
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ
ಮೈಸೂರು: ರಾಜ್ಯದಲ್ಲಿ ನಡೆಸಿರುವ ಎಲ್ಲಾ ಚುನಾವಣಾ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಅಲೆ ಇರುವುದರಿಂದ ಈ ಬಾರಿ ಕಾಂಗ್ರೆಸ್ 150 ಸೀಟುಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹರೀಶ್‌ಗೌಡ ತಿಳಿಸಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಪಡುವಾರಳ್ಳಿಯಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾಸ್, ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ದಿನಸಿ ಪದಾರ್ಥಗಳ ಬೆಲೆಗಳನ್ನು ಏರಿಸುವುದರ ಜೊತೆಗೆ ಮಜ್ಜಿಗೆ, ಮೊಸರು, ಹಾಲಿಗೂ ಜಿಎಸ್‌ಟಿ ಹಾಕಿ ಬಡಜನರು ಬದುಕುವುದೇ ಕಷ್ಟವಾಗಿದೆ ಎಂದರು.
ಭ್ರಷ್ಟಾಚಾರ, ಲಂಚ, ಹಗರಣಗಳನ್ನು ನಡೆಸಿರುವ ಬಿಜೆಪಿ ಪಕ್ಷವನ್ನು ಈ ಬಾರಿ ಜನ ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದ ಪಕ್ಷವಾಗಿದ್ದು ಅಧಿಕಾರಕ್ಕೆ ಬಂದ ತಕ್ಷಣ ಕಾಂಗ್ರೆಸ್ ಗ್ಯಾರಂಟಿ ಭರವಸೆಗಳಾದ ಪ್ರತಿ ಕುಟುಂಬದ ಬಡ ಮಹಿಳೆಗೆ ತಿಂಗಳಿಗೆ 2 ಸಾವಿರ ರೂ, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ತಲಾ 10 ಕೆಜಿ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂಪಾಯಿಗಳು ನೀಡಲಾಗುವುದು. ಆದ್ದರಿಂದ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಸಿದ್ದರಾಮಯ್ಯನವರ ಕೈಬಲ ಪಡಿಸಲು ನನಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪೈ. ಪ್ರಕಾಶ್, ಪೈ. ಚಿಕ್ಕಪುಟ್ಟಿ, ಸೀತಾರಾಂ, ಗುರು ಚಿನ್ನಸ್ವಾಮಿ ಹಾಗೂ ನೂರಾರು ಬೆಂಬಲಿಗರು ಹಾಜರಿದ್ದರು.