ರಂಗಾಯಣದಲ್ಲಿ ಆರ್‌ಎಸ್‌ಎಸ್ ಸಿದ್ಧಾಂತ ಪ್ರಚಾರ: ಎಚ್.ವಿಶ್ವನಾಥ್

Spread the love

ರಂಗಾಯಣದಲ್ಲಿ ಆರ್‌ಎಸ್‌ಎಸ್ ಸಿದ್ಧಾಂತ ಪ್ರಚಾರ: ಎಚ್.ವಿಶ್ವನಾಥ್

ಮೈಸೂರು: ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪರಿಗೆ ಎಂಎಲ್ ಸಿ ಆಗುವ ಬಯಕೆಯಾದರೆ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪರಿಗೆ ಜ್ಞಾನಪೀಠ ಪ್ರಶಸ್ತಿಯ ಆಸೆಯಾಗಿದೆ. ಹೀಗಾಗಿ ಅವರು ರಂಗಾಯಣದಲ್ಲಿ ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಹೊರಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಆರೋಪ ಮಾಡಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಂತಹ ಹೆಸರಿಟ್ಟುಕೊಂಡು ಅಡ್ಡಂಡ ಕಾರ್ಯಪ್ಪ ಅಪಮಾನ ಮಾಡುತ್ತಿದ್ದಾರೆ. ಇನ್ನೂ ಮುಂದೆ ಕಾರ್ಯಪ್ಪ ಎನ್ನುವ ಹೆಸರನ್ನು ತೆಗೆದು ಬಿಡಿ. ಅಡ್ಡಂಡನಿಂದ ಕೊಡಗಿಗೆ ಅವಮಾನವಾಗಿದೆ. ಆತನಿಗೆ ಎಂಎಲ್ ಸಿ ಆಗಲು ಬಹಳ ಅರ್ಜೆಂಟ್ ಆಗಿದೆ ಅದಕ್ಕಾಗಿ ಆರ್ ಎಸ್ ಎಸ್ ವಿಚಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಡ್ಡಂಡ ಕಾರ್ಯಪ್ಪನೊಂದಿಗೆ ಸಾಹಿತಿ ಭೈರಪ್ಪ ಸೇರಿರುವುದು ವಿಷಾದನೀಯಸಿಎಂ ಕೂಡಲೇ ಅಡ್ಡಂಡ ಕಾರ್ಯರನ್ನು ತಕ್ಷಣ ತೆಗೆಯಬೇಕು ಎಂದು ಆಗ್ರಹಿಸಿದರು.

ಕೋಲಾರದಲ್ಲಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್, ಸಿದ್ದರಾಮಯ್ಯ ವರುಣಾ, ಕೋಲಾರ ಎಲ್ಲಿ ನಿಂತ್ರೂ ಗೆಲ್ತಾರೆ. ಆದರೆ ಚಾಮುಂಡೇಶ್ವರಿಯಲ್ಲಿ ಸೋಲಿಸಿದ ಹಾಗೆ ಮತ್ತೇ ಸೋಲಿಸಲು ಜೆಡಿಎಸ್, ಬಿಜೆಪಿ ಎರಡೂ ಪಕ್ಷಗಳು ಈಗ ತಂತ್ರಗಾರಿಕೆ ಪ್ರಾರಂಭಿಸಿವೆ ಎಂದರು.

ಮುಖ್ಯಮಂತ್ರಿಗಳು ಕೂಡಲೇ ಹಣಕಾಸು ಇಲಾಖೆಗೆ ಒಬ್ಬ ಸಚಿವರನ್ನು ನೇಮಿಸಬೇಕು. ಸಿಎಂ ಬಳಿ 8 ರಿಂದ 10 ಇಲಾಖೆಗಳಿವೆ. ಯಾವ ಯಾವ ಇಲಾಖೆಗಳು ಸಿಎಂ ಬಳಿ ಇರುತ್ತದೆಯೋ ಅದು ಸತ್ತು ಹೋಗುತ್ತದೆ. ಈ ಹಿಂದೆ ದೇವರಾಜ ಅರಸು, ವೀರಪ್ಪ ಮೊಯ್ಲಿ ಅಂತವರು ಹಣಕಾಸು ಖಾತೆಯನ್ನು ತಾವೇ ನಿಭಾಯಿಸದೆ ಇತರರಿಗೆ ನೀಡಿದ್ದರು. ಹಣಕಾಸು ಖಾತೆ ನಿಭಾಯಿಸಲು ಹೆಚ್ಚು ಸಮಯಬೇಕು. ಆದರೆ ಸಿಎಂಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಸಿಎಂ ತಮ್ಮ ಬಳಿ ಇರುವ ಹಣಕಾಸು ಖಾತೆಯನ್ನು ಬೇರೆಯವರಿಗೆ ನೀಡಬೇಕು ಎಂದು ಸಲಹೆ ನೀಡಿದರು.

ಮಹಾತ್ಮಾ ಗಾಂಧೀಜಿ ಅವರು, ಉಪ್ಪಿನ ಮೇಲೆ ತೆರಿಗೆ ಹಾಕಿದ್ದಕ್ಕೆ ಅಂದು ಸತ್ಯಾಗ್ರಹ ಮಾಡಿದರು. ಆದರೀಗ ಬಿಜೆಪಿ ಸರ್ಕಾರ ಜಿಎಸ್‌ಟಿ ಮೂಲಕ ಅದೇ ಉಪ್ಪಿನ ಮೇಲೆ ತೆರಿಗೆ ಹಾಕಿದೆ. ರಾಜ್ಯದಲ್ಲಿ ಜಿಎಸ್‌ಟಿ ಯಿಂದ 24 ಸಾವಿರ ಕೋಟಿ ಸಂಗ್ರಹವಾಗುತ್ತಿದೆ. ಈ ಪೈಕಿ 12 ಸಾವಿರ ಕೋಟಿ ಹಣವನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸುತ್ತಿದ್ದೇವೆ. ಹೆಚ್ಚು ಜಿಎಸ್‌ಟಿ ಕಟ್ಟುವವರ ಪೈಕಿ ದೇಶದಲ್ಲಿ ನಾವೇ 2ನೆ ಸ್ಥಾನದಲ್ಲಿದ್ದೇವೆ. ಒಂದೆಡೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ತೆರಿಗೆ ವಂಚನೆಯಾಗುತ್ತಿದ್ದರೆ, ಮತ್ತೊಂದೆಡೆ ನಮ್ಮ ಪಾಲಿನ ತೆರಿಗೆ ಹಣ ಕೇಂದ್ರ ವಾಪಸ್ ನಮಗೆ ಕೊಡುತ್ತಿಲ್ಲ ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದರು.

ತಾವು ರಾಜ್ಯದ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ನಮ್ಮ ಶೈಕ್ಷಣಿಕ ಪ್ರಗತಿಯನ್ನು ಕಂಡು ರಾಷ್ಟ್ರಪತಿಗಳು ನಮಗೆ ಸನ್ಮಾನ ಮಾಡಿದ್ದರು. ಆದರೀಗ ಸರ್ಕಾರ ಬಣ್ಣ ಹೊಡೆಯುವುದರಲ್ಲಿಯೂ ವಿವಾದ ಸೃಷ್ಟಿಸಿ ಶಿಕ್ಷಣವನ್ನು ಹಾಳು ಮಾಡುತ್ತಿದೆ. ಕಾಲೇಜು ಶಿಕ್ಷಣವೂ ಅಧ್ವಾನವಾಗಿದೆ ಎಂದು ದೂರಿದರು.


Spread the love