ಯಾರೂ ನಿರೀಕ್ಷೆ ಮಾಡದವರು ಸಿಎಂ ಆಗ್ತಾರೆ: ಯತ್ನಾಳ್!

Spread the love

ಯಾರೂ ನಿರೀಕ್ಷೆ ಮಾಡದವರು ಸಿಎಂ ಆಗ್ತಾರೆ: ಯತ್ನಾಳ್!

ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಸ್ವ ಪಕ್ಷೀಯ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ರಾಜ್ಯದಲ್ಲಿ ಯಾರೂ ನಿರೀಕ್ಷೆ ಮಾಡದ ವ್ಯಕ್ತಿ ಮುಖ್ಯಮಂತ್ರಿಯಾಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಮರಿಯಾಲ ಗ್ರಾಮದಲ್ಲಿ ಮಾಜಿ ಕೇಂದ್ರ ಸಚಿವ ದಿ.ಎಂ. ರಾಜಶೇಖರ ಮೂರ್ತಿರವರ ಸಮಾಧಿಗೆ ನಮಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ದೆಹಲಿಯಲ್ಲಿರುವ ಬಿಜೆಪಿ ಹೈಕಮಾಂಡ್ ವೀಕ್ಷಿಸುತ್ತಿದೆ, ರಾಜ್ಯದಲ್ಲಿ ಎಷ್ಟು ಬೇಗ ಮುಖ್ಯಮಂತ್ರಿ ಬದಲಾಗುತ್ತಾರೋ ಅಷ್ಟು ಬೇಗ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನತೆ ನಿರೀಕ್ಷೆ ಮಾಡಿರದ ವ್ಯಕ್ತಿ ಕರ್ನಾಟಕದ ಮುಖ್ಯಮಂತ್ರಿಗಳಾಗುತ್ತಾರೆ. ಒಳ್ಳೆಯವರು, ಪ್ರಾಮಾಣಿಕರು, ಹಿಂದುತ್ವದ ಪರ ಇರುವವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.

ಹೈಕಮಾಂಡ್ ಒಂದು ವೇಳೆ ತಮಗೆ ಅವಕಾಶ ಕೊಟ್ಟರೆ ಬೇಡ ಎನ್ನುವುದಿಲ್ಲ, ಎಂದು ಹೇಳಿ, ಕೆಲವು ಶಾಸಕರು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಕೊಡಲ್ಲ ಎಂಬ ಭಯದಿಂದ ಮಾತನಾಡುತ್ತಿಲ್ಲ ಅಂತಾ ತಮ್ಮದೇ ಪಕ್ಷದವರ ಬಗ್ಗೆ ಬಸವನಗೌಡ ಯತ್ನಾಳ್ ಕಿಡಿಕಾರಿದರು

ಅಖಿಲ ಭಾರತ ಪಂಚಮಶಾಲಿ ಮಠಾಧೀಶರ ಒಕ್ಕೂಟ ಸ್ಥಾಪನೆ ರಾಜಕೀಯ ಪ್ರೇರಿತವಾಗಿದೆ. ಸಭೆ ಸೇರಿದ್ದವರು ಪಂಚಮಶಾಲಿ ಪೀಠಾಧಿಪತಿಗಳಲ್ಲ, ಅವರೆಲ್ಲ ವಿರಕ್ತ ಮಠದ ಸ್ವಾಮೀಜಿ ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದರು.

ಬಿಎಸ್‍ವೈ ಅಭಿಮಾನಿಗಳಿಂದ ಘೆರಾವ್

ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಗರದ ಹರಳುಕೋಟೆ ಆಂಜನೇಯ ದೇವಾಲಯ ಸಮೀಪ ಬಿಜೆಪಿ ವೀರಶೈವ ಸಮಾಜದ ಮುಖಂಡರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಭಿಮಾನಿಗಳು ಪ್ರತಿಭಟಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀರಶೈವ ಲಿಂಗಾಯತ ಸಮಾಜವನ್ನು 2 ಎ ಸೇರಿಸಬೇಕೆಂದು ಒತ್ತಾಯಿಸಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಯತ್ನಾಳ್ ಅವರ ಕಾರಿಗೆ ಮುತ್ತಿಗೆ ಹಾಕಿದ ಲಿಂಗಾಯತ ಸಮಾಜದ ಯುವಕರು, ಮುಖಂಡರು ಯತ್ನಾಳ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುಖ್ಯಮಂತ್ರಿ ವಿರುದ್ಧ ಯಾವುದೇ ಹೇಳಿಕೆಗಳನ್ನು ಕೊಡಬಾರದು, ಸಮಯದಾಯ ಒಡೆಯುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.

ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿ ಯತ್ನಾಳ್ ಅವರಿಗೆ ಭದ್ರತೆ ಒದಗಿಸಿದರು.


Spread the love