ಮೋದಿ ಭೇಟಿ ಹಿನ್ನಲೆ: ಜಿಲ್ಲೆಯಲ್ಲಿ ರಜೆ ಘೋಷಣೆಗೆ ಜಿಲ್ಲಾಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ
ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ ಆಯೋಜಿಸಿರುವ ಬೃಹತ್ ಗೀತೋತ್ಸವ ಪ್ರಯುಕ್ತ ನವೆಂಬರ್ 28 ರಂದು ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಉಡುಪಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಅಂದು ಸ್ಥಳೀಯ ರಜೆ ಘೋಷಣೆ ಮಾಡುವಂತೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ದೇಶದ ಪ್ರಧಾನಿಯೋರ್ವರು ಸರಿಸುಮಾರು ಮೂರು ದಶಕಗಳ ಬಳಿಕ (ಚುನಾವಣಾ ಪ್ರಚಾರವನ್ನು ಹೊರತುಪಡಿಸಿ) ಉಡುಪಿಗೆ ಭೇಟಿ ನೀಡುತ್ತಿರುವುದು ಜಿಲ್ಲೆಗೆ ಸಂಭ್ರಮದ ವಿಚಾರವಾಗಿದೆ.
ಜಿಲ್ಲಾಡಳಿತ ಸ್ಥಳೀಯ ರಜೆ ನೀಡಿದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನತೆ ಭಾಗಿಯಾಗಲು ಅನುಕೂಲವಾಗಲಿದೆ.
ಪ್ರಧಾನಮಂತ್ರಿಗಳ ಭೇಟಿ ಸಮಯದಲ್ಲಿ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ವಾಹನಗಳ ಸಂಚಾರ ಮತ್ತು ಸಾರ್ವಜನಿಕ ಓಡಾಟದ ನಿರ್ಬಂಧವಿರುವ ಹಿನ್ನೆಲೆಯಲ್ಲಿ 28.11.2025 ರ ಶುಕ್ರವಾರದಂದು ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಅಂಗನವಾಡಿ, ಶಾಲಾ-ಕಾಲೇಜು ಹಾಗೂ ಸರಕಾರಿ ಕಛೇರಿಗಳೂ ಸೇರಿದಂತೆ ಜಿಲ್ಲಾದ್ಯಂತ ಒಂದು ದಿನದ ಸಾರ್ವತ್ರಿಕ ಸ್ಥಳೀಯ ರಜೆ ಘೋಷಿಸಬೇಕೆಂದು ಯಶ್ ಪಾಲ್ ಸುವರ್ಣ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
