ರಾಜ್ಯದಲ್ಲಿ ಗೋಮಾಂಸ ಮಾರಾಟ ನಿಷೇಧ ಇಲ್ಲ: ಜೆ.ಸಿ. ಮಾಧುಸ್ವಾಮಿ

Spread the love

ರಾಜ್ಯದಲ್ಲಿ ಗೋಮಾಂಸ ಮಾರಾಟ ನಿಷೇಧ ಇಲ್ಲ: ಜೆ.ಸಿ. ಮಾಧುಸ್ವಾಮಿ

ಬೆಂಗಳೂರು: ಗೋಹತ್ಯೆ ನಿಷೇಧ ಮಸೂದೆ ಜಾರಿಯಾದರೂ ರಾಜ್ಯದಲ್ಲಿ ಗೋಮಾಂಸ ಮಾರಾಟ ನಿಷೇಧವಾಗುವುದಿಲ್ಲ ಎಂದು ಕಾನೂನು ಜೆ.ಸಿ.‌ಮಾಧುಸ್ವಾಮಿ ತಿಳಿಸಿದರು.

ಸೋಮವಾರ ಸಂಪುಟ ಸಭೆಯ ಬಳಿಕ‌ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಹೊಸ ಕಾಯ್ದೆ ಜಾರಿಯಾದರೂ ಎಮ್ಮೆ, ಕೋಣದ ಮಾಂಸ ಮಾರಾಟಕ್ಕೆ ನಿಷೇಧ ಇರುವುದಿಲ್ಲ. ಹಸುವಿನ ಮಾಂಸ ಮಾರಾಟ ಮಾತ್ರ ಸಂಪೂರ್ಣ ನಿಷೇಧವಾಗಲಿದೆ. ಚರ್ಮೋದ್ಯಮಕ್ಕೂ ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದರು.

1964ರ ಗೋಹತ್ಯೆ ನಿಷೇಧ ಕಾಯ್ದೆಯ ಪ್ರಕಾರ, 12 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹಸು, ಎಮ್ಮೆ, ಕೋಣಗಳನ್ನು ಮಾಂಸಕ್ಕಾಗಿ ವಧಿಸಲು ಅವಕಾಶವಿತ್ತು. ಈಗಿನ ತಿದ್ದುಪಡಿ ಮಸೂದೆಯ ಪ್ರಕಾರ, ಹಸು ಮತ್ತು ಎತ್ತುಗಳನ್ನು ಜೀವಿತಾವಧಿಯವರೆಗೂ ವಧಿಸಲು ಅವಕಾಶವಿಲ್ಲ. ಎಮ್ಮೆ ಮತ್ತು ಕೋಣಗಳನ್ನು 13 ವರ್ಷದ ಬಳಿಕ ವಧಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

ಗೋಹತ್ಯೆ ನಿಷೇಧ ಕಾಯ್ದೆಯ ತಿದ್ದುಪಡಿ. ಮಸೂದೆ‌ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲು ಸೋಮವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸುಗ್ರೀವಾಜ್ಞೆಯ ಪ್ರತಿಯನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಮಂಗಳವಾರ ರಾಜಭವನಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.


Spread the love