ರಂಗಭೂಮಿ ಚಟುವಟಿಕೆಗಳಿಗೆ ಪ್ರೋತ್ಸಾಹ ಅಗತ್ಯ

Spread the love

ರಂಗಭೂಮಿ ಚಟುವಟಿಕೆಗಳಿಗೆ ಪ್ರೋತ್ಸಾಹ ಅಗತ್ಯ

ಚಾಮರಾಜನಗರ: ಜನಪದ ಮತ್ತು ರಂಗಕಲೆಗಳ ತವರೂರಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಜೆಎಸ್ಎಸ್ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್ ಎಂ ಸ್ವಾಮಿ ಹೇಳಿದರು.

ಇಲ್ಲಿನ ರಂಗವಾಹಿನಿ ಸಂಸ್ಥೆ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿ ಶಿವ ಸಂಚಾರ ಬೆಳ್ಳಿ ಹಬ್ಬ ಪ್ರಯುಕ್ತ ರಾಜ್ಯದ 31 ಜಿಲ್ಲೆಗಳಲ್ಲಿ ಅಕ್ಟೋಬರ್ 15 ರಿಂದ ನವೆಂಬರ್ 15 ರ ಒಳಗೆ ಏಕಕಾಲಕ್ಕೆ ಶರಣರ ನಾಟಕಗಳ ತರಬೇತಿ ಹಾಗೂ ಪ್ರದರ್ಶನ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ರೋಟರಿ ಭವನದ ಆವರಣದಲ್ಲಿ ಮಹದೇವ ಹಡಪದ ಅವರ ಉರಿಲಿಂಗಪೆದ್ದಿ ನಾಟಕ ರಂಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ರಂಗಭೂಮಿಯ ಅಭಿವೃದ್ಧಿ ದೃಷ್ಟಿಯಿಂದ ಯುವಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುತ್ತಿರುವುದು ಶ್ಲಾಘನೀಯ. ಸ್ಥಳೀಯ ಪ್ರತಿಭೆಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಹೇಳಿದರು.

ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಹಾಗೂ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪುರಸ್ಕೃತ ಸಿಎಂ ನರಸಿಂಹಮೂರ್ತಿ ಮಾತನಾಡಿ, ಯುವ ಜನರಲ್ಲಿ ಶಿಸ್ತು, ಮಾತನಾಡುವ ಕಲೆ, ಸಮಯ ಪ್ರಜ್ಞೆ ಹಾಗೂ ನೈತಿಕ ಪ್ರಜ್ಞೆಯನ್ನು ರಂಗಭೂಮಿ ಕಲಿಸಿಕೊಡುತ್ತದೆ. ಕನ್ನಡ ರಂಗಭೂಮಿಗೆ ಅದ್ವಿತೀಯ ಕೊಡುಗೆ ನೀಡಿರುವ ನಮ್ಮ ಜಿಲ್ಲೆಯ ಹೆಮ್ಮೆಯ ವರನಟ ಡಾ. ರಾಜಕುಮಾರ್ ಅವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಕೆಂಪನಪುರ ಮಹದೇವಸ್ವಾಮಿ ಮಾತನಾಡಿ ರಂಗಭೂಮಿ ಕಲೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದು. ರೋಟರಿ ಸಂಸ್ಥೆಯು ಶಿಬಿರಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ಎಚ್ಎಸ್ ಗಂಗಾಧರ್. ರೋಟರಿ ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ್, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೆಂಕಟರಮಣ ಸ್ವಾಮಿ ರಂಗದ ಸಂಸ್ಥೆಯ ಅಧ್ಯಕ್ಷ ಕಲೆ ನಟರಾಜ್, ರಂಗ ಶಿಬಿರದ ನಿರ್ದೇಶಕ ಮಧುಕರ್ ಮಳವಳ್ಳಿ ಕಿಚ್ಚ ರಾಜಶೇಖರ್, ಜಾನಪದ ಕಲಾವಿದ ಗೌರಿಶಂಕರ್ ಗೊರವರ ಕುಣಿತದ ಕಲಾವಿದ ರಾಮಸಮುದ್ರದ ಶಂಕರ್ ಮೊದಲಾದವರು ಹಾಜರಿದ್ದರು.


Spread the love