
ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಫೆಡರೇಶನ್ ಸಾಮಾಜಿಕ ಬದ್ಧತೆಯ ಕಾರ್ಯ ಅನುಕರಣೀಯ : ವೇದವ್ಯಾಸ ಕಾಮತ್
ಮಂಗಳೂರು: ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಮೀನು ಮಾರಾಟ ಫೆಡರೇಶನ್ ಲಾಭಾಂಶದ ಬಹು ದೊಡ್ಡ ಮೊತ್ತವನ್ನು ವಿನಿಯೋಗಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರೋಗ್ಯ ಸುರಕ್ಷಾ ಕಾರ್ಡ್ ಹಾಗೂ ಸದಸ್ಯ ಗ್ರಾಹಕರಿಗೆ ಪ್ರೋತ್ಸಾಹ ಧನ ಹಾಗೂ ಉಡುಗೊರೆ ಒದಗಿಸುವ ಮೂಲಕ ಸಮಾಜಮುಖಿ ಬದ್ಧತೆ ಮೆರೆದಿರುವ ಕಾರ್ಯ ಅನುಕರಣೀಯವಾಗಿದ್ದು, ಇಂತಹ ಕಾರ್ಯ ಸಂಸ್ಥೆಯ ಮೂಲಕ ನಿರಂತವಾಗಿ ಮೂಡಿಬರಲಿ ಎಂದು ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಹೇಳಿದರು.
ದ ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಜಿ ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್, ವಿದ್ಯಾರ್ಥಿ ವೇತನ ಹಾಗೂ ಸದಸ್ಯ ಗ್ರಾಹಕರಿಗೆ ಪ್ರೋತ್ಸಾಹಕ ಉಡುಗೊರೆ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಫೆಡರೇಷನ್ ಅಧ್ಯಕ್ಷರಾದ ಯಶ್ ಪಾಲ್ ಎ. ಸುವರ್ಣ ಮಾತನಾಡಿ ಮೀನುಗಾರಿಕಾ ಫೆಡರೇಷನ್ ಕಳೆದ ಹಲವು ವರ್ಷಗಳಿಂದ ಮೀನುಗಾರಿಕಾ ಚಟುವಟಿಕೆಯ ಮೂಲಕ ಮೀನುಗಾರಿಕೆ ಅಭಿವೃದ್ದಿಯ ಜೊತೆ ಜೊತೆಗೆ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ರೂಪಿಸಿದ್ದು ಮುಂದಿನ ದಿನಗಳಲ್ಲಿಯೂ ಇಂತಹ ಹಲವು ಯೋಜನೆಗಳು ಆಡಳಿತ ಮಂಡಳಿಯ ಮುಂದಿದೆ.
ಪ್ರಸಕ್ತ ಸಾಲಿನಲ್ಲಿ ಮಂಗಳೂರು ಭಾಗದ 145 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 3 ಲಕ್ಷ ಮೌಲ್ಯದ ಪ್ರತಿಭಾ ಪುರಸ್ಕಾರ, 1074 ಸದಸ್ಯ ಸಹಕಾರಿ ಸಂಘಗಳ ಸದಸ್ಯರಿಗೆ 20 ಲಕ್ಷ ವೆಚ್ಚದಲ್ಲಿ ಜಿ ಶಂಕರ್ ಮಣಿಪಾಲ್ ಆರೋಗ್ಯ ಸುರಕ್ಷಾ ಕಾರ್ಡ್, ಗ್ರಾಹಕ ಬೋಟ್ ಮಾಲಕರಿಗೆ 1.07 ಕೋಟಿ ಮೌಲ್ಯದ ಪ್ರೋತ್ಸಾಹಕ ಉಡುಗೊರೆ ಹಾಗೂ ಪ್ರೋತ್ಸಾಹ ಧನ ನೀಡುವ ಮೂಲಕ
ಮೀನು ಮಾರಾಟ ಫೆಡರೇಶನ್ ಸಂಸ್ಥೆಗಳಿಸಿದ ಲಾಭಾಂಶವನ್ನು ಸಮಾಜ ಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಜೊತೆಗೆ ಗ್ರಾಹಕ ಸದಸ್ಯರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಫೆಡರೇಶನ್ ನಿರಂತರ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಸದಸ್ಯ ಸಹಕಾರಿ ಸಂಘಗಳ ಸದಸ್ಯರಿಗೆ ಜಿ ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಿಸಿದರು.
ಉರ್ವ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರಾದ ದೇವಾನಂದ ಗುರಿಕಾರ ಸದಸ್ಯ ಗ್ರಾಹಕರಿಗೆ ಪ್ರೋತ್ಸಾಹಕ ಉಡುಗೊರೆ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಮಂಗಳೂರು ಏಳು ಪಟ್ನ ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷರಾದ ಗೌತಮ್ ಕೋಡಿಕಲ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ನಯನ ಆರ್. ಕೋಟ್ಯಾನ್, ಇಂಡಿಯನ್ ಆಯಿಲ್ ಕಂಪೆನಿಯ ಸೇಲ್ಸ್ ಆಫೀಸರ್ ಅಭಿನವ್ ನಾಥ್, ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರದ ಜಗದೀಶ್ ಮೊಗವೀರ ಹಾಗೂ ಫೆಡರೇಷನ್ ನಿರ್ದೇಶಕರಾದ ರಾಮಚಂದ್ರ ಕುಂದರ್, ಸುಧೀರ್ ಶ್ರೀಯಾನ್, ಶ್ರೀಮತಿ ಉಷಾರಾಣಿ, ಚಿದಾನಂದ ಮೊದಲಾದವರು ಉಪಸ್ಥಿತರಿದ್ದರು.