ಯುವಜನರಿಗೆ ಮೋದಿಯವರ ನಿಜ ಬಣ್ಣ ತಿಳಿಯುತ್ತಿದೆ – ರಕ್ಷಾ ರಾಮಯ್ಯ

Spread the love

ಯುವಜನರಿಗೆ ಮೋದಿಯವರ ನಿಜ ಬಣ್ಣ ತಿಳಿಯುತ್ತಿದೆ – ರಕ್ಷಾ ರಾಮಯ್ಯ

ಉಡುಪಿ: ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಮೋಸ ಮಾಡಿದ್ದಾರೆ ಈಗ ಯುವಜನರಿಗೆ ನರೇಂದ್ರ ಮೋದಿ ಮತ್ತು ಬಿಜೆಪಿಯ ನಿಜವಾದ ಬಣ್ಣ ಇದೀಗ ತಿಳಿಯುತ್ತಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಅಧ್ಯಕ್ಷ ರಕ್ಷಾ ರಾಮಯ್ಯ ಹೇಳಿದರು.

ಅವರು ಬುಧವಾರ ಉಡುಪಿ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಕೋವಿಡ್‌ ವಾರಿಯರ್ಸ್‌ ಗಳಿಗೆ ಸನ್ಮಾನಿಸಿ ಮಾತನಾಡಿದರು.

‘ಬರೀ ಭರವಸೆ ನೀಡಿ ವಂಚಿಸುವ ಮೋದಿ ಸರಕಾರ ಭರವಸೆಗೆ ತಕ್ಕಂತೆ ನಡೆದುಕೊಂಡಿಲ್ಲ. ವಿದೇಶದಿಂದ ಕಪ್ಪು ಹಣ ವಾಪಸ್‌ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ನೀಡುತ್ತೇವೆ ಎಂದು ಮೋದಿ ಹೇಳಿದ್ದರು. ಈವರೆಗೆ ಒಬ್ಬರ ಅಕೌಂಟಿಗೂ 15 ರೂ. ಜಮೆಯಾಗಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಸುವ ಮೋದಿ ಹೇಳಿಕೆ ಸುಳ್ಳಾಗಿದೆ ಎಂದರು.

ರಾಜ್ಯದಲ್ಲಿ ಕೂಡ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕ್ರಿಮಿನಲ್‌ ಚಟುವಟಿಕೆಗಳು ಹೆಚ್ಚಾಗಿದ್ದು ಇದರಿಂದ ಜನರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಜಾತಿ ಜಾತಿಗಳ ಮಧ್ಯೆ ಕಂದಕ ಸೃಷ್ಟಿಸಿದ್ದು ಬಿಜೆಪಿಗರ ದೊಡ್ಡ ಸಾಧನೆಯಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ದೇಶದ ಉನ್ನತಿಗೆ ಯುವ ಕಾಂಗ್ರೆಸ್‌ ತನ್ನದೇ ಆದ ಸೇವೆಯನ್ನು ನೀಡಿದೆ ಎನ್ನುವುದನ್ನು ಯಾರೂ ಕೂಡ ಅಲ್ಲಗಳೆಯುವಂತಿಲ್ಲ. ಅಂದು ಒಂದು ಉದ್ದೇಶಕ್ಕೆ ತುರ್ತು ಪರಿಸ್ಥಿತಿ ಘೊಷಣೆಯಾಗಿದ್ದರೆ ಇಂದು ದೇಶದಲ್ಲಿ ಪ್ರತಿನಿತ್ಯ ತುರ್ತುಪರಿಸ್ಥಿತಿಯ ವಾತಾವರಣ ಇದೆ. ಮಹಾಮಾರಿ ಕೋರೊನಾದಿಂದ ದೇಶದ ಜನರು ಗೃಹಬಂಧನದಲ್ಲಿ ಇರುವಂತೆ ಮೋದಿ ಸರಕಾರ ಮಾಡಿದೆ. ಜಿಲ್ಲೆಯಲ್ಲಿ ಈ ವರೆಗೆ 3 ಬಿಜೆಪಿ ಕಾರ್ಯಕರ್ತರ ಕೊಲೆಗಳಾಗಿದ್ದು ಅದರಲ್ಲಿ ಬಿಜೆಪಿಯ ನಾಯಕರೇ ನೇರವಾಗಿ ಭಾಗಿಯಾಗದ್ದು ಅದರ ವಿರುದ್ದ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ ಮಾಡಿಕೊಂಡು ಬಂದಿದೆ. ಯಡಮೊಗೆಯಲ್ಲಿ ಇತ್ತೀಚೆಗೆ ನಡೆದ ಉದಯ್‌ ಗಾಣಿಗ ಕೊಲೆ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಮತ್ತು ಆತನ ಕುಟುಂಬಕ್ಕೆ ಗರಿಷ್ಠ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿ ಜಿಲ್ಲೆಯಾದ್ಯಂತ 10 ಬ್ಲಾಕ್‌ ಗಳಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಕೋವಿಡ್ ವಾರಿಯರ್‌ಗಳಾದ ಆಪತ್ಬಾಂಧವ ಆಸೀಫ್‌, ನಿತ್ಯಾನಂದ ಒಳಕಾಡು, ಅನ್ಸಾರ್‌ ಅಹ್ಮದ್‌, ಈಶ್ವರ್‌ ಮಲ್ಪೆ, ಡಾ|ಸುನೀತಾ ಶೆಟ್ಟಿ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್‌ ಕೇಂದ್ರ ಮತ್ತು ರಾಜ್ಯ ಪದಾಧಿಕಾರಿಗಳಾದ ಅನಿಲ್‌ ಯಾದವ್‌, ವಿದ್ಯಾ ಬಾಲಕೃಷ್ಣ, ಸುರಭಿ ದ್ವಿವೇದಿ, ಭವ್ಯ, ಹನುಮ ಕಿಶೋರ್‌, ಹೆಚ್‌ ಎನ್‌ ಜಗದೀಶ್‌, ದೀಪಿಕಾ ರೆಡ್ಡಿ, ಮೆರಿಲ್‌ ರೇಗೊ, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ಅಶೋಕ್‌ ಕುಮಾರ್‌ ಕೊಡವೂರು, ನಗರಸಭೆಯ ವಿಪಕ್ಷ ನಾಯಕ ರಮೇಶ್‌ ಕಾಂಚನ್‌, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ದೀಪಕ್‌ ಕೋಟ್ಯಾನ್‌, ಉಪಾಧ್ಯಕ್ಷ ವಿಶ್ವಾಸ್‌ ಅಮೀನ್‌, ಬ್ಲಾಕ್‌ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love