ಯುವಕರು ಕೆಲಸ ನೀಡುವ ಉದ್ಯಮಿಗಳಾಗಿ: ಎಸ್.ಎ.ರಾಮದಾಸ್

Spread the love

ಯುವಕರು ಕೆಲಸ ನೀಡುವ ಉದ್ಯಮಿಗಳಾಗಿ: ಎಸ್.ಎ.ರಾಮದಾಸ್

ಮೈಸೂರು: ದೇಶದ ಭವಿಷ್ಯ ರೂಪಿಸುವ ಯುವಜನತೆ ಶಿಕ್ಷಣದ ಜತೆಗೆ ವಿವಿಧ ಕೌಶಲಗಳನ್ನು ಬೆಳೆಸಿಕೊಂಡು ಕೆಲಸ ಕೊಡುವ ಉದ್ಯಮಿಗಳಾಗಬೇಕು ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ರಾಜ್ಯ ಕೌಶಲಾಭಿವೃದ್ಧಿ ನಿಗಮ, ಜಿಲ್ಲಾ ಕೌಶಾಲಾಭಿವೃದ್ಧಿ ಅಧಿಕಾರಿಗಳ ಕಚೇರಿ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಹಾಗೂ ಕಾರ್ಮಿಕರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಿದ್ದ ಕೌಶಲ ತರಬೇತಿ, ಉದ್ಯೋಗ ಮಾಹಿತಿ ಹಾಗೂ ನೇಮಕಾತಿ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗ ಕಲ್ಪಿಸಬೇಕು ಎಂಬ ಉದ್ದೇಶದಿಂದ ಇಲ್ಲಿಯೇ ಉದ್ಯೋಗ ಮೇಳ ಆಯೋಜಿಸಲಾಗಿದೆ. ಯುವಕರು ಉದ್ಯೋಗ ಅರಸಿ ಬೇರೆಡೆ ಹೋಗಬೇಕಿಲ್ಲ. ಅನೇಕ ಕಂಪನಿಗಳವರು ಬಂದಿದ್ದಾರೆ. ವಿದ್ಯೆಯ ಜತೆಗೆ ತಮ್ಮಲ್ಲಿರುವ ಪ್ರತಿಭೆ, ನೈಪುಣ್ಯ, ಕೌಶಲವನ್ನು ಉದ್ಯೋಗದಾತ ಕಂಪನಿಗಳ ಸಮ್ಮುಖದಲ್ಲಿ ಪ್ರಸ್ತುತಪಡಿಸಬೇಕು ಎಂದು ಹೇಳಿದರು.

ಸಿಗುವ ಕೆಲಸದಲ್ಲಿ ಉತ್ತಮ ಅನುಭವ ಹಾಗೂ ತರಬೇತಿ ಪಡೆದಾಗ ಉತ್ತಮ ಸಾಧನೆ ಮಾಡಲು ಸಾಧ್ಯ. ಕೌಶಲ ತರಬೇತಿಗಳನ್ನು ಪಡೆದಾಗ ಉತ್ತಮ ಉದ್ಯೋಗ. ಉದ್ಯೋಗಾಕಾಂಕ್ಷಿಗಳಿಗೆ ಕೌಶಲ ಇರಬೇಕು. ಉದ್ಯೋಗ ಸಿಕ್ಕಾಗ ಹಿಂಜರಿಯದೇ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಅಲ್ಲದೇ ಒಂದು ಉದ್ಯೋಗದಲ್ಲಿ ಪಡೆದುಕೊಂಡ ಕೌಶಲ ತರಬೇತಿ ಮುಂದಿನ ಉದ್ಯೋಗಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕೆಲಸಕ್ಕೆ ಎಂದು ಕೆನಡಾಗೆ ಹೋದ ರೈತರು ಇಂದು ಅಲ್ಲಿನ ಭೂಮಾಲೀಕರಾಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ಇಲ್ಲಿ ಪಡೆದ ಕೌಶಲ ತರಬೇತಿ. ಕೌಶಲ ಪಡೆಯುವುದು ಎಷ್ಟು ಮುಖ್ಯವೋ ಕೆಲಸ ನೀಡುವ ಉದ್ಯಮಿ ಆಗುವುದು ಕೂಡ ಅಷ್ಟೇ ಮುಖ್ಯ ಎಂದರು.

ಚಲನಚಿತ್ರ ನಟ ಅಜಯ್ ರಾವ್ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಸಂದರ್ಶನಕ್ಕೆ ಸಿದ್ಧತೆ ನಡೆಸಿಕೊಂಡು ಬಂದಿದ್ದೀರಾ. ಸಂದರ್ಶನ ಎಂದರೇ ಕೇವಲ ಕೆಲಸ ಪಡೆಯುವುದಲ್ಲ. ನಮ್ಮನ್ನು ನಾವು ವಿಮರ್ಶಿಸಿಕೊಳ್ಳುವುದು. ನಮ್ಮ ಅಂತರಾಳದಲ್ಲಿನ ನಿಜವಾದ ವ್ಯಕ್ತಿತ್ವ, ಮನಸ್ಸು, ಅನುಭವ ಅರಿಯಬೇಕು. ಆ ಮೂಲಕ ಸಾಮರ್ಥ್ಯ, ಶಕ್ತಿ ಅರ್ಥೈಸಿಕೊಳ್ಳಬೇಕು ಎಂದರು.

ಚಲನಚಿತ್ರನಟ ಪವನ್ ತೇಜ ಮಾತನಾಡಿ, ಭವಿಷ್ಯ ರೂಪಿಸಿಕೊಳ್ಳಲು ಮೇಳಕ್ಕೆ ಬಂದಿದ್ದೀರಾ. ಇದನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು. ಆಸಕ್ತ ಕ್ಷೇತ್ರಗಳನ್ನು ಆಯ್ದುಕೊಂಡು ಗುರಿ ತಲುಪಬೇಕು. ಉತ್ತಮ ವ್ಯಕ್ತಿತ್ವ, ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ವಿವಿಧ ಕಂಪನಿಗಳಿಗೆ ಆಯ್ಕೆಯಾದ ಉದ್ಯೋಗಕಾಂಕ್ಷಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ಶ್ರೀನಿವಾಸ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ನಗರ ಪಾಲಿಕೆ ಸದಸ್ಯೆ ಶಾರದಮ್ಮ ಈಶ್ವರ್, ಪಾರ್ಥಸಾರಥಿ, ವಡಿವೇಲು, ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ಸಹಾಯಕ ನಿರ್ದೇಶಕಿ ಡಿ.ಎಂ.ರಾಣಿ ಇದ್ದರು.


Spread the love