ರಂಗ ವೈಭವ -2022: ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

Spread the love

ರಂಗ ವೈಭವ -2022: ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಹಾಗೂ ಆಳ್ವಾಸ್ ಕಾಲೇಜು ಮೂಡುಬಿದಿರೆ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ರಂಗಭೂಮಿ ಸ್ಪರ್ಧೆ `ರಂಗ ವೈಭವ -2022’ ಬುಧವಾರ ಸ್ಕೌಟ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಕಿ ಡಾ. ಕಿಶೋರಿ ನಾಯಕ್, ರಂಗಕಲೆ, ಸಾಹಿತ್ಯ, ಸಂಗೀತರಹಿತ ಬದುಕು ಕಲ್ಪಿಸಿಕೊಳ್ಳಲು ಅಸಾಧ್ಯ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ. ಇದು ವಿವಿಧ ರಂಗಗಳಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸುತ್ತದೆ. ಸಿಕ್ಕ ಅವಕಾಶದಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಂಡು ಉನ್ನತವಾದದ್ದನ್ನು ಸಾಧಿಸಬೇಕು ಎಂದರು.

ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ವಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ನಾಗಪ್ಪ ಗೌಡ ಆರ್, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿ ವಿಜ್ಞಾನ ವಿಭಾಗದ ಡೀನ್ ಡಾ. ಮಂಜುನಾಥ ಪಟ್ಟಾಭಿ, ಯಕ್ಷರಂಗಾಯಣ ಹಾಗೂ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್‍ರಾಮ್ ಸುಳ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಯೋಗಿಶ್ ಕೈರೋಡಿ ನಿರೂಪಿಸಿ ವಂದಿಸಿದರು.

ರಂಗ ವೈಭವ -2022ರ ನಾಲ್ಕು ವಿಭಾಗಗಳ ಸ್ಪರ್ಧೆಗಳಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಉಡುಪಿಯ ಎಂಜಿಎಂ ಕಾಲೇಜು ರನ್ನರ್ ಅಪ್ ಸ್ಥಾನ ಪಡೆಯಿತು.

ಫಲಿತಾಂಶ:
ಮಿಮಿಕ್ರಿಯಲ್ಲಿ ಕೋಟೇಶ್ವರದ ಎಸ್‍ಕೆವಿಎಮ್‍ಎಸ್ ಕಾಲೇಜಿನ ವಿಶ್ವಾಸ್ ಪ್ರಥಮ, ಮುಲ್ಕಿಯ ವಿಜಯ ಕಾಲೇಜಿನ ಅಭಿರಾಮ್ ದ್ವಿತೀಯ, ಆಳ್ವಾಸ್ ಕಾಲೇಜಿನ ರೋನಿಟ್ ರಾಯ್ ತೃತೀಯ, ಕಿರು ಪ್ರಹಸನದಲ್ಲಿ ಆಳ್ವಾಸ್ ಕಾಲೇಜು ಪ್ರಥಮ, ಉಡುಪಿಯ ಎಂಜಿಎಂ ಕಾಲೇಜು ದ್ವಿತೀಯ, ಸುರತ್ಕಲ್‍ನ ಗೋವಿಂದದಾಸ್ ಕಾಲೇಜು ತೃತೀಯ, ಮೂಕಾಭಿನಯದಲ್ಲಿ ಉಡುಪಿಯ ಎಂಜಿಎಂ ಕಾಲೇಜು ಪ್ರಥಮ, ಸುರತ್ಕಲ್‍ನ ಗೋವಿಂದದಾಸ್ ಕಾಲೇಜು ದ್ವಿತೀಯ, ಆಳ್ವಾಸ್ ಕಾಲೇಜು ತೃತೀಯ. ಏಕಾಂಕ ನಾಟಕದಲ್ಲಿ ಆಳ್ವಾಸ್ ಕಾಲೇಜು ಪ್ರಥಮ, ಎಂಜಿಎಂ ಕಾಲೇಜು ದ್ವಿತೀಯ, ಮಂಗಳೂರು ವಿವಿ ತೃತೀಯ ಸ್ಥಾನ ಗಳಿಸಿತು.


Spread the love