಯದ ಅವಳಿ ಕರಾವಳಿ ಜಿಲ್ಲೆಗಳಾದ ಮಂಗಳೂರು- ಉಡುಪಿ ಜಿಲ್ಲೆಗಳ ಆರ್ಥಿಕತೆಯ ಪ್ರಮುಖ ಮೂಲ ಬೀಡಿ ಉದ್ಯಮವಾಗಿದೆ. ಈ ಜಿಲ್ಲೆಗಳಲ್ಲಿ ಸರಿಸುಮಾರು 2.5 ಲಕ್ಷ ಬೀಡಿ ಕಾರ್ಮಿಕರಿದ್ದರೆ, ಇವರಲ್ಲಿ ಬಹುತೇಕ ಮಹಿಳೆಯರು. ತಮ್ಮ ಕುಟುಂಬದಲ್ಲಿ ಸಂಸಾರದ ಜವಾಬ್ದಾರಿ ನಿರ್ವಹಿಸುವವರು ಅವರೇ ಅಗಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಒಂಟಿ ಮಹಿಳೆಯರೂ ಇದ್ದಾರೆ. ಇವರ ಪುರ್ನವಸತಿಗೆ ಕಾರ್ಯಕ್ರಮ ರೂಪಿಸದೆ ಇದನ್ನು ಜಾರಿ ಮಾಡಿದಲ್ಲಿ ಈ ಭಾಗದಲ್ಲಿ ಜನತೆಯ ಬದುಕು ನರಕಮಯವಾಗಲಿದೆ.

ಬೀಡಿ ಉದ್ಯಮವನ್ನೇ ಅವಲಂಬಿಸಿಕೊಂಡಿರುವವ ಸಾವಿರಾರು ಕುಟುಂಬಗಳು ಹಾಗೂ ತುಂಡು ದರ ಆಧಾರದಲ್ಲಿ ಬೀಡಿಗಳ ಸುತ್ತುವಿಕೆಯಲ್ಲಿ ತೊಡಗಿಸಿಕೊಂಡಿರುವ ಬೀಡಿ ಕಾರ್ಮಿಕರ ಜೀವನಾಧಾರವಾಗಿದ್ದ ನಿಯಮಿತ ಆದಾಯಕ್ಕೆ ಸರ್ಕಾರವು ಕೊಡಲಿ ಏಟು ನೀಡುವಂತೆ ಕಾಯಿದೆಗೆ ತಿದ್ದುಪಡಿ ಮಾಡಿರುವುದು ದುರದೃಷ್ಟಕರ ಮತ್ತು ಖಂಡನೀಯವಾಗಿದೆ. ಕೋಟ್ಪಾ 2003 ರ ಕಾಯಿದೆಗೆ ತಿದ್ದುಪಡಿಗಳನ್ನು ಮಾಡಿರುವುದರಿಂದ ಬೀಡಿ ಉತ್ಪಾದನಾ ಚಟುವಟಿಕೆಯಲ್ಲಿ ತೀವ್ರ ಕುಂಠಿತವಾಗಲು ಕಾರಣವಾಗಿದ್ದು ಬೀಡಿ ಕಾರ್ಮಿಕರ ಮತ್ತವರ ಅವಲಂಬಿತ ಕುಟುಂಬಗಳ ಮೇಲೆ ನೇರವಾಗಿ ಪರಣಾಮ ಬೀರಲಿರುವುದರಿಂದ ಕಾರ್ಮಿಕರ ಬದುಕು ಸಂಪೂರ್ಣ ದುಸ್ತರವಾಗಲಿದೆ. ಆದ್ದರಿಂದ ಉದ್ದೇಶಿತ ತಿದ್ದುಪಡಿಗಳನ್ನು ಕೈಬಿಟ್ಟು ಬೀಡಿ ಕಾರ್ಮಿಕರ ಬದುಕಿಗೆ ನೆರವಾಗುವಂತೆ ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ರೈತ ವಿರೋಧಿ, ಕೃಷಿ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿದ್ದಾರೆ. ಎಪಿಎಂಸಿ, ಲೇಬರ್ ಆ್ಯಕ್ಟ್ ಗೆ ತಿದ್ದುಪಡಿ ತಂದಿದ್ದಾರೆ. ಕರ್ನಾಟಕದಲ್ಲೂ ಲೇಬರ್ ಆ್ಯಕ್ಟ್, ಭೂ ಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಕಾನೂನುಗಳಿಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ. ಸರ್ಕಾರ, ಅಂಬಾನಿ, ಅದಾನಿಯ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದರು. ಈ ಹೋರಾಟವನ್ನು ಕೇವಲ ಕಾಪುವಿಗೆ ಸೀಮಿತಗೊಳಿಸದೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರತಿಭಟನಾ ಸಭೆಗೂ ಮುನ್ನ ಕಾಪು ಶ್ರಿ ಜನಾರ್ದನ ದೇವಸ್ಥಾನದಿಂದ ಕಾಪು ಪೇಟೆಯ ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಸಭೆಯ ಬಳಿಕ ತಹಶೀಲ್ದಾರ್ ಮೂಲಕ ರಾಜ್ಯದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ನಾಯಕರುಗಳಾದ ನವೀನ್ ಚಂದ್ರ ಎಸ್ ಸುವರ್ಣ, ನವೀನ್ ಚಂದ್ರ ಶೆಟ್ಟಿ, ಸರಸು ಡಿ ಬಂಗೇರಾ, ಐಡಾ ಗಿಬ್ಬಾ ಡಿಸೋಜಾ, ಸುನೀಲ್ ಬಂಗೇರಾ, ಪ್ರಭಾಕರ ಆಚಾರ್ಯ, ಸಿ ಐಟಿಯು ನಾಯಕರಾದ ಮಹಾಬಲ ವಡೇರಹೋಬಳಿ, ಕವಿರಾಜ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love