ಯದುವೀರ್ ರನ್ನು ಸಾಂಸ್ಕೃತಿಕ ರಾಯಭಾರಿಯಾಗಿಸಲು ಒತ್ತಾಯ

Spread the love

ಯದುವೀರ್ ರನ್ನು ಸಾಂಸ್ಕೃತಿಕ ರಾಯಭಾರಿಯಾಗಿಸಲು ಒತ್ತಾಯ

ಬೆಂಗಳೂರು: ಮೈಸೂರಿನ ರಾಜಪರಂಪರೆಯ ಯದುವೀರ ಕೃಷ್ಣದತ್ತ ನರಸಿಂಹರಾಜ ಒಡೆಯರ್ ಅವರಿಗೆ ನಾಡಿನ ಜನರ ಗೌರವದ ದ್ಯೋತಕವಾಗಿ ಮಹತ್ವದ ಗೌರವ ನೀಡುವ ಅಗತ್ಯವಿದ್ದು, ಸಚಿವ ಸಂಪುಟ ದರ್ಜೆಗೆ ಸರಿ ಸಮಾನವಾಗಿ ಶಿಷ್ಟಾಚಾರ ಕಲ್ಪಿಸಬೇಕು ಎಂದು ರಾಷ್ಟ್ರೀಯ ಯುವ ಪರಿಷತ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶ್ರೀ ಯದುವೀರ ಕೃಷ್ಣದತ್ತ ನರಸಿಂಹ ರಾಜ ಒಡೆಯರ್ ಅವರನ್ನು ರಾಜ್ಯ ಸರ್ಕಾರದ ಸಾಂಸ್ಕೃತಿಕ ರಾಯಭಾರಿ ಅಥವಾ ಪ್ರವಾಸೊದ್ಯಮದ ರಾಯಭಾರಿಯನ್ನಾಗಿ ನೇಮಿಸುವ ಮೂಲಕ ಸಂಸ್ಥಾನಕ್ಕೆ ಗೌರವ ನೀಡಬೇಕು. ಜೊತೆಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಇಡೀ ದೇಶದಲ್ಲಿ ಮೈಸೂರು ರಾಜಮನೆತನಕ್ಕೆ ಮಹೋನ್ನತ ಸ್ಥಾನವಿದೆ. ತಮ್ಮ ಆಡಳಿತಾವಧಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ್ದ ಈ ಸಂಸ್ಥಾನಕ್ಕೆ ವಿಶ್ವ ವಿಖ್ಯಾತ ದಸರಾ ಮಹೋತ್ಸವ ಸಂದರ್ಭದಲ್ಲಿ ಸರ್ಕಾರದಿಂದ ಗೌರವದ ಸ್ಥಾನಮಾನ ನೀಡಬೇಕು. ಜಂಬೂ ಸವಾರಿ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಒಡೆಯರ್ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡುವುದನ್ನು ಘೋಷಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೈಸೂರು ಸಂಸ್ಥಾನಕ್ಕೆ ಒಡೆಯರ್ ಕೊಡುಗೆ ಅಪಾರ. ಶಿಕ್ಷಣ, ಉದ್ಯೋಗ, ಮೀಸಲಾತಿ, ನೀರಾವರಿ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಜನ ಸಾಮಾನ್ಯರಿಗೆ ಕಲ್ಪಿಸಿ ರಾಜಪರಂಪರೆಯಲ್ಲಿ ತನ್ನದೇ ಆದ ಹೆಗ್ಗುರುತುಗಳನ್ನು ಈ ಮನೆತನ ಮೂಡಿಸಿದೆ. ಸಾಂಸ್ಕೃತಿಕ ನಗರಿ ಮೈಸೂರು ಯೋಗದ ರಾಜಧಾನಿಯಾಗಲು ರಾಜಪಂಪರೆ ಕೊಡುಗೆ ಅಪಾರ. ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರ್ ಕೊಡುಗೆ ಸ್ಮರಣೀಯ. ಮೈಸೂರು ಅರಮನೆಯಲ್ಲಿ 1930 ರಲ್ಲಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರು ಯೋಗ ಕಲಿಸಲು ಯೋಗ ಶಾಲೆ ಆರಂಭಿಸಿ ಮೈಸೂರು ಸಂಸ್ಥಾನದಲ್ಲಿ ಯೋಗ ಶಿಕ್ಷಣ ಮತ್ತು ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದ್ದರು ಎಂದು ಅವರು ಹೇಳಿದ್ದಾರೆ.


Spread the love