ಮೋದಿ ಯೋಜನೆಗಳು ಘೋಷಣೆಗೆ ಮಾತ್ರ ಸೀಮಿತ: ಮಾಜಿ ಸಂಸದ ತಪನ್ ಸೇನ್

Spread the love

ಮೋದಿ ಯೋಜನೆಗಳು ಘೋಷಣೆಗೆ ಮಾತ್ರ ಸೀಮಿತ: ಮಾಜಿ ಸಂಸದ ತಪನ್ ಸೇನ್

ಕುಂದಾಪುರ: ಆತ್ಮನಿರ್ಭರ ಸೇರಿದಂತೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳು ಕೇವಲ ಪ್ರಚಾರ ಹಾಗೂ ಘೋಷಣೆಗೆ ಮಾತ್ರ ಸಿಮೀತವಾಗಿದೆ. ಬಂಡವಾಳಶಾಹಿಗಳ ಹಿತರಕ್ಷಣೆಯನ್ನು ಮಾಡುತ್ತಿರುವ ಇಂತಹದೊಂದು ಜನವಿರೋಧಿ ಸರ್ಕಾರ ದೇಶದಲ್ಲಿ ಹಿಂದೆಂದೂ ಬಂದಿಲ್ಲ ಎಂದು ಸಿಐಟಿಯು ರಾಷ್ಟ್ರೀಯ ಪ್ರ.ಕಾರ್ಯದರ್ಶಿ, ಮಾಜಿ ಸಂಸದ ತಪನ್ ಸೇನ್ ಹೇಳಿದರು.

ಕಳೆದ ಮೂರು ದಿನಗಳಿಂದ ಕಾರ್ಮಿಕರ ಐಕ್ಯತೆ-ಜನತೆಯ ಸೌಹಾರ್ದತೆಗಾಗಿ ನಡೆದ 15 ನೇ ಸಿಐಟಿಯು ರಾಜ್ಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, ಜನಸಾಮಾನ್ಯರ ತೆರಿಗೆ ಹಣವನ್ನು ಬಂಡವಾಳಶಾಹಿಗಳ ಜೇಬಿಗೆ ತುಂಬುತ್ತಿರುವ ಆಡಳಿತಾಶಾಹಿ ಸರ್ಕಾರದ ನೀತಿ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕು ಎಂದವರು ಕರೆ ನೀಡಿದರು.

ಸಿಐಟಿಯು ರಾಜ್ಯ ಪ್ರ.ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ರಾಜ್ಯದ ಬಿಜೆಪಿ ಸರ್ಕಾರದಿಂದ ರಾಜ್ಯದ ಜನರ ನಿರೀಕ್ಷೆಗಳು ಹುಸಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ, ಹಣ ಹಾಗೂ ಆಮಿಷ ನೀಡಿ ಜನರನ್ನು ಕರೆತರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ, ಸ್ವಯಂಪ್ರೇರಿತರಾಗಿ ಸಾವಿರಾರು ಜನ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಕಾರ್ಮಿಕ ಸಂಘಟನೆಯ ಐಕ್ಯತೆಯನ್ನು ತೋರಿಸಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಕಾರ್ಮಿಕ ಸಂಘಟನೆಗಳು ಐಕ್ಯತೆಯ ಬೆಳಕಿನಲ್ಲಿ ನಮ್ಮ ಹಕ್ಕುಗಳನ್ನು ಪಡೆಯಲು ಅವಿಶ್ರಾಂತ ಹೋರಾಟ ನಡೆಸಬೇಕಾಗಿದೆ ಎಂದರು.

ಸಿಐಟಿಯು ರಾಷ್ಟ್ರೀಯ ನಾಯಕರಾದ ಕೆ.ಎನ್.ಉಮೇಶ್, ವಿಜೆಕೆ ನಾಯರ್, ಕೆ ಎನ್ ಉಮೇಶ್, ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಶಂಕರ್, ಕೋಶಾಧಿಕಾರಿ ಎಚ್.ನರಸಿಂಹ, ವಿ. ಚಂದ್ರಶೇಖರ್, ಮಹಾಬಲ ವಡೇರಹೋಬಳಿ, ಬಿಲ್ಕೀಸ್ ಭಾನು, ವೆಂಕಟೇಶ್ ಕೋಣಿ, ಶೀಲಾವತಿ ಪಡುಕೋಣೆ, ರಾಜು ದೇವಾಡಿಗ ಇದ್ದರು.

ಸ್ವಾಗತ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು, ಪ್ರ.ಕಾರ್ಯದರ್ಶಿ ಸುರೇಶ ಕಲ್ಲಾಗರ ನಿರೂಪಿಸಿದರು, ಎಚ್‌.ನರಸಿಂಹ ವಂದಿಸಿದರು.

ಸಮ್ಮೇಳನದ ನಿರ್ಣಯಗಳು :
ಕೈಗಾರಿಕಾ ಧೋರಣೆ, ಕಾರ್ಮಿಕ ವಿರೋಧಿ ನೀತಿಗಳನ್ನು ನಿಲ್ಲಿಸಬೇಕು. ಭ್ರಷ್ಟಾಚಾರದ ಕೂಪವಾಗಿರುವ ಸಾರಿಗೆ ವ್ಯವಸ್ಥೆಯನ್ನು ದೂರವಿರಿಸಿ ಸಾರಿಗೆ ಉದ್ಯಮವನ್ನು ಉಳಿಸಿ-ಜೀವನೋಪಾಯ ರಕ್ಷಿಸಿ, ಸಾರಿಗೆ ವಲಯದಲ್ಲಿ ದುಡಿಯುವ ನೌಕರರ ಹಿತಾಸಕ್ತಿ ಕಾಪಾಡಬೇಕು. ಮೋಟಾರ್ ವಾಹನ ಕಾಯಿದೆ ತಿದ್ದುಪಡಿ-2019 ಹಿಂಪಡೆಯಬೇಕು. ಸೂಕ್ತ ತಿದ್ದುಪಡಿಯೊಂದಿಗೆ ಸಾರಿಗೆ ಉದ್ಯಮವನ್ನು ರಕ್ಷಿಸಲು ಹಾಗೂ ಎಸ್‌ಟಿಯುಎಸ್ ರಕ್ಷಿಸಲು ಕ್ರಮ ಕೈಗೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು. ಕಾರ್ಮಿಕ ಕಾನೂನುಗಳ ಅಡಿಯಲ್ಲಿ ದೊರಕುವ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಗ್ರಹ ಭಾಗ್ಯ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಉಚಿತ ನಿವೇಶನ ನೀಡಬೇಕು. ಕಾರ್ಪೋರೇಟ್ ಕಂಪೆನಿಗಳ ದುರಾಡಳಿತ ಕೊನೆಗೊಳಿಸಲು, ರೈತಾಪಿ ಕೃಷಿ ಉಳಿಸಲು, ಕಂಪೆನಿ ಕೃಷಿ ತೊಲಗಿಸಲು, ರೈತ ಕಾರ್ಮಿಕ ಕೂಲಿಕಾರರ ಐಕ್ಯ ಹೋರಾಟ ಬಲಪಡಿಸಬೇಕು. ಅಸಂಘಟಿತ ವಲಯದಲ್ಲಿನ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಹಾಗೂ ಪರಿಹಾರ ನೀಡಲು ಆಗ್ರಹಿಸಿ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು ಹಾಗೂ ಇದಕ್ಕೆ ಪೂರಕವಾಗಿರುವ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.

ಕೆಂಪುಮಯವಾದ ಕುಂದಾಪುರ ನಗರ:
ಸಮ್ಮೇಳನವನ್ನು ಕೊನೆಯ ದಿನ ನಡೆಯಲಿರುವ ಬಹಿರಂಗ ಸಭೆಯ ಪೂರ್ವಭಾವಿಯಾಗಿ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿದ ಸಾವಿರಾರು ಸಂಖ್ಯೆಯ ಕಾರ್ಮಿಕ ಪ್ರತಿನಿಧಿಗಳ ಬೃಹತ್ ಮೆರವಣಿಗೆ ನೋಡುಗರ ಗಮನ ಸೆಳೆಯಿತು. ಶಾಸ್ತ್ರೀ ವೃತ್ತದಿಂದ ಸಾಗಿದ ಮೆರವಣಿಗೆ ಹೊಸ ಬಸ್ಸು ನಿಲ್ದಾಣದಲ್ಲಿ ಸುತ್ತು ಬಂದು, ಪಾರಿಜಾತ ವೃತ್ತ ಮೂಲಕ ಬಹಿರಂಗ ಸಭೆ ನಡೆಯುವ ನೆಹರೂ ಮೈದಾನದಲ್ಲಿ ಸಮಾಪನಗೊಂಡಿತ್ತು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಮಂದಿ ಕಾರ್ಮಿಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ಇತಿಹಾಸ ನಿರ್ಮಾಣಕ್ಕೆ ಕಾರಣರಾದರು. ಹುಲಿವೇಷ, ಕೇರಳ ಬ್ಯಾಂಡ್, ಚೆಂಡೆ, ಕೊಂಬು ಕಹಳೆ ವಾದನ ಹಾಗೂ ಕೆಂಬಾವುಟ ಹಿಡಿದ ಸಮವಸ್ತ್ರಧಾರಿ ಕಾರ್ಮಿಕರು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದರು. ಮೆರವಣಿಗೆ ಸಾಗುವ ವೇಳೆ ನಗರವೆಲ್ಲ ಸಂಪೂರ್ಣ ಕೆಂಪನೆಯ ಸುಂದರ ದೃಶ್ಯಕ್ಕೆ ಸಾಕ್ಷಿಯಾಯಿತು. ಚೆಂಡೆ ವಾದನಕ್ಕೆ ಹೆಜ್ಜೆ ಹಾಕುವ ಮೂಲಕ ಕಾರ್ಮಿಕರು ಜೋಶ್ ತೋರಿದರು. ರಾಜ್ಯ ಸಿಐಟಿಯು ಸಂಘಟನೆಯ ಅಧ್ಯಕ್ಷೆ ಎಸ್‌.ವರಲಕ್ಷೀ ಸ್ವತ: ಚಂಡೆ ಬಾರಿಸುವ ಮೂಲಕ ಕಾರ್ಮಿಕ ಸಂಗಾತಿಗಳ ಸಂಭ್ರಮಕ್ಕೆ ಸಾಥ್ ನೀಡಿದರು.


Spread the love

Leave a Reply

Please enter your comment!
Please enter your name here