ರಜೆ ಕುರಿತ ಡಿಸಿ ಆದೇಶ ಪತ್ರ ಎಡಿಟ್: ಗೊಂದಲಗಳಿಗೆ ತೆರೆ ಎಳೆದ ಜಿಲ್ಲಾಡಳಿತ

Spread the love

ರಜೆ ಕುರಿತ ಡಿಸಿ ಆದೇಶ ಪತ್ರ ಎಡಿಟ್: ಗೊಂದಲಗಳಿಗೆ ತೆರೆ ಎಳೆದ ಜಿಲ್ಲಾಡಳಿತ

ಉಡುಪಿ: ಭಾರಿ ಮಳೆಯ ಹಿನ್ನಲೆಯಲ್ಲಿ ಹೆಬ್ರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ಜುಲೈ 5 ರಂದು ಮಂಗಳವಾರ ಅಪರ ಜಿಲ್ಲಾಧಿಕಾರಿ ವೀಣಾ ಬಿ ಎನ್‌ ಅವರು ರಜೆ ಘೋಷಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಕೆಲವು ಕಿಡಿಗೇಡಿಗಳು ಜಿಲ್ಲಾಧಿಕಾರಿಯವರು ಹಿಂದೆ ನೀಡಿದ ರಜೆಯ ಆದೇಶ ಪತ್ರವನ್ನು ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡುವುದರ ಮೂಲಕ ಗೊಂದಲ ಎಬ್ಬಿಸುತ್ತಿರುವುದು ಬೆಳಕಿಗೆ ಬಂದಿದೆ.

ಕಳೆದ ವಾರ ಜಿಲ್ಲಾಧಿಕಾರಿ ಕೂರ್ಮ ರಾವ್‌ ಅವರು ಮಳೆಯ ಪ್ರಯುಕ್ತ ರಜೆ ಘೋಷಣೆ ಮಾಡಿದ ಆದೇಶ ಪತ್ರವನ್ನು ಯಥಾವತ್ತಾಗಿ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಸದ್ಯ ಮಂಗಳವಾರ ಜುಲೈ 5 ರಂದು ಕೇವಲ ಜಿಲ್ಲೆಯ ಹಬ್ರಿ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವುದರಿಂದ, ಮುಂಜಾಗ್ರತಾ ಕ್ರಮವಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 5ರಂದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ವ್ಯಾಪ್ತಿಯ ಅಂಗನವಾಡಿ, ಸರಕಾರಿ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಕಿವಿಗೊಡದಂತೆ ಜಿಲ್ಲಾಡಳಿತ ಮನವಿ ಮಾಡಿದೆ


Spread the love