ರಾಜ್ಯದಲ್ಲಿ ನಡೆಯುತ್ತಿರುವ ಅಸ್ಪ್ರಶ್ಯತೆ ಘಟನೆಗಳು ಅತ್ಯಂತ ಕ್ರೌರ್ಯವಾದುದು : ಪ್ರಮೋದ್ ಮುತಾಲಿಕ್

Spread the love

ರಾಜ್ಯದಲ್ಲಿ ನಡೆಯುತ್ತಿರುವ ಅಸ್ಪ್ರಶ್ಯತೆ ಘಟನೆಗಳು ಅತ್ಯಂತ ಕ್ರೌರ್ಯವಾದುದು : ಪ್ರಮೋದ್ ಮುತಾಲಿಕ್
 

ಕುಂದಾಪುರ: ರಾಜ್ಯದ ಕೋಲಾರ, ಕೊಪ್ಪಳದಲ್ಲಿ ನಡೆದ ಅಸ್ಪೃಶ್ಯತೆ ಘಟನೆ ಅತ್ಯಂತ ಕ್ರೌರ್ಯವಾದುದು. ನಾಗರೀಕ ಸಮಾಜ ತಲೆ ತಗ್ಗಿಸುವಂತ ಇಂತಹ ಹೇಯ ಕೃತ್ಯ ನಡೆಸಿದವರಿಗೆ ಕಾನೂನಿಯಡಿಯಲ್ಲಿ ಕಠಿನ ಶಿಕ್ಷೆ ಕೊಡಬೇಕು. ಅಸ್ಪೃಶ್ಯತೆ ವಿರುದ್ಧ ಶ್ರೀರಾಮ ಸೇನೆ ಹೋರಾಟ ಮಾಡುತ್ತಿದೆ. ಸ್ವಾತಂತ್ರ್ಯ ಬಂದು ಇಟ್ಟು ವರ್ಷಗಳಾದರೂ, ಅಸ್ಪಶ್ರ್ಯತೆಯ ವಿಚಾರದಲ್ಲಿ ಡಾ.ಅಂಬೇಡ್ಕರ್ ಅವರ ಕನಸು ನನಸಾಗದಿರುವುದು ನಮ್ಮ ವ್ಯವಸ್ಥೆಯ ದುರಂತ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

https://www.facebook.com/MangaloreanNews/videos/472562281476245

ಇಲ್ಲಿನ ಖಾಸಗಿ ಹೋಟೇಲ್ ನಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರ್ ಅವರ ಪತ್ನಿಗೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿರುವುದು ಸ್ವಾಗತಾರ್ಹ. ಆದರೆ ಗುತ್ತಿಗೆ ಕೆಲಸಕ್ಕೆ ಜೀವನ ಭದ್ರತೆ ಇಲ್ಲದೆ ಇರುವುದರಿಂದ, ಆಕೆಗೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಖಾಯಂ ಕೆಲಸ ಕೊಡುಸುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ರಾಜ್ಯದ ಹಲವು ಕಡೆಗಳಲ್ಲಿ ಈ ರೀತಿ ಮತಾಂಧ ಶಕ್ತಿಗಳಿಗೆ ಬಲಿಯಾಗಿರುವ ಅನೇಕ ಕುಟುಂಬಗಳು ಸಂಕಷ್ಟದ ಸ್ಥಿತಿಯಲ್ಲಿ ಇದೆ, ಈ ಕುಟುಂಗಳಿಗೂ ಆಧಾರವಾಗುವ ಹಾಗೂ ಆಸರೆ ನೀಡುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು. ರಾಜಕೀಯ ಲಾಭ ಪಡೆದುಕೊಂಡ ಪರೀಶ್ ಮೇಸ್ತಾ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ತನಿಖೆ ನಿಂತ ನೀರಿನಂತಾಗಿದೆ, ಈ ಪ್ರಕರಣಗಳ ಶೀಘ್ರ ತನಿಖೆ ನಡೆದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಇಚ್ಛಾ ಶಕ್ತಿ ತೋರಬೇಕಿದೆ ಎಂದರು.

ಶ್ರೀ ರಾಮ ಸೇನೆಯು ರಾಜಕೀಯ ಪಕ್ಷವಾಗದೆ ಇರುವುದರಿಂದ ಮುಂಬರುವ ಯಾವುದೇ ಚುನಾವಣೆಯಲ್ಲಿ, ನನ್ನನ್ನು ಸೇರಿದಂತೆ ಶ್ರೀ ಸೇನೆಯ ಯಾರೂ ಸ್ಪರ್ಧಿಸೋದಿಲ್ಲ. ಹಿಂದೂ ಧರ್ಮದ ರಕ್ಷಣೆಯೇ ನಮ್ಮ ಸಂಘಟನೆಯ ಮೂಲ ಧ್ಯೇಯವಾಗಿದ್ದು, ಹಿಂದುತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡುವ ತೀರ್ಮಾನದೊಂದಿಗೆ, ದೇಶದಲ್ಲಿ ಕೊಲೆ, ಸುಲಿಗೆ, ಗಲಭೆ, ದೊಂಬಿ ಮಾಡುವ ಸಂಘಟನೆಗಳಿಗೆ ಜಾಗ ಇಲ್ಲ ಎನ್ನುವ ಸ್ವಷ್ಟ ಸಂದೇಶ ನೀಡಿದೆ. ಇಂತಹ ದೇಶದ್ರೋಹಿ ಸಂಘಟನೆಗಳನ್ನು ಶಾಶ್ವತವಾಗಿ ಮಟ್ಟ ಹಾಕುವ ಅಗತ್ಯವಿದೆ. ಶ್ರೀರಾಮ ಸೇನೆ ಮೊದಲಿನಿಂದಲೂ ಈ ಕುರಿತು ಹೋರಾಟ ಮಾಡುತ್ತಿದೆ. ಈ ಸಂಘಟನೆಗಳ ಬಗ್ಗೆ ನಮ್ಮಲ್ಲಿ ಸಾಕಷ್ಟು ಮಾಹಿತಿಗಳಿದ್ದು, ಸದ್ಯದಲ್ಲಿ ಗ್ರಹ ಸಚಿವರನ್ನು ಭೇಟಿ ಮಾಡಿ ಮಾಹಿತಿಯನ್ನು ನೀಡಲಿದ್ದೇವೆ ಎಂದರು.

ಕುಂದಾಪುರ ಪುರಸಭೆಯ ಎದುರಿನ ಸಾರ್ವಜನಿಕ ರಸ್ತೆಗೆ ಡಾಮರ್ ಹಾಕಿ ಅಭಿವೃದ್ಧಿ ಪಡಿಸಲು ಇಲ್ಲಿನ ಮುಸ್ಲಿಂ ಸಮುದಾಯದವರು ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕು. ಸರ್ಕಾರ, ಸಚಿವರು ಹಾಗೂ ಶಾಸಕರು ಈ ಕುರಿತು ಗಮನ ನೀಡಬೇಕು. ಕುಂದಾಪುರದ ಸರ್ಕಾರಿ ಕಾಲೇಜಿನ ಆವರಣದ ಒಳಗಿರುವ ದರ್ಗಾ ಗೋಡೆಯ ಬಗ್ಗೆಯೂ ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ, ದಾಖಲೆ ದೊರೆಕಿದ ಬಳಿಕ ಮುಂದಿನ ಹೋರಾಟ ಸಂಘಟಿಸಲಾಗುವುದು. ಆಜಾನ್ ಹಾಗೂ ಧ್ವನಿ ವರ್ಧಕ ಬಳಕೆಯ ಬಗ್ಗೆ ಸುಪ್ರೀಮ್ ಕೋರ್ಟ್ ನೀಡಿದ ಆದೇಶವನ್ನು ಅಧಿಕಾರಿಗಳು ಸರಿಯಾಗಿ ಪಾಲಿಸುತ್ತಿಲ್ಲ. ಯಾರೇ ಪ್ರಾರ್ಥನೆ ಮಾಡುವುದರ ಬಗ್ಗೆ ನಮ್ಮ ಆಕ್ಷೇಪಗಳಿಲ್ಲ, ಆದರೆ ನಾವು ಬಳಸುವ ಧ್ವನಿ ವರ್ಧಕದಿಂದ ಇತರರಿಗೆ ಕರ್ಕಶವಾಗಿ ತೊಂದರೆಯಾಗುತ್ತದೆ ಎನ್ನುವ ಅರಿವನ್ನು ಇಟ್ಟುಕೊಳ್ಳಬೇಕು. ನ್ಯಾಯಾಲಯದ ಆದೇಶ ಪಾಲನೆಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಮುತಾಲಿಕ್ ಆಗ್ರಹಿಸಿದರು.

ಶ್ರೀರಾಮ ಸೇನೆಯ ಮಂಗಳೂರು ವಿಭಾಗದ ಮುಖಂಡ ಮೋಹನ್ ಭಟ್, ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೇಕಲ್ಲು, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಶೆಟ್ಟಿ ಕುಂದಾಪುರ, ವಕ್ತಾರ ಶರತ್ ಮಣಿಪಾಲ ಸುದ್ದಿಗೋಷ್ಠಿಯಲ್ಲಿ ಇದ್ದರು.


Spread the love