ರಕ್ತದಾನ ಶಿಬಿರಗಳಿಗೆ ಹೆಚ್ಚಿನ ಆದ್ಯತೆ ನೀಡಲು ಜಿಲ್ಲಾಧಿಕಾರಿ ಸಲಹೆ

Spread the love

ರಕ್ತದಾನ ಶಿಬಿರಗಳಿಗೆ ಹೆಚ್ಚಿನ ಆದ್ಯತೆ ನೀಡಲು ಜಿಲ್ಲಾಧಿಕಾರಿ ಸಲಹೆ

ಮಂಗಳೂರು:  ಕೌಶಲ್ಯ ಶಿಬಿರಗಳೊಂದಿಗೆ ಯುವಜನರನ್ನು ರಕ್ತದಾನ ಶಿಬಿರಗಳಲ್ಲಿಯೂ ಹೆಚ್ಚಾಗಿ ಭಾಗವಹಿಸುವಂತೆ ಅಗತ್ಯ ಸಲಹೆ ಹಾಗೂ ಸಹಕಾರ ನೀಡಬೇಕು, ಆ ಮೂಲಕ ಜಿಲ್ಲೆಯಲ್ಲಿ ರಕ್ತದ ಸಂಗ್ರಹ ಅಗತ್ಯ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಅಭಿಪ್ರಾಯಪಟ್ಟರು.

ಅವರು ಮಾ.29ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರದ ಜಿಲ್ಲಾ ಸಲಹಾ ಸಮಿತಿ 2021- 2022ನೇ ಸಾಲಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೆಹರು ಯುವ ಕೇಂದ್ರದ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ, ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಉದ್ಯೋಗ ಮತ್ತು ಪರಿಸರ ಸಂರಕ್ಷಣೆ ಹಾಗೂ ಯುವಜನರಿಗೆ ಉದ್ಯೋಗದ ಬಗ್ಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಯವರು, ಯುವ ಜನರು ದುಶ್ಚಟಗಳು ಹಾಗೂ ಸಮಾಜ ಘಾತುಕ ಕೃತ್ಯಗಳಿಂದ ಮುಕ್ತರಾಗುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ, ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿರುವುದರಿಂದ ಈ ಸಮಯದಲ್ಲಿ ಯುವಕರನ್ನು ಬಳಸಿಕೊಂಡು ಬೀಚ್ ಕ್ಲೀನಿಂಗ್, ನಗರ ಸ್ವಚ್ಚತೆ, ಶ್ರಮದಾನ ಕೆಲಸಗಳನ್ನು ಮಾಡುವಂತೆ ಮನವೊಲಿಸಬೇಕು ಎಂದರು.

ಯುವಕರೇ ಹೆಚ್ಚಾಗಿ ಮೊಬೈಲ್ ಫೆÇೀನ್‍ಗಳನ್ನು ಬಳಸುತ್ತಿರುವುದರಿಂದ ಅವರಿಗೆ ಅದರಿಂದಾಗುವ ದುಷ್ಪರಿಣಾಮ, ಸೈಬರ್ ಕ್ರೈಮ್, ಹನಿ ಟ್ರ್ಯಾಪ್ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಿ ಬ್ಯಾಂಕಿಂಗ್ ಮಿತ್ರಗಳಂತಹ ಜನಪಯೋಗಿ ಆ್ಯಪ್‍ಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಅವರು ಸೂಚಿಸಿದರು.

ಲೀಡ್ ಬ್ಯಾಂಕ್ ಮಾನ್ಯೇಜರ್ ಪ್ರವೀಣ್ ಡಿಜಿಟಲ್ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ ಪೇಟೆ ನೆಹರು ಯುವ ಕೇಂದ್ರದ 2021-22ನೇ ಸಾಲಿನ ಕಾರ್ಯ ಚಟುವಟಿಕೆಗಳ ವರದಿ ಸಲ್ಲಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜಕರಾದ ಡಾ. ನಾಗರತ್ನ ಕೆ., ಎನ್.ಸಿ.ಸಿ ಅಧಿಕಾರಿ ವಿಠ್ಠಲ್, ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಸರೋಜಿನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿ. ಸೋಜಾ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಇಂಜಿನಿಯರ್ ಜಿ. ನರೇಂದ್ರ ಬಾಬು, ಯುವ ರೆಡ್ ಕ್ರಾಸ್ ಕಾರ್ಯದರ್ಶಿ ಕುಸುಮ ತಾರ ಬಿ.ಕೆ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎಸ್.ಜೆ. ಹೇಮಚಂದ್ರ, ಪರಿಸರವಾದಿ ಜಿತ್ ಮಿಲನ್ ರೋಚ್, ನೆಹರು ಯುವ ಕೇಂದ್ರದ ಜಗದೀಶ್ ಕೆ.ಎ.ಎ, ಪ್ರೀತೇಶ್, ಸುಶ್ಮಿತಾ ಬಿ. ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿದ್ದರು.


Spread the love