
ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹಂತಕರನ್ನು ಎನ್ಕೌಂಟರ್ ಮಾಡಲು ಕುಯಿಲಾಡಿ ಆಗ್ರಹ
ಉಡುಪಿ: ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಹಂತಕರನ್ನು ಶೀಘ್ರ ಪತ್ತೆ ಹಚ್ಚಿ ಕಾನೂನಾತ್ಮಕ ಉಗ್ರ ಶಿಕ್ಷೆಗೆ ಒಳಪಡಿಸುವ ಜೊತೆಗೆ ಹಂತಕರ ಹಿಂದಿರುವ ಸಂಘಟನೆಯನ್ನು ಪತ್ತೆ ಹಚ್ಚಿ ರೂವಾರಿ ಜಿಹಾದಿಗಳನ್ನು ಹೈದರಾಬಾದ್ ಮಾದರಿಯಲ್ಲಿ ಎನ್ಕೌಂಟರ್ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.
ಶಿವಮೊಗ್ಗದ ಹರ್ಷ ಹತ್ಯೆಯ ಬಳಿಕ ಇದೀಗ ನಡೆದಿರುವ ಪ್ರವೀಣ್ ನೆಟ್ಟಾರು ಕಗ್ಗೊಲೆ ರಾಜ್ಯ ಗೃಹ ಖಾತೆಗೆ ಸವಾಲಾಗಿ ಪರಿಣಮಿಸಿದ್ದು, ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಗುರಿಯಾಗಿಸಿ ನಡೆಯುತ್ತಿರುವ ಇಂತಹ ನರಮೇಧಕ್ಕೆ ತಕ್ಷಣ ತಡೆಯೊಡ್ಡಿ ಉತ್ತರ ಪ್ರದೇಶದ ಕ್ಷಿಪ್ರ ಕಾರ್ಯಾಚರಣೆ ಮಾದರಿಯಲ್ಲಿ ಕಾರ್ಯಪ್ರವೃತ್ತರಾಗುವ ಅನಿವಾರ್ಯತೆ ಇದೆ.
ಮಾಜಿ ಸಿ.ಎಂ. ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ ಹಲವಾರು ಹಿಂದೂ ಕಾರ್ಯಕರ್ತರ ಮಾರಣ ಹೋಮ ನಡೆದಿದ್ದರೂ, ಮತಾಂಧ ಜಿಹಾದಿ ಮಾನಸಿಕತೆಯ ಆರೋಪಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿರುವ ಕಾಂಗ್ರೆಸ್ಸಿಗೆ ಈ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲು ಹವಣಿಸುತ್ತಿರುವ ಹಂತಕರ ಹುಟ್ಟಡಗಿಸುವಲ್ಲಿ ಶೀಘ್ರ ಪರಿಣಾಮಕಾರಿ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.