
ರಾಜಕೀಯದ ಜಾತ್ರೆಯಲ್ಲಿ ರಾಜಕಾರಣಿಗಳ ಮೆರವಣಿಗೆ ಶುರು!
ಮೈಸೂರು: ಕಳೆದ ಐದು ವರ್ಷಗಳ ಕಾಲ ಮೌನವಾಗಿದ್ದ ರಾಜಕೀಯ ನಾಯಕರು ಚುನಾವಣೆಗೆ ದಿನಗಳು ಹತ್ತಿರ ಬರುತ್ತಿದ್ದಂತೆಯೇ ನಿದ್ದೆಯಿಂದ ಎಚ್ಚೆತ್ತುಕೊಂಡು ಜನರ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಒಂದು ಹಂತದ ಮೆರವಣಿಗೆಯನ್ನು ಮುಗಿಸಿ ಕೈತೊಳೆದುಕೊಂಡಿದ್ದಾರೆ.
ಕೇವಲ ಆರೋಪ ಪ್ರತ್ಯಾರೋಪಗಳಲ್ಲಿ ಕಾಲ ಕಳೆದವರು ಈಗ ಭರವಸೆಯ ಆಶಾ ಗೋಪುರವನ್ನೇ ನಿರ್ಮಿಸಲು ಆರಂಭಿಸಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿದ್ದರೂ ಪರ್ವಾಗಿಲ್ಲ. ಕೊನೆಗಳಿಗೆಯಲ್ಲಿ ಹಣ ಹೆಂಡ, ಉಡುಗೊರೆ ಹಂಚಿದರೆ ಸುಲಭವಾಗಿ ಮತಗಳನ್ನು ಸೆಳೆಯಬಹುದು ಎಂಬ ನಿರ್ಧಾರಕ್ಕೆ ಬಂದಿರುವ ನಾಯಕರು ಅದನ್ನೇ ಮಾಡುತ್ತಿದ್ದಾರೆ. ಇದಕ್ಕೆ ದಿನ ಬೆಳಗಾದರೆ ಅಲ್ಲಲ್ಲಿ ಪತ್ತೆಯಾಗುತ್ತಿರುವ ಅಕ್ರಮ ಹಣ, ಮದ್ಯ, ಉಡುಗೊರೆಗಳು ಸಾಕ್ಷಿಯಾಗಿವೆ.
ಹಾಗೆನೋಡಿದರೆ ಇದುವರೆಗೆ ದೊರೆತ ಸಮಯವೇ ರಾಜಕೀಯ ಮಾಡಲು ಸಾಧ್ಯವಾಗದಿರುವಾಗ ಇನ್ನು ಕೇವಲ ತಿಂಗಳಷ್ಟೇ ಬಾಕಿಯಿದ್ದು ಅಷ್ಟು ಸಮಯದಲ್ಲಿ ಮತದಾರರನ್ನು ತಲುಪಲು ಸಾಧ್ಯನಾ? ಈಗಾಗಲೇ ಶಾಸಕರು, ಸಚಿವರಾದವರ ಪೈಕಿ ಹಲವರು ತಮ್ಮ ಕ್ಷೇತ್ರಕ್ಕೆ ಭೇಟಿಯೇ ನೀಡಿಲ್ಲ. ಕ್ಷೇತ್ರವನ್ನು ಮರೆತು ಹೊದ್ದು ಮಲಗಿದವರೆಲ್ಲರೂ ಈಗ ಮೈಕೊಡವಿಕೊಂಡು ಎದ್ದು ಕುಳಿತಿದ್ದಾರೆ.
ತಮ್ಮ ಕ್ಷೇತ್ರದ, ರಾಜ್ಯದ ಜನರ ಬಗ್ಗೆ ಕಳಕಳಿ ಅವರಲ್ಲಿ ಕಾಣಿಸುತ್ತಿದೆ. ಇದು ನಾಟಕೀಯ, ಓಲೈಕೆಯ ಪ್ರತಿರೂಪ ಎನ್ನುವುದು ಜನರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಆದರೆ ಮತದಾರರು ನೀಡುವ ಮತವೇ ಗೆಲುವಿಗೆ ಬಹುಮುಖ್ಯವಾಗಿರುವುದರಿಂದ ಅದನ್ನು ಪಡೆಯುವುದು ಹೇಗೆ ಎಂಬುದಷ್ಟೇ ಪ್ರಮುಖವಾಗಿದೆ.
ಒಂದು ಹಂತದ ಸಮಾವೇಶ, ಯಾತ್ರೆಗಳನ್ನೆಲ್ಲ ಮುಗಿಸಿಕೊಂಡು ಬಂದಿರುವ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ಇನ್ನು ಮುಂದೆ ಮತ ಕೇಳಲು ಜನರ ಮುಂದೆ ಬರಬೇಕಾಗಿದೆ. ಹೀಗಾಗಿ ಮತ ಸೆಳೆಯಲು ಬರೀ ಭರವಸೆಗಳನ್ನು ನೀಡುವುದಂತು ನಿಜ. ಚುನಾವಣಾ ಪ್ರಚಾರಗಳ ಮೂಲಕ ಶಕ್ತಿ ಪ್ರದರ್ಶನಕ್ಕಿಳಿಯ ಬೇಕಾಗಿದೆ. ಹೀಗಾಗಿ ಹಳ್ಳಿಗಳಿಂದ ಆರಂಭವಾಗಿ ನಗರಗಳ ತನಕ ಚುನಾವಣಾ ಪ್ರಚಾರ ಸಭೆ, ಮತಯಾಚನೆಗಳು ನಡೆಯಲಿವೆ.
ಚುನಾವಣಾ ಪ್ರಚಾರ ಸಭೆಗಳಲ್ಲಿ ಜನರನ್ನು ಸೇರಿಸುವುದೇ ಪಕ್ಷಗಳಿಗೆ ಸವಾಲ್ ಆಗಿದೆ. ಅದರಲ್ಲೂ ಜನ ಹೆಚ್ಚು ಸೇರಿದಷ್ಟೂ ಪಕ್ಷಗಳ ಮತ್ತು ನಾಯಕರ ಪ್ರತಿಷ್ಟೆ ಹೆಚ್ಚುವುದರಿಂದ ಆ ನಿಟ್ಟಿನಲ್ಲಿ ಜನರನ್ನು ಕರೆತರಬೇಕಾಗುತ್ತದೆ. ಚುನಾವಣಾ ಪ್ರಚಾರಗಳಿಗೆ ತೆರಳಿದರೆ ದಿನಕ್ಕೆ 300 ರಿಂದ 500 ಸಿಗುತ್ತದೆ ಎಂಬ ಕಾರಣಕ್ಕಾಗಿ ಅತ್ತ ಮುಖ ಮಾಡುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಾರ್ಯಗಳಿಗೆ ಕಾರ್ಮಿಕರು ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಚುನಾವಣೆ ಕಳೆದು ಫಲಿತಾಂಶ ಬರುವ ತನಕ ಇಡೀ ರಾಜ್ಯ ಸಂಪೂರ್ಣ ರಾಜಕೀಯಮಯ ವಾಗುವುದರಿಂದ ಎಲ್ಲವನ್ನೂ ಜನ ಸಹಿಸಿಕೊಳ್ಳಬೇಕಾಗಿದೆ. ಆದರೆ ಏನೇ ಭರವಸೆ, ಆರೋಪ ಪ್ರತ್ಯಾರೋಪಗಳನ್ನು ಮಾಡಿದರೂ ಅಂತಿಮವಾಗಿ ಮತದಾರರು ಹಾಕುವ ಮತದಿಂದಲೇ ನಾಯಕರ ಸೋಲುಗೆಲುವು ನಿಂತಿರುವುದರಿಂದ ಪ್ರಬುದ್ಧ ಮತದಾರರು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಕಾಲ ಬಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.