ರಸ್ತೆ ದುರಸ್ತಿ ಮಾಡದಕ್ಕೆ ಕೊರವೇ ಅಸಮಾಧಾನ

Spread the love

ರಸ್ತೆ ದುರಸ್ತಿ ಮಾಡದಕ್ಕೆ ಕೊರವೇ ಅಸಮಾಧಾನ

ಮಡಿಕೇರಿ: ಮಳೆಗೆ ರಸ್ತೆಗಳು ಹಾಳಾಗಿದ್ದು, ದಸರಾ ಸಮೀಪಿಸಿದರೂ ರಸ್ತೆ ದುರಸ್ತಿ ಮಾಡದೆ ಇರುವುದನ್ನು ಖಂಡಿಸಿರುವ ಎಂದು ಕೊಡಗು ರಕ್ಷಣಾ ವೇದಿಕೆಯ ಮಡಿಕೇರಿ ನಗರಾಧ್ಯಕ್ಷ ಚೊಟ್ಟೆಯಂಡ ಶರತ್ ಹಾಗೂ ಕಾರ್ಯಾಧ್ಯಕ್ಷ ಆರ್.ಮಹೇಶ್ ಅವರು ನಗರಸಭೆ ಮಾತ್ರ ರಸ್ತೆಗಳ ದುರಸ್ತಿಗೆ ಆಗ್ರಹಿಸಿದ್ದಾರೆ.

ದಸರಾ ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಹಬ್ಬದ ವಾತಾವರಣವನ್ನು ಸೃಷ್ಟಿಸಬೇಕಾದ ನಗರಸಭೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ಸೆ.26 ರಿಂದ ನಗರ ಸಂಚಾರ ಆರಂಭಿಸುತ್ತಿವೆ. ಆದರೆ ರಸ್ತೆಗಳೆಲ್ಲವೂ ಹದಗೆಟ್ಟಿದ್ದು, ಹೊಂಡ, ಗುಂಡಿಗಳಾಗಿವೆ. ವಾಹನಗಳು ಮಾತ್ರವಲ್ಲ ಪಾದಾಚಾರಿಗಳು ಕೂಡ ನಡೆದಾಡಲು ಸಾಧ್ಯವಾಗದ ಸ್ಥಿತಿ ಇದೆ.

ದುರಸ್ತಿ ಕಾಣದ ರಸ್ತೆಗಳು, ಶುಚಿತ್ವವಿಲ್ಲದ ಚರಂಡಿಗಳು, ಕಾಡು ತುಂಬಿರುವ ಬಡಾವಣೆಗಳು, ಬೀದಿ ದೀಪಗಳಿಲ್ಲದ ವಿದ್ಯುತ್ ಕಂಬಗಳು, ಬೀದಿ ನಾಯಿಗಳ ಹಾವಳಿ, ಈ ಎಲ್ಲಾ ಅವ್ಯವಸ್ಥೆಗಳ ನಡುವೆ ಕರಗಗಳ ಸಂಚಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಪ್ರಮುಖರು, ನಗರಸಭೆಯ ಆಡಳಿತ ವ್ಯವಸ್ಥೆಗೆ ನಗರದ ಅಭಿವೃದ್ಧಿಯ ಬಗ್ಗೆ ನೈಜ ಕಾಳಜಿ ಇಲ್ಲವೆಂದು ಟೀಕಿಸಿದ್ದಾರೆ.

ಜನರಲ್ಲಿ ದಸರಾ ಹಬ್ಬದ ಸಂಭ್ರಮವಿದ್ದರೂ ನಗರದಲ್ಲಿ ಜನೋತ್ಸವದ ಮೆರಗನ್ನು ತುಂಬುವಲ್ಲಿ ನಗರಸಭೆ ವಿಫಲವಾಗಿದೆ. ಐತಿಹಾಸಿಕ ಕಟ್ಟಡಗಳು ಮತ್ತು ಪಾರ್ಕ್‌ಗಳಿಗೆ ಸುಣ್ಣ, ಬಣ್ಣ ಬಳಿಯುವ ಕನಿಷ್ಠ ಕಾರ್ಯವನ್ನು ಕೂಡ ಮಾಡಿಲ್ಲ. ದಸರಾ ಉತ್ಸವಕ್ಕೆ 2 ರಿಂದ 3 ಲಕ್ಷ ಮಂದಿ ಮಡಿಕೇರಿಗೆ ಬರುವ ನಿರೀಕ್ಷೆ ದಸರಾ ಸಮಿತಿಯಲ್ಲಿದೆ. ಆದರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಗರಸಭೆ ಯಾವುದೇ ತಯಾರಿಗಳನ್ನು ಮಾಡಿಕೊಂಡಂತೆ ಕಂಡು ಬರುತ್ತಿಲ್ಲ.

ನಗರದ ಅಭಿವೃದ್ಧಿಗೆ 45 ಕೋಟಿ ರೂ.ಗಳನ್ನು ಮೀಸಲಿಡಲಾಗುತ್ತಿದೆ ಎಂದು ಕೆಲವು ತಿಂಗಳುಗಳ ಹಿಂದೆಯಷ್ಟೇ ಜನಪ್ರತಿನಿಧಿಗಳು ಘೋಷಣೆಯನ್ನು ಮಾಡಿದ್ದರು. ಆದರೆ ಭೂಮಿಪೂಜೆ ನಡೆಯಿತೇ ಹೊರತು 23 ವಾರ್ಡ್‌ಗಳಲ್ಲಿ ಯಾವೊಂದು ಕಾಮಗಾರಿಯೂ ನಡೆದಿಲ್ಲ. ಕೆಲವು ಕಡೆ ರಸ್ತೆ ಡಾಂಬರೀಕರಣ ಮಾಡಲಾಯಿತ್ತಾದರೂ ಒಂದೆರಡು ಮಳೆಗೆ ಕೊಚ್ಚಿ ಹೋಗಿದೆ. ನಗರ ಅಭಿವೃದ್ಧಿ ಶೂನ್ಯವಾಗಿರುವುದನ್ನು ಗಮನಿಸಿದರೆ ಅನುದಾನ ಬಳಕೆಯ ಬಗ್ಗೆ ಸಂಶಯ ಮೂಡುತ್ತಿದೆ ಎಂದು ಶರತ್ ಹಾಗೂ ಮಹೇಶ್ ಆರೋಪಿಸಿದ್ದಾರೆ.

ತಕ್ಷಣ ಎಲ್ಲಾ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳ ಕಾಮಗಾರಿಗಳನ್ನು ಆರಂಭಿಸದಿದ್ದಲ್ಲಿ ಆಡಳಿತ ವ್ಯವಸ್ಥೆಯ ರಾಜಿನಾಮೆಗೆ ಒತ್ತಾಯಿಸಿ ನಗರಸಭೆಯ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


Spread the love

Leave a Reply

Please enter your comment!
Please enter your name here