ಯಂತ್ರದಿಂದ ಭತ್ತದ ನಾಟಿ ಲಾಭದಾಯಕ

Spread the love

ಯಂತ್ರದಿಂದ ಭತ್ತದ ನಾಟಿ ಲಾಭದಾಯಕ

ಬೇಲೂರು: ಯಂತ್ರದ ಮೂಲಕ ಭತ್ತದ ಪೈರು ನಾಟಿ ಮಾಡುವ ಮೂಲಕ ಲಾಭದಾಯಕ ಕೃಷಿ ವಿಧಾನಗಳನ್ನು ರೈತರು ಬಳಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಜಯರಾಮ್ ಹೇಳಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚೌಡನಹಳ್ಳಿಯ ಪರಮೇಶ್ವರ್ ಅವರ ಜಮೀನಿನಲ್ಲಿ ಕೃಷಿ ಯಂತ್ರಶ್ರೀ ನಾಟಿ ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತರಿಗೆ ಅನೇಕ ಉಪಯೋಗಕರ ಸವಲತ್ತುಗಳನ್ನು ನೀಡಿದ್ದು, ಭೂಮಿಯಲ್ಲಿ ಫಲವತ್ತತೆಗಳನ್ನು ಬೆಳೆಯಲು ಮಣ್ಣಿನ ಪೌಷ್ಠಿಕಾಂಶ ಅತ್ಯಗತ್ಯವಾಗಿದೆ.ಯಂತ್ರದ ಮೂಲಕ ಭತ್ತದ ಪೈರು ನಾಟಿ ಮಾಡುವ ವಿಧಾನವನ್ನು ಬಳಸಿಕೊಂಡು ಸುಲಭವಾಗಿ ತಮ್ಮ ಗದ್ದೆಯಲ್ಲಿ ಫಸಲು ಬೆಳೆಯಲು ಅನುಕೂಲವಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬರಗಾಲದಿಂದ ಕಂಗಾಲಾಗಿರುವ ರೈತನಲ್ಲಿ ಆತ್ಮಸ್ಥೈರ್ಯವನ್ನು ತುಂಬಿಸುವ ನಿಟ್ಟಿನಿಂದ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಮೂಲಕ ನಮ್ಮನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ. ನಮ್ಮ ರೈತರು ಕೃಷಿಯಲ್ಲಿ ಯಂತ್ರಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ ಬೆಳೆಯಲು ವಿಚಾರ ಸಂಕಿರಣಗಳು ಸಹಕಾರಿಯಾಗುತ್ತವೆ. ಕೃಷಿಯೊಂದಿಗೆ ಭೂಮಿಯ ಫಲವತ್ತತೆ ಕಾಪಾಡುವುದು ಮತ್ತು ನೀರಿನ ಮಿತಬಳಕೆ ಮಾಡಿ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಆದ್ದರಿಂದ ಸಾವಯವ ಕೃಷಿ ಕಡೆಗೆ ಒಲವು ವ್ಯಕ್ತಪಡಿಸುವಂತೆ ರೈತರಿಗೆ ಕರೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಸಂಧ್ಯಾಶೆಟ್ಟಿ ಮಾತನಾಡಿ ಈಗಾಗಲೇ ತಾಲೂಕಿನಲ್ಲಿ ರೈತರಿಗೆ ಸಹಾಯವಾಗುವಂತಹ ಹಲವಾರು ಯೋಜನೆ ಗಳನ್ನು ಕಾರ್ಯರೂಪಕ್ಕೆ ತರಲಾಗಿದ್ದು ಅದರಲ್ಲಿ ಮೊದಲ ಭಾಗವಾಗಿ ಅರೇಹಳ್ಳಿ ಭಾಗದ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಸಬ್ಸಿಡಿ ರೂಪದಲ್ಲಿ ರೈತರಿಗೆ ಯಂತ್ರೋಪಕರಣಗಳನ್ನು ನೀಡಲಾಗಿದೆ. ಅಲ್ಲದೆ, ಕೆಲವು ಹೋಬಳಿ ಕೇಂದ್ರಗಳಲ್ಲಿ ರೈತರಿಗೆ ಸಹಾಯವಾಗುವಂತಹ ಯೋಜನೆಗಳನ್ನು ಮುಂದಿನ ದಿನದಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ರೈತರು ಪ್ರಕೃತಿದತ್ತವಾಗಿ ಸಿಗುವ ಸಂಪನ್ಮೂಲಗಳನ್ನು ಸದ್ಭಳಕೆ ಮಾಡಿಕೊಂಡು ಕೃಷಿಯಲ್ಲಿ ಲಾಭಗಳಿಸುವುದು, ಕೃಷಿಯಿಂದ ರೈತರು ವಿಮುಖರಾಗುವ ಸಂದರ್ಭದಲ್ಲಿ ಅವರಲ್ಲಿ ಕೃಷಿಯಲ್ಲಿ ಆಸಕ್ತಿ ಮೂಡಿಸಲು ಸರಕಾರ ಮತ್ತು ಗ್ರಾಮಾಭಿವೃದ್ಧಿ ಯೋಜನೆ ಜೊತೆಜೊತೆಯಾಗಿ ಕೃಷಿಯಂತ್ರಧಾರೆ ಕಾರ್ಯಕ್ರಮ ಹಮ್ಮಿಕೊಂಡಿರುತ್ತದೆ. ಇದನ್ನು ಸದುಪಯೋಗಪಡಿಸಿಕೊಂಡು ಯುವ ಜನತೆ ಕೃಷಿಯಲ್ಲಿ ತೊಡಗುವುದರಿಂದ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಕ್ಕೋಡು ಹೋಬಳಿ ಕೃಷಿ ಅಧಿಕಾರಿ ಪ್ರಕಾಶ್, ತಾಲೂಕು ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್ ಗ್ರಾಮಸ್ಥರು ಹಾಜರಿದ್ದರು.


Spread the love