ರಾಜ್ಯದಲ್ಲಿ ಉದ್ಯೋಗಕ್ಕೆ ಯಾವುದೇ ಕೊರತೆ ಇಲ್ಲ – ಸಚಿವ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ್

Spread the love

ರಾಜ್ಯದಲ್ಲಿ ಉದ್ಯೋಗಕ್ಕೆ ಯಾವುದೇ ಕೊರತೆ ಇಲ್ಲ – ಸಚಿವ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ್

ಕುಂದಾಪುರ: ರಾಜ್ಯದಲ್ಲಿ ಉದ್ಯೋಗಕ್ಕೆ ಯಾವುದೇ ಕೊರತೆ ಇಲ್ಲ. ಉದ್ಯೋಗಾವಕಾಶಗಳು ಹೆಚ್ಚಾಗಿದ್ದು, ಆಕಾಂಕ್ಷಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ದೇಶದ ವಿವಿಧ ಕಡೆಗಳಿಂದ ರಾಜ್ಯಕ್ಕೆ ಉದ್ಯೋಗಾಂಕ್ಷಿಗಳು ವಲಸೆ ಬರುತ್ತಿದ್ದಾರೆ. ಯುವ ಸಮುದಾಯಕ್ಕೆ ಅವರ ಕನಸಿನ ಉದ್ಯೋಗಕ್ಕೆ ಅವಕಾಶ ನೀಡಬೇಕು ಎನ್ನುವ ಉದ್ದೇಶದಿಂದ ಉದ್ಯೋಗ ಮೇಳದಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ್ ಹೇಳಿದರು.

ನಗರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬುಧವಾರ ಕರ್ನಾಟಕ ಕೌಶಲಾಭಿವೃದ್ಧಿ ನಿಗಮ, ಕೌಶಾಲಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉದ್ಯೋಗ ವಿನಿಮಯ ಕಚೇರಿ ಹಾಗೂ ಭಂಡಾರ್ಕಾರ್ಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್‌ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತ ಯುವ ಜನತೆ ಕರ್ನಾಟಕದಲ್ಲಿದ್ದಾರೆ. ಆದರೆ ಅವರಿಗೆ ಅವರ ಕನಸಿನ ಉದ್ಯೋಗ ಪಡೆಯಲು ಬೇಕಾದ ಅಗತ್ಯ ಮಾಹಿತಿಯ ಕೊರತೆಯಿದೆ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು, ಕೌಶಲ್ಯಾಭಿವೃದ್ಧಿ ಮಾಹಿತಿಗಳು ಒಂದೇ ಸೂರಿನಡಿ ದೊರೆಯುವಂತಹ ಸ್ಕಿಲ್ ಕನೆಕ್ಟ್ ಪೋರ್ಟಲ್ ಅನ್ನು ಜುಲೈ 15 ರಂದು ಲೋಕಾರ್ಪಣೆ ಮಾಡಲಿದ್ದು, ಈ ಪೋರ್ಟಲ್‌ನಿಂದ ವರ್ಚುವಲ್ ಮೂಲಕ ಯುವ ಜನತೆಯು ತಮಗೆ ಇಷ್ಠವಾದ ಉದ್ಯೋಗ ಪಡೆಯಲು ಬೇಕಿರುವ ಅರ್ಹತೆ, ಕೌಶಲ್ಯ , ಲಭ್ಯವಿರುವ ಉದ್ಯೋಗಗಳು ಮತ್ತು ಅಂತಹ ಉದ್ಯೋಗ ನೀಡುವ ಸಂಸ್ಥೆಗಳ ಸಂಪೂರ್ಣ ವಿವರಗಳನ್ನು ಅತ್ಯಂತ ಸರಳ ರೀತಿಯಲ್ಲಿ ಪಡೆಯಬಹುದಾಗಿದೆ ಎಂದರು.

ಕರ್ನಾಟಕವು ಪ್ರತಿಭಾವಂತರನ್ನು ಹೊಂದಿದ ರಾಜ್ಯಗಳಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದ್ದು, ರಾಜ್ಯದಲ್ಲಿ ಉದ್ಯೋಗಗಳಿಗೆ ಕೊರತೆ ಇಲ್ಲ , ಆದರೆ ಉದ್ಯೋಗಕ್ಕೆ ಸೇರುವವರ ಕೊರತೆ ಇದೆ. ಬೇರೆ ರಾಜ್ಯಗಳಿಂದ ಹೆಚ್ಚಿನ ಜನತೆ ಉದ್ಯೋಗ ಅರಸಿ ರಾಜ್ಯಕ್ಕೆ ಬರುತ್ತಿದ್ದಾರೆ. ಉದ್ಯೋಗ ಪಡೆಯಲು ಇಲ್ಲಿನ ಪ್ರತಿಭಾವಂತರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲು ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿದ್ದು, ಆ ಮೂಲಕ ಶಿಕ್ಷಣದಲ್ಲಿ ಕಡ್ಡಾಯವಾಗಿ ತಾಂತ್ರಿಕ ಕೌಶಲ್ಯವನ್ನು ನೀಡಲಾಗುತ್ತಿದೆ. ಸಮಾಜದಲ್ಲಿನ ವಿವಿಧ ಸಮಸ್ಯೆಗಳಿಗೆ ಉತ್ತಮ ಶಿಕ್ಷಣ,‌ ಜ್ಞಾನ, ಪ್ರತಿಭೆಗಳಿಂದ ಪರಿಹಾರ ನೀಡಲು ಸಾಧ್ಯವಿದೆ ಎಂದರು.

ರಾಜ್ಯದಿಂದ ಹೊರದೇಶಗಳಿಗೆ ಉದ್ಯೋಗಳಿಗೆ ತೆರಳುವವರಿಗೆ ಐ.ಎಂ.ಸಿ ಕೇಂದ್ರಗಳ ಮೂಲಕ ಎಲ್ಲಾ ಅಗತ್ಯ ಮಾಹಿತಿ, ನೆರವು ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡಲು 1200 ಐಟಿಐ ಕಾಲೇಜುಗಳಿದ್ದು,1.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 75000 ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಟಿಟಿಸಿ ಕಾಲೇಜುಗಳಿದ್ದು ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಸೀಟುಗಳಿಗೆ ಕೊರತೆಯಾಗಿಲ್ಲ ಎಂದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ರಾಜ್ಯದ ಜನಸಂಖ್ಯೆ ಶೇ. 1 ರಷ್ಟು ಜನರಿಗೆ ಮಾತ್ರ ಸರ್ಕಾರಿ ಉದ್ಯೋಗ ಪಡೆಯಲು ಆರ್ಥಿಕ ಇಲಾಖೆ ಅವಕಾಶ ಮಾಡಿಕೊಡುತ್ತದೆ. ಅದರಲ್ಲಿಯೂ ಖಾಲಿ ಹುದ್ದೆಯ ಕಾರಣದಿಂದಾಗಿ ಅಂದಾಜು 3.5 ಲಕ್ಷ ಮಂದಿ ಸರ್ಕಾರಿ ನೌಕರರು ಸೇವೆಯಲ್ಲಿ ಇದ್ದಾರೆ. ಉಳಿದ ಶೇ.99 ರಷ್ಟು ಮಂದಿ ಖಾಸಗಿ ಹಾಗೂ ಇತರ ಉದ್ಯೋಗಗಳನ್ನು ಆಶ್ರಯಿಸಬೇಕಾದ ಅನೀವಾರ್ಯತೆ ಇದೆ. ಉದ್ಯೋಗ ಮೇಳಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೂಡಲೇ ಉದ್ಯೋಗಕ್ಕಾಗಿ ನೇಮಕಾತಿ ಪತ್ರವನ್ನು ನೀಡಲು ಕ್ರಮ ಕೈಗೊಳ್ಳಬೇಕು. ಕುಂದಾಪುರದ ಉದ್ಯೋಗ ಮೇಳ ಮಾದರಿ ಮೇಳವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಉದ್ಯೋಗದಾತರು ಕ್ರಮ ವಹಿಸಬೇಕು ಎಂದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಎ.ಕಿರಣಕುಮಾರ ಕೊಡ್ಗಿ, ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಕೆ.ಶಾಂತಾರಾಮ ಪ್ರಭು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ, ಪುರಸಭೆಯ ಉಪಾಧ್ಯಕ್ಷ ಕೆ.ಸಂದೀಪ್ ಖಾರ್ವಿ ಇದ್ದರು.

ಜಿಲ್ಲಾ ಕೌಶಲಾಭಿವೃಧ್ಧಿ ಹಾಗೂ ಉದ್ಯಮಶೀಲತೆ ಇಲಾಖೆಯ ಅಧಿಕಾರಿ ಜಗದೀಶ್ ಸ್ವಾಗತಿಸಿದರು, ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಎನ್‌.ಪಿ.ನಾರಾಯಣ ಶೆಟ್ಟಿ ವಂದಿಸಿದರು, ಅಕ್ಷಯ್ ಶೆಟ್ಟಿ ಮೊಳಹಳ್ಳಿ ನಿರೂಪಿಸಿದರು.


Spread the love