ಯಕ್ಷಗಾನವು ಎಲ್ಲ ಕಲಾ ಪ್ರಕಾರಗಳಿಗೂ ಆಧಾರ

Spread the love

ಯಕ್ಷಗಾನವು ಎಲ್ಲ ಕಲಾ ಪ್ರಕಾರಗಳಿಗೂ ಆಧಾರ

ನಾಗಮಂಗಲ: ನಾಗಮಂಗಲ ನೆಲದ ಮೂಲ ಜಾನಪದ ಕಲೆಯಾದ ಮೂಡಲಪಾಯ ಯಕ್ಷಗಾನವು ಎಲ್ಲ ಕಲಾ ಪ್ರಕಾರಗಳಿಗೂ ಆಧಾರವಾಗಿದ್ದು, ಜನಮಾನಸದಿಂದ ಕಣ್ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಶಾಲಾ ಮಕ್ಕಳಿಂದ ಪುನರುಜ್ಜೀವನಗೊಳ್ಳುತ್ತಿರುವುದು ಔಚಿತ್ಯಪೂರ್ಣ ಸಂಗತಿ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಬಿ ಜಿ ನಗರದಲ್ಲಿ ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್ ಮಕ್ಕಳಿಂದ ನಡೆದ ಮೂಡಲಪಾಯ ಯಕ್ಷಗಾನ ಪ್ರದರ್ಶನದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನಮ್ಮ ಪೂರ್ವಜರು ಧರಿಸುತ್ತಿದ್ದ ಆಭರಣಗಳನ್ನು ನಾವು ಆಧುನಿಕರಿಸಿ ಧರಿಸುವಂತೆ, ಮೂಡಲಪಾಯ ಯಕ್ಷಗಾನವನ್ನು ಮೂಲಕ್ಕೆ ಧಕ್ಕೆಯಾಗದಂತೆ, ಆಧುನಿಕ ಸ್ಪರ್ಶ ನೀಡಿ, ಹೊಸ ಆಯಾಮದಲ್ಲಿ ಪ್ರದರ್ಶಿಸುವುದು ಕಲೆಯ ವಿಶೇಷ ಜ್ಞಾನವಾಗಿದೆ, ಅದನ್ನು ನಮ್ಮ ಮಕ್ಕಳ ಮೂಲಕ ಮರುಹುಟ್ಟು ನೀಡಿರುವ ಪ್ರಯತ್ನ ಅಭೂತಪೂರ್ವವಾಗಿದೆ. ಶಿಕ್ಷಣದ ಜೊತೆಗೆ ಇಂತಹ ಸನಾತನ ಕಲೆಗಳನ್ನು ಮೇಳೈಸಿಕೊಂಡರೆ ಕಲೆಗೂ ಪ್ರೋತ್ಸಾಹ, ಬದುಕಿಗೂ ಯಶಸ್ಸು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಪೋಷಕರು ಶಿಕ್ಷಕರೊಂದಿಗೆ ಸಹಕರಿಸಿ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.

ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಬಿ ಜಯಪ್ರಕಾಶ್ ಗೌಡ ಮಾತನಾಡಿ ಕರಾವಳಿಯ ಯಕ್ಷಗಾನಕ್ಕೂ ಮೊದಲು, ನಾಗಮಂಗಲ ತಾಲೂಕಿನ ಹಂದೇನಹಳ್ಳಿ ಕೆಂಪೇಗೌಡರ ಕಾಲದಲ್ಲಿ ಆರಂಭವಾದ ಮೂಡಲಪಾಯ ಯಕ್ಷಗಾನವು ಡಾ. ಹೆಚ್ ಎಲ್ ನಾಗೇಗೌಡ ಹಾಗೂ ಜೀಶಂಪ ರಿಂದ ಮುಂದುವರೆದು ‘ಕರಿಬಂಟನ ಕಾಳಗ’ ಇತ್ಯಾದಿ ಪ್ರಸಂಗಗಳು ಅಮೆರಿಕ ಮುಂತಾದ ರಾಷ್ಟ್ರಗಳಲ್ಲಿ ಪ್ರದರ್ಶನಗೊಂಡು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದವು.

ನೆಲ್ಲಿಗೆರೆ ತಿಮ್ಮಪ್ಪಚಾರ್ ಹಾಗೂ ಬೆಳ್ಳೂರಿನ ಪುಟ್ಟಸ್ವಾಮಾಚಾರ್ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿದ್ದು, ಆ ನಂತರದಲ್ಲಿ ಕಣ್ಮರೆಯಾಗಿದ್ದ ಮೂಡಲಪಾಯ ಯಕ್ಷಗಾನವು ಈಗ ಆದಿಚುಂಚನಗಿರಿಯ ಗುರುಮಠವೆಂಬ ಅರಮನೆಗೆ ಸೇರಿ, ಪ್ರಭುತ್ವದಿಂದ ಗುರುತ್ವದ ಕಡೆಗೆ ಸಾಗಿದೆ. ಮಹಾ ಸ್ವಾಮೀಜಿಯವರು ಮತ್ತು ಸಿಬ್ಬಂದಿಯವರ ಕರ್ತೃತ್ವ ಶಕ್ತಿಯಿಂದ ಮತ್ತೆ ವಿಶ್ವದೆತ್ತರಕ್ಕೆ ಕೊಂಡೊಯ್ಯುವ ಪ್ರಯತ್ನ ಸಾರ್ಥಕವಾಗಲಿ ಎಂದು ಹಾರೈಸಿದರು.

ಮೂಡಲಪಾಯ ಯಕ್ಷಗಾನವನ್ನು ಶಾಲಾ ಮಕ್ಕಳಿಗೆ ಕಲಿಸಿದ ಭಾಗವತರಾದ ಹರಳಕುಪ್ಪೆ ಶಿವಣ್ಣ, ಭೀಮಯ್ಯ, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಂಜುನಾಥ ಬಡಿಗೇರ್, ಮಂಜೇಶ್ ಚನ್ನಾಪುರ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ ಎ ಶೇಖರ್, ರಿಜಿಸ್ಟ್ರಾರ್ ಡಾ. ಸಿ ಕೆ ಸುಬ್ಬರಾಯ, ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಎ ಟಿ ಶಿವರಾಮು, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ನ ಮುಖ್ಯಸ್ಥರಾದ ಡಾ. ಈ ಎಸ್ ಚಕ್ರವರ್ತಿ, ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರು, ಸಿಬ್ಬಂದಿ, ಪೋಷಕರು ಮೊದಲಾದವರಿದ್ದರು.


Spread the love