
ಯಶ್ಪಾಲ್ ಗೆಲುವು ಹಿಂದುತ್ವದ ಗೆಲುವು- ಶ್ರೀಕಾಂತ್ ಶೆಟ್ಟಿ
ಉಡುಪಿ: ಹಿಂದುತ್ವದ ನೆಲೆಯಲ್ಲಿ ರಾಷ್ಟ್ರೀಯವಾದಿ ನೆಲಗಟ್ಟಿನಲ್ಲಿ ಬೆಳೆದು ಬಂದ ಯುವ ನಾಯಕ ಯಶಪಾಲ್ ಸುವರ್ಣ ಅವರ ಈ ಬಾರಿಯ ಗೆಲುವು ಹಿಂದುತ್ವದ ಗೆಲುವಾಗಲಿದೆ ಎಂದು ಧಾರ್ಮಿಕ ಮುಖಂಡ ಶ್ರೀಕಾಂತ್ ಶೆಟ್ಟಿ ಹೇಳಿದರು.
ಅವರು ತೆಂಕನಿಡಿಯೂರು ಮತ್ತು ಬಡಾನಿಡಿಯೂರು ವ್ಯಾಪ್ತಿಯಲ್ಲಿ ಬಿಜೆಪಿ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಹಿಂದೂ ವಿರೋಧಿ ಮನಸ್ಥಿತಿಯ ಕಾಂಗ್ರೆಸ್ ಪಕ್ಷ ಹಿಂದೂ ಸಮಾಜದ ರಕ್ಷಣೆಗೆ ಪಣತೊಟ್ಟ ಬಜರಂಗದಳ ಸಂಘಟನೆಯನ್ನು ನಿಷೇಧಿಸಲು ಹೊರಟ ಈ ಕಾಲಘಟ್ಟದಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕರಾಗಿದ್ದ, ರಾಜಕೀಯ, ಸಹಕಾರ ಧಾರ್ಮಿಕ ಕ್ಷೇತ್ರದಲ್ಲಿ ನಾಯಕನಾಗಿ ಗುರುತಿಸಿಕೊಂಡಿರುವ ದಿಟ್ಟ ನಿಲುವಿನ ಯಶ್ಪಾಲ್ ಸುವರ್ಣ ಈ ಬಾರಿ ಉಡುಪಿ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಉಡುಪಿಯ ಜನತೆ ಈ ಬಾರಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡುವಂತೆ ಕರೆ ನೀಡಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸಿನೊಂಡಿಗೆ ಡಾ ವಿ ಎಸ್ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದ ಯಶ್ಪಾಲ್ ಸುವರ್ಣ ಉಡುಪಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದರು.
ಶಾಸಕ ರಘುಪತಿ ಭಠ್ ಮಾತನಾಡಿ ಶಾಸಕನಾಗಿ ತೆಂಕನಿಡಿಯೂರು ಮತ್ತು ಬಡಾನಿಡಿಯೂರು ಗ್ರಾಮಗಳಿಗೆ ಗರಿಷ್ಠ ಅನುದಾನ ಒದಗಿಸಿ ಅಭಿವೃದ್ಧಿ ನಡೆಸಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರನ್ನು ಗೆಲ್ಲಿಸುವ ಮೂಲಕ ಮುಂದಿನ ದಿನಗಳಲ್ಲಿ ಗ್ರಾಮದ ನಿರಂತರ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮಾತನಾಡಿ ಮನೆಮನೆಗೆ ಗ್ಯಾರಂಟಿ ಕಾರ್ಡ್ ತಲುಪಿಸಿ ಮತದಾರರನ್ನು ದಿಕ್ಕು ತಪ್ಪಿಸಲು ಮುಂದಾಗಿರೋ ಕಾಂಗ್ರೆಸ್ ಇದೀಗ, ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಉಲ್ಲೇಖೀಸಿದ್ದು, ಈ ಮೂಲಕ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧೀ ನಿಲುವು ಇದೀಗ ಬಯಲಾಗಿದೆ. ಕ್ಷೇತ್ರದ ಅಭಿವೃದ್ಧೀು, ಹಿಂದುತ್ವ ಮತ್ತು ರಾಷ್ಟ್ರವಾದಿ ಚಿಂತನೆಯ ಆಧಾರದಲ್ಲಿ ಈ ಬಾರಿ ಬಿಜೆಪಿ ಚುನಾವಣೆಯನ್ನು ಎದುರಿಸುತ್ತಿದ್ದು ಕ್ಷೇತ್ರದ ಜನತೆ ಮತ್ತೊಮ್ಮೆ ಬಿಜೆಪಿಗೆ ಅವಕಾಶ ನೀಡುವ ವಿಶ್ವಾಸವಿದೆ ಎಂದರು.
ಸಭೆಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯ ವಿಜಯ ಕೊಡವೂರು, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಅರುಣ್ ಜತ್ತನ್, ಬಡಾನಿಡಿಯೂರು ಗ್ರಾಪಂ ಅಧ್ಯಕ್ಷ ಪ್ರಭಾಕರ ತಿಂಗಳಾಯ, ತಾಪಂ ಮಾಜಿ ಉಪಾಧ್ಯಕ್ಷ ಶರತ್ ಬೈಲಕೆರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ್ ಪ್ರಕಾಶ್ ಹಾಗೂ ಇತರರು ಉಪಸ್ಥಿತರಿದ್ದರು.