
ಯುವಜನತೆ ಭಾರತದ ರತ್ನಗಳಾಗಬೇಕು: ಡಾ. ರಾಜೇಂದ್ರ ಕೆ.ವಿ
ಮಂಗಳೂರು: ಜಗತ್ತಿನಲ್ಲಿ ಭಾರತೀಯತೆಯನ್ನು ಎತ್ತಿ ಹಿಡಿದ ಮೇರು ವ್ಯಕ್ತಿ ಸ್ವಾಮಿ ವಿವೇಕಾನಂದರು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಬಣ್ಣಿಸಿದರು.
ಅವರು ಜ.12ರ ಬುಧವಾರ ಜಿಲ್ಲಾಡಳಿತ, ನೆಹರೂ ಯುವ ಕೇಂದ್ರ ಹಾಗೂ ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಯುವ ಜನತೆ ದುಶ್ಚಚಗಳಿಂದ ದೂರವಿದ್ದು, ಸ್ವಸ್ಥ್ಯ ಸಮಾಜದ ನಿರ್ಮಾಣಕ್ಕೆ ಕಟಿಬದ್ಧರಾಗಬೇಕು, ವಿವೇಕಾನಂದರ ಆದರ್ಶಗಳ್ನನು ಪಾಲಿಸಿ ದೇಶ ಎಂದೂ ಮರೆಯದ ಭಾರತದ ರತ್ನಗಳಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಮಾತನಾಡಿ, ಯುವಜನತೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಿ ಸ್ಪಷ್ಟ ಗುರಿ ಹಾಗೂ ನಿರಂತರ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.
159ನೇ ವಿವೇಕಾನಂದ ಜಯಂತಿಯ ಬಗ್ಗೆ ನೆಹರೂ ಯುವಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ರಘುವೀರ್ ಸೂಟರ್ಪೇಟೆ ಪ್ರಸ್ತಾವಿಕವಾಗಿ ಮಾತನಾಡಿದರು.
ಡಾ. ಪ್ರಕಾಶಚಂದ್ರ ಶಿಶಿಲ, ಡಾ. ಶೈಲಾರಾಣಿ ಬಿ, ಡಾ. ಶೇಷಪ್ಪ ಕೆ, ಪ್ರೊ, ಗೋಪಾಲ್ ಎಂ ಗೋಖಲೆ ಉಪಸ್ಥಿತರಿದ್ದರು.
ಡಾ. ನವೀನ್ ಕೊಣಾಜೆ ಸ್ವಾಗತಿಸಿದರು. ದ್ವಿತೀಯ ಬಿ.ಕಾಂ ಎ ತರಗತಿಯ ದೀಕ್ಷಾ ಮತ್ತು ಬಳಗದವರು ಆಶಯಗೀತೆ ಹಾಡಿದರು. ಪ್ರೊ. ಜೆಫ್ರಿ ರೊಡ್ರಿಗಸ್ ವಂದನಾರ್ಪಣೆ ಮಾಡಿದರು.