ಮೋದಿ ಮಂಗಳೂರು ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ? – ಸಿದ್ದರಾಮಯ್ಯ

Spread the love

ಮೋದಿ ಮಂಗಳೂರು ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ? – ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಂಗಳೂರು ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ? ಎನ್ನುವುದನ್ನು ತಮ್ಮ ಇಂದಿನ ಭಾಷಣದಲ್ಲಿ ಉತ್ತರ ನೀಡುವಂತೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಸನ್ಮಾನ್ಯ ಮೋದಿಯವರೇ, ದಕ್ಷಿಣ ಕನ್ನಡದ ಉದ್ಯಮ ಶೀಲ ಹಿರಿಯರು  ಸಿಂಡಿಕೇಟ್, ಕಾರ್ಪೋರೇಷನ್, ವಿಜಯಾ, ಕೆನರಾ ಮತ್ತು ಕರ್ನಾಟಕ ಹೀಗೆ ಐದು ಬ್ಯಾಂಕ್ ಗಳನ್ನು ಹುಟ್ಟುಹಾಕಿದ್ದರು. ನೀವು ಇವುಗಳಲ್ಲಿ ಮೂರು ಬ್ಯಾಂಕುಗಳ ನಾಮಾವಶೇಷ ಮಾಡಿದ್ದೀರಿ. ಪ್ರಧಾನಿಯವರೇ, ನಿಮ್ಮ ನಡೆ ಈ ಅಮರವೀರರಿಗೆ ಬಗೆದ ದ್ರೋಹವಲ್ಲವೇ? ಇದು ವಿಕಾಸವೋ? ವಿನಾಶವೋ? ಎಂದು ಪ್ರಶ್ನಿಸಿದ್ದಾರೆ

ಬಜ್ಪೆ ವಿಮಾನ ನಿಲ್ದಾಣ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಕೊಡುಗೆ.(25-12-1971) ಇದು ಸಂಸದ ಯು.ಶ್ರೀನಿವಾಸ ಮಲ್ಯ ಪ್ರಯತ್ನದ ಫಲ. ಈ ವಿಮಾನ ನಿಲ್ದಾಣವನ್ನು ಉದ್ಯಮಿ ಮಿತ್ರ ಅದಾನಿಯವರಿಗೆ ಅರ್ಪಿಸಿದ್ದು (20-10-2020) ಪ್ರಧಾನಿ ನರೇಂದ್ರ ಮೋದಿ. ನವಮಂಗಳೂರು ಬಂದರು ಮಾಜಿ ಪ್ರಧಾನಿ ಇಂದಿರಾಗಾಂಧಿ ಕೊಡುಗೆ (1975). ಇದು ಸಂಸದ ಯು.ಶ್ರೀನಿವಾಸ ಮಲ್ಯ ಪ್ರಯತ್ನದ ಫಲ ಆದರೆ ನವಮಂಗಳೂರು ಬಂದರನ್ನು ಉದ್ಯಮಿ ಮಿತ್ರ ಅದಾನಿಯವರಿಗೆ ಹಂತಹಂತವಾಗಿ ಮಾರುತ್ತಿರುವುದು ಪ್ರಧಾನಿ ನರೇಂದ್ರ ಮೋದಿ.  ಬಜ್ಪೆ ವಿಮಾನ ನಿಲ್ದಾಣ, ಎನ್ ಎಂಪಿಟಿ, ಎನ್ ಎಚ್-66, ರೀಜನಲ್ ಎಂಜನಿಯರಿಂಗ್ ಕಾಲೇಜ್, ಎಂಸಿಎಫ್-ಇವೆಲ್ಲ ಕಾಂಗ್ರೆಸ್ ಸಂಸದರ ಕೊಡುಗೆ. ಆದರೆ ಬಿಜೆಪಿ ಸಂಸದ ನಳಿನ್ ಕುಮಾರ ಕೊಡುಗೆ ಏನು? ಮಳೆಯಲ್ಲಿ ಮುಳುಗುವ ಮಂಗಳೂರು? ಕೋಮುದ್ವೇಷದ ಬೆಂಕಿಯಲ್ಲಿ ಬೇಯುತ್ತಿರುವ ಮಂಗಳೂರು? ಇದು ವಿಕಾಸವೋ? ವಿನಾಶನೋ? ಎನ್ನುವುದನ್ನು ಸ್ಪಷ್ಟಪಡಿಸಬೇಕು

ದಕ್ಷಿಣ ಕನ್ನಡದ ವಿಕಾಸ ಪುರುಷರು ಕಾಂಗ್ರೆಸ್ ಸಂಸದರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯ, ಕೆಮ್ತೂರು ಕಾಂತಪ್ಪ ಶೆಟ್ಟಿ ಮತ್ತು ಬೋಳಾರ ಜನಾರ್ಧನ ಪೂಜಾರಿ ಆದರೆ ದಕ್ಷಿಣ ಕನ್ನಡದ ವಿನಾಶ ಪುರುಷ- ಬಿಜೆಪಿ ಸಂಸದ ನಳಿನ್ ಕುಮಾರ ಕಟೀಲ್ ಆಗಿದ್ದಾರೆ. ಜೂನ್ ತಿಂಗಳೊಂದರಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದುವರೆ ಕೋಟಿ ಬೆಲೆಯ ಮಾದಕದ್ರವ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾದಕದ್ರವ್ಯ ಸೇವನೆಯಲ್ಲಿ ದೇಶದಲ್ಲಿಯೇ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದೆ.

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿದೆ. ಹೆಜ್ಜೆಹೆಜ್ಜೆಗೂ ಗುಂಡಿಬಿದ್ದ ರಸ್ತೆಗಳು, ಕುಸಿದು ಬಿದ್ದಿರುವ ಮನೆಗಳು, ನೆರೆಯಲ್ಲಿ ಕೊಚ್ಚಿಹೋದ ರೈತರ ಬೆಳೆಗಳು ಎದ್ದು ಕಾಣುತ್ತಿದೆ. ಪ್ರಧಾನಿ ಭೇಟಿಗಾಗಿ ಮಳೆ ಹುಳುಕನ್ನು ಮುಚ್ಚಿಟ್ಟು ರಸ್ತೆಗಳಿಗೆ ತೇಪೆ ಹಾಕಲಾಗಿದೆ

ಕಳೆದ ಮೂರು ವರ್ಷಗಳಲ್ಲಿ ಕಡಲ್ಕೊರೆತ ತಡೆಗೆ ರಾಜ್ಯ ಸರ್ಕಾರ ಖರ್ಚು ಮಾಡಿರುವ ಹಣ ಅಂದಾಜು ರೂ.250 ಕೋಟಿಯಾಗಿದ್ದು, ಇದರಲ್ಲಿ 40% ಜನಪ್ರತಿನಿಧಿಗಳ ಜೇಬಿಗೆ, 60% ಕಡಲ ನೀರಿಗೆ ಹಾಕಿದ್ದು ಕಡಲ್ಕೊರೆತ ಹಾಗೆಯೇ ಮುಂದುವರಿದಿದೆ. ಕರಾವಳಿ ಮೀನುಗಾರರ ಮೇಲೆ ಸಿಆರ್ ಜೆಡ್, ಸಿಎಂ ಜೆಡ್ ನಿಯಮಾವಳಿಗಳ ಹೇರಿಕೆ ಮಾಡಿದ್ದು, ಪ್ರವಾಸೋದ್ಯಮದ ಹೆಸರಲ್ಲಿ ರೆಸಾರ್ಟ್, ಥೀಮ್ ಪಾರ್ಕ್ ಗಳಿಗೆ ಮುಕ್ತ ಪರವಾನಿಗೆ ನೀಡಲಾಗುತ್ತಿದೆ.

48 ಕಿ.ಮೀ. ಅಂತರದಲ್ಲಿ ಬ್ರಹ್ಮರಕೂಟ್ಲು, ಸುರತ್ಕಲ್, ತಲಪಾಡಿ ಮತ್ತು ಹೆಜಮಾಡಿಗಳಲ್ಲಿ 4 ನಿಯಮಬಾಹಿರ ಟೋಲ್ ಗೇಟ್ ಗಳು ಕಾರ್ಯಾಚರಿಸುತ್ತಿದ್ದು, ಇದರಿಂದ ವಾಹನ ಸಂಚಾರಿಗಳ ಜೇಬು ಖಾಲಿಯಾಗುತ್ತಿದೆ. ಆದರೆ ಅಕ್ರಮದ ರೂವಾರಿಗಳಾದ ಬಿಜೆಪಿ ಸಂಸದರು ಮತ್ತು ಶಾಸಕರ ಜೇಬು ಭರ್ತಿಯಾಗುತ್ತಿದೆ ಇದು ವಿಕಾಸನೋ? ವಿನಾಶನೋ? ಎನ್ನುವುದನ್ನು ಮೋದಿಯವರು ಜನತೆ ಸ್ಪಷ್ಟಪಡಿಸಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.


Spread the love