ರಜತ ಮಹೋತ್ಸವ ಸಂಭ್ರಮದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ

Spread the love

ರಜತ ಮಹೋತ್ಸವ ಸಂಭ್ರಮದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 25ನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು, ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಸಂಘದ ರಜತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ 2023ರಲ್ಲಿ ವರ್ಷಪೂರ್ತಿ ಒಟ್ಟು 25 ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಮಹಮ್ಮದ್ ಶರೀಫ್ ಕಾರ್ಕಳ ಹೇಳೀದರು.


ಉಡುಪಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿ ಹಾಗೂ ಕಾರ್ಕಳ, ಕಾಪು, ಕುಂದಾಪುರ, ಬೈಂದೂರು, ಬ್ರಹ್ಮಾವರ, ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ರಜತ ಮಹೋತ್ಸವದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸ್ವಾಗತ ಸಮಿತಿ ಹಾಗೂ ಇತರ ವಿವಿಧ ಸಮಿತಿಗಳನ್ನು ರಚಿಸಿ ಕಾರ್ಯೋನ್ಮುಖರಾಗಿದ್ದೇವೆ.

ಕಾರ್ಕಳದಲ್ಲಿ ಜ.27ರಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಜತ ಮಹೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸುವ ಮೂಲಕ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅದೇ ರೀತಿ ಫೆಬ್ರವರಿ 27ರಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ವೀರೇಂದ್ರ ಹೆಗ್ಗಡೆ ಅವರು ರಜತ ಮಹೋತ್ಸವದ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದ್ದರು.

ಇದೀಗ ರಜತ ಮಹೋತ್ಸವ ಸಂಭ್ರಮದ ಉದ್ಘಾಟನಾ ಸಮಾರಂಭವನ್ನು ಮಾ.19ರಂದು ರವಿವಾರ ಮಧ್ಯಾಹ್ನ 2ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಸಾಹಿತಿ, ಲೇಖಕರು, ಕಲಾವಿದರು, ಉದ್ಯಮಿಗಳು, ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಸದ್ಯವೇ ಬಿಡುಗಡೆ ಮಾಡಲಾಗುವುದು.

ದೇಶದ ಪತ್ರಿಕೋದ್ಯಮದ ಇತಿಹಾಸದಲ್ಲಿ ಉಡುಪಿ ಪತ್ರಕರ್ತರಿಗೆ ವಿಶೇಷ ಸ್ಥಾನಮಾನ ಇದೆ. ನಾವು ಉಡುಪಿ ಜಿಲ್ಲೆಯ ಸಾಕ್ಷಿಪ್ರಜ್ಞೆಯಂತೆ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತ ಬರುತ್ತಿದ್ದೇವೆ. ಈ ರಜತ ಮಹೋತ್ಸವದ ಸಂಭ್ರಮದಲ್ಲಿ ಸಂಘಟಿತರಾಗಿ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂಬುದು ನಮ್ಮ ಸಂಘದ ಆಶಯವಾಗಿದೆ. ಈ ಸಂದರ್ಭದಲ್ಲಿ 50ಲಕ್ಷ ರೂ. ಮೊತ್ತದ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸುವ ಗುರಿಯನ್ನು ಕೂಡ ನಾವು ಹೊಂದಿದ್ದೇವೆ.

ನೂತನ ಉಡುಪಿ ಜಿಲ್ಲೆ ರಚನೆಯಾದ ಬಳಿಕ ಸ್ಥಾಪನೆಗೊಂಡ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 1998ರ ಎಪ್ರಿಲ್ 12ರಂದು ಉದ್ಘಾಟನೆ ಗೊಂಡಿತ್ತು. ಆಗಿನ ಸಂಘದ ರಾಜ್ಯಾಧ್ಯಕ್ಷರಾಗಿದ್ದ ಶ್ರೀಜಿ.ಕೆ.ಸತ್ಯ ಅವರು ನಮ್ಮ ಜಿಲ್ಲಾ ಸಂಘವನ್ನು ಉದ್ಘಾಟಿಸಿದ್ದರು. ಆ ದಿನವನ್ನು ನಾವು ಈ ವರ್ಷದಿಂದ ಸ್ಥಾಪನಾ ದಿನವನ್ನಾಗಿ ಆಚರಿಸಲು ಉದ್ದೇಶಿಸಿದ್ದೇವೆ.

ರಜತ ಮಹೋತ್ಸವದ 25 ಕಾರ್ಯಕ್ರಮಗಳ ಪೈಕಿ ಉಳಿದ ಕಾರ್ಯಕ್ರಮಗಳ ಪಟ್ಟಿ ಈ ರೀತಿ ಇದೆ. ಸಂಘದ ಡೈರಿ ಬಿಡುಗಡೆ, ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರಿಗೆ ಬೃಹತ್ ಆರೋಗ್ಯ ಶಿಬಿರ, ದತ್ತಿ ಉಪನ್ಯಾಸ, ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ, ಕಾರ್ಟೂನ್ ಮೇಳ, ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟ, ಪತ್ರಕರ್ತರಿಗೆ ಕಾರ್ಯಾಗಾರ, ಪತ್ರಕರ್ತರಿಂದ ಗ್ರಾಮ ವಾಸ್ತವ್ಯ, ಫೋನ್ ಇನ್ ಕಾರ್ಯಕ್ರಮ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ, ಫೋಟೋಗ್ರಫಿ ಸ್ಪರ್ಧೆ, ಸ್ಮರಣ ಸಂಚಿಕೆ ಬಿಡುಗಡೆ, ಹಿರಿಯ ಪತ್ರಕರ್ತರಿಗೆ ಸನ್ಮಾನ, ಪತ್ರಕರ್ತರ ಸ್ನೇಹ ಕೂಟ, ಪತ್ರಕರ್ತರ ಸಾಂಸ್ಕೃತಿಕ ಕಾರ್ಯಕ್ರಮ, ಅಗಲಿದ ಪತ್ರಕರ್ತರ ಕುರಿತ ಪುಸ್ತಕ ರಚನೆ, ಸೈಕಲ್ ಜಾಥ, ರಾಜ್ಯಾಧ್ಯಕ್ಷ ರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲು ಯೋಜನೆ ರೂಪಿಸಲಾಗಿದೆ.

ಚುನಾವಣೆ ಒತ್ತಡದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಸಮಾರಂಭವನ್ನು ಸರಳವಾಗಿ ಆಚರಿಸುತ್ತಿರುವುದರಿಂದ ಡಿಸೆಂಬರ್ ತಿಂಗಳಲ್ಲಿ ರಜತ ಮಹೋತ್ಸವ ಸಮಾರೋಪ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಇದರಲ್ಲಿ ಮುಖ್ಯಮಂತ್ರಿಯನ್ನು ಆಹ್ವಾನಿಸುವ ಬಗ್ಗೆ ಈಗಾಗಲೇ ಚರ್ಚೆಗಳನ್ನು ಮಾಡಲಾಗಿದೆ.

ಉಡುಪಿ ಬ್ರಹ್ಮಗಿರಿ ನಾಯರ್ಕೆರೆಯಲ್ಲಿ ಕಾರ್ಯಾಚರಿಸುತ್ತಿರುವ ಸಂಘದ ಕೇಂದ್ರ ಕಚೇರಿಯಾಗಿರುವ ಪತ್ರಿಕಾ ಭವನ ಕಟ್ಟಡವನ್ನು ವಿಸ್ತರಿಸುವ ಯೋಜನೆ ಯನ್ನು ಕೂಡ ಹಾಕಿಕೊಂಡಿದ್ದೇವೆ. ಒಟ್ಟು ರಜತ ಮಹೋತ್ಸವ ಕಾರ್ಯಕ್ರಮ ವನ್ನು 2-3ಕೋಟಿ ರೂ. ವೆಚ್ಚದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಂಘವು ಹೊಂದಿರುವ ಈ ಮಹೋದ್ದೇಶಕ್ಕೆ ದಾನಿಗಳ ನೆರವಿನ ಅವಶ್ಯಕತೆ ಇದೆ. ಇದಕ್ಕೆ ಎಲ್ಲರು ಸಹಕಾರ ನೀಡುವ ಭರವಸೆಯನ್ನು ನಾವು ಹೊಂದಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಅಲೆವೂರು, ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ರಾಷ್ಟ್ರೀಯ ಸಮಿತಿ ಸದಸ್ಯರಾದ ಅರುಣ್ ಶಿರೂರು, ರಜತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಜಯಕರ ಸುವರ್ಣ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here