ರಘುಪತಿ ಭಟ್ ಮತ್ತವರ ಶಾಸಕರ ಟೀಂ ಎಲ್ಲಿದೆ?: ಕೆ. ಗೋಪಾಲ ಪೂಜಾರಿ ಪ್ರಶ್ನೆ

Spread the love

ರಘುಪತಿ ಭಟ್ ಮತ್ತವರ ಶಾಸಕರ ಟೀಂ ಎಲ್ಲಿದೆ?: ಕೆ. ಗೋಪಾಲ ಪೂಜಾರಿ ಪ್ರಶ್ನೆ

ಕುಂದಾಪುರ: ಕಳೆದ ವಿಧಾಸಭಾ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಒಂದು ತಿಂಗಳೊಳಗೆ ಮರಳು ನೀತಿಯನ್ನು ಬದಲಾವಣೆ ಮಾಡಿ ಬಡವರಿಗೆ ಕೈಗೆಟಕುವ ದರದಲ್ಲಿ ಮರಳು ಸಿಗುವಂತೆ ಮಾಡತ್ತೇವೆ ಎಂದ ಉಡುಪಿಯ ಶಾಸಕ ರಘುಪತಿ ಭಟ್ ಮತ್ತವರ ಶಾಸಕರ ಟೀಂ ಇವತ್ತು ಎಲ್ಲಿ ಹೋಗಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪ್ರಶ್ನಿಸಿದ್ದಾರೆ.

ಅವರು ಶನಿವಾರ ಮಧ್ಯಾಹ್ನ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ದ ಆರು ದಿನಗಳ ಕಾಲ ಹೆಜಮಾಡಿಯಿಂದ ಬೈಂದೂರಿನ ತನಕ ನಡೆದ ಜನಧ್ವನಿ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶಾಸಕ ಸುಕುಮಾರ್ ಶೆಟ್ಟಿಯವರು ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಒತ್ತಿನೆಣೆಯಲ್ಲಿ ಏರ್ ಪೊರ್ಟ್, ಮೆಡಿಕಲ್ ಕಾಲೇಜು, ಐದು ನದಿಗಳ ಜೋಡಣೆ ಮಾಡುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಈ ಭಾಗದ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಚುನಾವಣೆಯಲ್ಲಿ ಗೆದ್ದು ಇದೀಗ ಎರಡುವರೆ ವರ್ಷ ದಾಟಿ ಸರಿಸುಮಾರು ಮೂರು ವರ್ಷ ಕಳೆದರೂ ಕೂಡ ಅವರು ಯಾವುದೇ ಆಶ್ವಾಸನೆ ಈಡೇರಿಸಿಲ್ಲ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಬೈಂದೂರನ್ನು ಅಧೀಕೃತ ತಾಲೂಕಾಗಿ ಪರಿವರ್ತನೆ ಮಾಡಿದ್ದೇನೆ. ಆದರೆ ಬೈಂದೂರು ತಾಲೂಕಿಗೆ ಇದುವರೆಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಮಿನಿವಿಧಾನಸೌಧ ಸೇರಿದಂತೆ ಇನ್ನಿತರ ಸರ್ಕಾರಿ ಕಚೇರಿಗಳ ನಿರ್ಮಾಣ ಕಾರ್ಯ ನಡೆದಿಲ್ಲ. ಸುಕುಮಾರ್ ಶೆಟ್ಟರು ನಾನು ಶಾಸಕನಾಗಿದ್ದ ವೇಳೆಯಲ್ಲಿ ತಂದ ಕೆಲಸಗಳಿಗೆ ಫೋಟೋ ಹಾಕಿಕೊಂಡು ಪ್ರಚಾರ ಮಾಡಿಕೊಳ್ಳುತ್ತಿದ್ದರೆ ವಿನಃ ಅವರಿಂದ ಏನೂ ಕೆಲಸಗಳು ನಡೆದಿಲ್ಲ ಎಂದು ಕೆ, ಗೋಪಾಲ ಪೂಜಾರಿಯವರು ಆರೋಪಿಸಿದರು.

ಸೌಕೂರು ಏತ ನೀರಾವರಿ ಯೋಜನೆ ನಮ್ಮ ಪ್ರಯತ್ನ:
ಸೌಕೂರು ಏತ ನೀರಾವರಿ ಯೋಜನೆ ತರಬೇಕಾದರೆ ನನ್ನ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟರ ಪ್ರಯತ್ನ ಸಾಕಷ್ಟಿದೆ. ಇವತ್ತು ಆ ಯೋಜನೆ ಜಾರಿಯಾದ ಮೇಲೆ ಅದಕ್ಕೆ ಪ್ರಯತ್ನ ನಡೆಸಿದ ನನ್ನ ಹಾಗೂ ಪ್ರತಾಪ್ಚಂದ್ರ ಶೆಟ್ಟಿಯವರ ಹೆಸರು ಶಾಸಕರ ಬಾಯಿಯಿಂದ ಒಂದೇ ಒಂದು ಮಾತು ಬಂದಿಲ್ಲ. ಉಪ್ಪುಂದ ಡ್ಯಾಂ ಕೂಡ ಮೂರು ನಾಲ್ಕು ತಿಂಗಳುಗಳ ಕಾಲ ಅದಕ್ಕೆ ಯೋಜನೆ ರೂಪಿಸಿ ಎಲ್ಲಾ ವ್ಯವಸ್ಥೆ ಮಾಡಿದರೂ ಕೂಡ ಈ ಯೋಜನೆಗೆ ಹಿಂದಿನ ಸರ್ಕಾರ ಪಾತ್ರದ ಬಗ್ಗೆ, ನನ್ನ ಶ್ರಮದ ಬಗ್ಗೆ ಜನರಿಗೆ ಹೇಳಿಲ್ಲ. ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವ ಭ್ರಮೆಯಲ್ಲಿ ಶಾಸಕರಿದ್ದಾರೆ. ಆದರೆ ನನ್ನ ಅವಧಿಯಲ್ಲಿ ಏನು ಅಭಿವೃದ್ದಿ ಕೆಲಸಗಳು ಆಗಿವೆ ಅದರ ಮೇಲೆ ಹೆಚ್ಚು ಅಭಿವೃದ್ದಿ ಕೆಲಸಗಳೇ ಆಗಿಲ್ಲ ಎಂದು ಗೋಪಾಲ ಪೂಜಾರಿ ದೂರಿದರು.


Spread the love