ಯಶೋಭಿನಂದನಾ ಕಾರ್ಯಕ್ರಮದಲ್ಲಿ ಯಶ್ಪಾಲರನ್ನು ಹಾಡಿ ಹೊಗಳಿದ ಸಚಿವರಾದ ಸುನೀಲ್ ಮತ್ತು ಕೋಟ

Spread the love

ಯಶೋಭಿನಂದನಾ ಕಾರ್ಯಕ್ರಮದಲ್ಲಿ ಯಶ್ಪಾಲರನ್ನು ಹಾಡಿ ಹೊಗಳಿದ ಸಚಿವರಾದ ಸುನೀಲ್ ಮತ್ತು ಕೋಟ

ಉಡುಪಿ: ಯಶ್ಪಾಲ್ ಸುವರ್ಣ ಅವರು ರಾಷ್ಟ್ರೀಯತೆ ಮತ್ತು ಹಿಂದುತ್ವದ ಚಟುವಟಿಕೆಯನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದು ಪ್ರಸ್ತುತ ಸಹಕಾರಿ ಕ್ಷೇತ್ರದಲ್ಲಿ ಕೂಡ ಸಾಧನೆ ಮಾಡಿದ್ದಾರೆ. ಅವರ ಸಾಧನೆಯ ಹಿಂದೆ ಪರಿಶ್ರಮ ಮತ್ತು ಶ್ರದ್ಧೆಯಿದ್ದು, ಅವರ ಜೀವನ ಇನ್ನಷ್ಟು ಎತ್ತರಕ್ಕೆ ಏರಲು ಪ್ರತಿಯೊಬ್ಬರು ಒಟ್ಟಾಗಿ ಒಂದಾಗಿ ಅವರ ಕೈಯನ್ನು ಬಲಪಡಿಸಬೇಕಾಗಿರುವುದು ಇಂದಿನ ಅನಿವಾರ್ಯತೆ ಆಗಿದೆ ಎಂದು ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನೀಲ್ ಕುಮಾರ್ ಹೇಳಿದರು.

ಅವರು ಬುಧವಾರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಶ್ರೀಮತಿ ಶಾಲಿನಿ ಡಾ|ಜಿ.ಶಂಕರ್ ತೆರೆದ ಸಭಾಂಗಣದಲ್ಲಿ ದಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರು ವತಿಯಿಂದ ಅವಿಭಜಿತ ದಕ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಯುವ ಸಹಕಾರಿ ಧುರೀಣ ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಂದಾಳು ಯಶಪಾಲ್ ಎ ಸುವರ್ಣ ಇವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಯಶೋಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಒಬ್ಬ ಯುವಕ ರಾಷ್ಟ್ರೀಯ ಮತ್ತು ಹಿಂದುತ್ವದ ಚಟುವಟಿಕೆಯನ್ನುಹೃದಯದಲ್ಲಿಟ್ಟುಕೊಂಡು ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಪ್ರಾಮಾಣಿಕ ಕಾರ್ಯಕರ್ತ ಯಶ್ಪಾಲ್ ಸುವರ್ಣ. 25 ವರ್ಷಗಳ ಹಿಂದೆ ಒರ್ವ ಸಾಮಾನ್ಯ ಕಾರ್ಯಕರ್ತನಾಗಿ ಉಡುಪಿ ನಗರಸಭೆಯ ಭಾಗಗಳಲ್ಲಿ ಓಡಾಗಳನ್ನು ಮಾಡುತ್ತಾ, ಕೊಟ್ಟಂತಹ ಹತ್ತಾರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಇಂದು ರಾಜ್ಯದ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಂದಿನಿಂದ ಇಂದಿನವರೆಗೆ ಯಶ್ಪಾಲ್ ಅವರನ್ನು ಹತ್ತಿರದಿಂದ ಕಂಡು ಬಲ್ಲೆ. ಓರ್ವ ಹೋರಾಟಗಾರನಾಗಿ ಸಾರ್ವಜನಿಕ ಚಟುವಟಿಕೆಗೆ ಬಂದ ಅವರು ಹಿಂದುತ್ವದ ಚಟುವಟಿಕೆಗಳಲ್ಲಿ ಮಂಚೂಣಿಯಲ್ಲಿ ನಿಂತು ಹೋರಾಟಗಳನ್ನು ಮಾಡುತ್ತಾ, ಬಳಿಕ ಬಿಜೆಪಿ ಪಕ್ಷದ ವಿವಿಧ ಜವಾಬ್ದಾರಿಗಳನ್ನು ಪಡೆಯುತ್ತಾ ಬಂದಿದ್ದಾರೆ. ನಗರಸಭೆಯ ಸದಸ್ಯನಾಗಿ, ಸಹಕಾರಿ ಕ್ಷೇತ್ರದಲ್ಲೂ ವಿಶೇಷವಾದ ಕಾರ್ಯಗಳನ್ನು ಮಾಡುತ್ತಾ, ಇಂದು ಉನ್ನತವಾದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ಪಡೆದುಕೊಂಡು ಪ್ರಸ್ತುತ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ತನ್ನ ಚಟುವಟಿಕೆಯನ್ನು ರಾಷ್ಟ್ರ ಮಟ್ಟಕ್ಕೆ ವಿಸ್ತರಿಸಿಕೊಂಡಿದ್ದಾರೆ. ಅವರ ಸಹಕಾರಿ ಹಾಗೂ ರಾಜಕೀಯ ಜೀವನ ಇನ್ನಷ್ಟು ಎತ್ತರಕ್ಕೆ ಏರಲಿ ಎಂಬುದು ನನ್ನ ಹಾರೈಕೆಯಾಗಿದೆ.

ರಾಜಕೀಯ ಕ್ಷೇತ್ರದಲ್ಲಿ ಕೂಡ ಬೆಳೆಯುವ ನಿಟ್ಟಿನಲ್ಲಿ ಹಂತ ಹಂತವಾಗಿ ಪ್ರಗತಿಯನ್ನು ಸಾಧಿಸಿಕೊಂಡು ಬಂದಿದ್ದಾರೆ. ಅವರು ಇನ್ನಷ್ಟು ಬೆಳೆಯಬೇಕಾದರೆ ನಾವೆಲ್ಲಾ ಒಟ್ಟಾಗಿ ಒಂದಾಗಿ ಅವರ ಕೈಯನ್ನು ಬಲಪಡಿಸಬೇಕಾಗಿರುವು ಇಂದಿನ ಅಗತ್ಯತೆ ಮತ್ತು ಅನಿವಾರ್ಯತೆಯಾಗಿದೆ ಎಂದರು.

ಯಶ್ಪಾಲ್ ಎತ್ತರಕ್ಕೆ ಬೆಳೆಯಲು ಹೆಚ್ಚು ಕಾಯದೇ ಬೇಗ ಅವಕಾಶ ಸಿಗಲಿ – ಸಚಿವ ಕೋಟ
ಇದೇ ವೇಳೆ ಮಾತನಾಡಿದ ರಾಜ್ಯ ಹಿಂದುಳಿದ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಡ ಮೀನುಗಾರರ ಬದುಕಿಗೆ ಆಸರೆಯಾಗಿ ಸಹಕಾರಿ ಕ್ಷೇತ್ರದ ಮೂಲಕ ಅವರ ಜೀವನಕ್ಕೆ ದಾರಿಯಾದ ವ್ಯಕ್ತಿಗೆ ಸಹಕಾರ ರತ್ನ ಪ್ರಶಸ್ತಿ ಲಭಿಸಿದ್ದು ನಿಜಕ್ಕೂ ಅಭಿನಂದನೀಯವಾಗಿದೆ.

ಕಂಡದ್ದನ್ನು ಕಂಡಂತೆ ಹೇಳುವ ವಿಶಿಷ್ಠ ಗುಣ ಹೊಂದಿರುವ ವ್ಯಕ್ತಿ ಯಶ್ಪಾಲ್ ಸುವರ್ಣ ಅವರದ್ದು, ಎತ್ತರಕ್ಕೆ ಏರಿರುವ ಅವರ ಘನತೆ ಮತ್ತು ವ್ಯಕ್ತಿತ್ವ ಇನ್ನಷ್ಟು ಬೆಳೆಯಲು ಅವರಿಗೆ ಅವಕಾಶವಾಗಿರಲಿ. ಇನ್ನಷ್ಟು ಎತ್ತರಕ್ಕೆ ಬೆಳೆಯಲು ಯಶ್ಪಾಲ್ ಅವರಿಗೆ ಎಲ್ಲಾ ಶಕ್ತಿ ಇದ್ದು ಸ್ವಲ್ಪ ಸಮಯ ಕಾಯಬೇಕಾದ ಅವಶ್ಯಕತೆ ಇದ್ದು ಬಹಳ ಕಾಲ ಕಾಯದೇ ಆದಷ್ಟು ಬೇಗ ಸಿಗಲಿ ಎಂಬುದು ನಮ್ಮ ಹಾರೈಕೆ ಎಂದರು.


Spread the love