ಯಕ್ಷಗಾನ ಕಲಾವಿದ ಚಂದ್ರ ಕುಮಾರ್ ನೀರ್ಜಡ್ಡು ಅವರಿಗೆ ‘ದಿ.ಯು.ಶಿವರಾಮ ಕಲ್ಕೂರ’ ಪ್ರಶಸ್ತಿ

Spread the love

ಯಕ್ಷಗಾನ ಕಲಾವಿದ ಚಂದ್ರ ಕುಮಾರ್ ನೀರ್ಜಡ್ಡು ಅವರಿಗೆ ‘ದಿ.ಯು.ಶಿವರಾಮ ಕಲ್ಕೂರ’ ಪ್ರಶಸ್ತಿ

ಉಡುಪಿ: ಶ್ರೀ ವಿನಾಯಕ ಯಕ್ಷಗಾನ ಸಂಘ(ರಿ) ತೆಂಕಬೆಟ್ಟು, ಉಪ್ಪೂರು ಇದರ 39 ನೇ ವರ್ಷದ ವಾರ್ಷಿಕೋತ್ಸವ ಹಾಗೂ ‘ದಿ.ಯು.ಶಿವರಾಮ ಕಲ್ಕೂರ’ ಪ್ರಶಸ್ತಿ ಪ್ರಧಾನ ಸಮಾರಂಭ ಶುಕ್ರವಾರ ಉಪ್ಪೂರು ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಂದಾರ್ತಿ ಮೇಳದ ಹಿರಿಯ ಕಲಾವಿದ ಚಂದ್ರ ಕುಮಾರ್ ನೀರ್ಜಡ್ಡು ಇವರಿಗೆ ಸಂಘದ ಸ್ಥಾಪಕ ಸದಸ್ಯ ದಿ.ಉಪ್ಪೂರು ಶಿವರಾಮ ಕಲ್ಕೂರ ಅವರ ಸ್ಮರಣಾರ್ಥ ನೀಡಲಾಗುವ ‘ದಿ.ಯು.ಶಿವರಾಮ ಕಲ್ಕೂರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಜಾನಪದ ಪರಿಷತ್(ರಿ) ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಈ ಸಂದರ್ಭದಲ್ಲಿ ಮಾತನಾಡಿ ‘ಯಕ್ಷಗಾನದಷ್ಟು ಅದ್ಭುತವಾದ ಕಲೆ ಬೇರೊಂದಿಲ್ಲ. ರಂಗಸ್ಥಳದ ಹೊರಗೆ ಬೇರೆ ಬೇರೆ ವಿಧದ ಕನ್ನಡ ಮಾತನಾಡುವ ಕಲಾವಿದರು ಯಕ್ಷಗಾನ ರಂಗಕ್ಕೆ ಬಂದಾಗ ಶುದ್ಧ ಕನ್ನಡ ಮಾತನಾಡುತ್ತಾರೆ. ಇದು ಯಕ್ಷಗಾನ ಕಲೆಗಿರುವ ಶಕ್ತಿ. ಮಕ್ಕಳಿಗೆ ಚಿಕ್ಕಂದಿನಿಂದಲೇ ಪೋಷಕರು ಯಕ್ಷಗಾನ ಕಲೆಯ ಮೇಲೆ ಅಭಿರುಚಿ, ಆಸಕ್ತಿ, ಅಭಿಮಾನ ಬೆಳೆಸುವ ಕೆಲಸ ಮಾಡಿದಲ್ಲಿ ಕಲೆಯನ್ನು ಉಳಿಸಿ‌ ಬೆಳೆಸಲು ಸಾಧ್ಯ ಜೊತೆಗೆ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಸಾಧ್ಯ’ ಎಂದರು.

ಇದೇ ಸಂದರ್ಭದಲ್ಲಿ ಪಾಕತಜ್ಞ ಶ್ರೀಧರ್ ಆಚಾರ್ಯ ಇವರನ್ನು ಅಭಿನಂದಿಸಿ ಗೌರವಿಸಲಾಯಿತು‌.

ಮಹತೋಭಾರ ಶ್ರೀ ಸಿದ್ಧಿವಿನಾಯಕ‌ ದೇವಸ್ಥಾನ ಉಪ್ಪೂರು, ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ರಾಘವೇಂದ್ರ ಭಟ್, ಸಂಘದ ಗುರುಗಳಾದ ಕರ್ಜೆ ಶ್ರೀಧರ್ ಹೆಬ್ಬಾರ್, ಸಂಘದ ಗೌರವಾಧ್ಯಕ್ಷ ವೆಂಕಟೇಶ ಕ್ರಮಧಾರಿ ಕರ್ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ಯ ಸ್ವಾಗತಿಸಿದರು. ವಾಮನ್ ಭಟ್ ವಂದಿಸಿದರು. ಪ್ರದೀಪ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಘದ ಬಾಲ ಕಲಾವಿದರಿಂದ ‘ಪ್ರಮಿಳಾರ್ಜುನ-ಬಬ್ರುವಾಹನ’, ಹಿರಿಯ ಸದಸ್ಯರಿಂದ ‘ವಿದ್ಯನ್ಮತಿ‌ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಿತು.


Spread the love