“ರಾಜ್ಯದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕು”

Spread the love

“ರಾಜ್ಯದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕು”

ನವೆಂಬರ್ 30ರಂದು ತ್ರಿಪುರಾದ ಚಾರಿಲಂನಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಡೆದ ಭೀಕರ ಹಲ್ಲೆಯನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಇದರಲ್ಲಿ ಪಕ್ಷದ ಸದಸ್ಯ ಶಾಹಿದ್ ಮಿಯಾ ಹತ್ಯೆಯಾಗಿದೆ ಮತ್ತು ಇತರ ಹಲವರಿಗೆ ಗಾಯಗಳಾಗಿವೆ.

ಕಳೆದ ನಾಲ್ಕೂವರೆ ವರ್ಷಗಳಿಂದ ಬಲವಂತವಾಗಿ ಮುಚ್ಚಲಾಗಿದ್ದ ಸೆಪಹಿಜಾಲಾ ಜಿಲ್ಲೆಯ ಚಾರಿಲಂನಲ್ಲಿರುವ ಸ್ಥಳೀಯ ಸಮಿತಿ ಕಚೇರಿಯನ್ನು ಪುನಃ ತೆರೆಯಲು ಪಕ್ಷದ ಕಾರ್ಯಕರ್ತರು ತೆರಳಿದ್ದ ವೇಳೆ ಬಿಜೆಪಿ ಗೂಂಡಾಗಳ ಹಿಂಸಾತ್ಮಕ ದಾಳಿ ನಡೆದಿದೆ.

ಬಿಜೆಪಿ ಗೂಂಡಾಗಳ ಈ ಭೀಕರ ದಾಳಿಯಲ್ಲಿ, ಶಾಹಿದ್ ಮಿಯಾ ಸಾವನ್ನಪ್ಪಿದ್ದಲ್ಲದೆ, ಹಿರಿಯ ನಾಯಕ ಶಾಸಕ ಮತ್ತು ಮಾಜಿ ಹಣಕಾಸು ಸಚಿವ ಭಾನು ಲಾಲ್ ಸಾಹಾ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡರು. ಫೆಬ್ರವರಿ 2018ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ತ್ರಿಪುರಾದಲ್ಲಿ ನಿರ್ಮಾಣಗೊಂಡಿರುವ ಹಿಂಸಾಚಾರದ ಸ್ಥಿತಿಯನ್ನು ಇದು ತೋರಿಸುತ್ತದೆ. ಸಿಪಿಐ(ಎಂ) ಮತ್ತು ಇತರ ವಿರೋಧ ಪಕ್ಷಗಳು ಮುಕ್ತವಾಗಿ ಕಾರ್ಯನಿರ್ವಹಿಸಲು, ತಮ್ಮ ಕಚೇರಿಗಳನ್ನು ನಡೆಸಲು ಅಥವಾ ಸಾಮಾನ್ಯ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಬಿಡುತ್ತಿಲ್ಲ. ವಿಧಾನಸಭೆ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇರುವಾಗ ಆಡಳಿತ ಮತ್ತು ಪೊಲೀಸರ ಶಾಮೀಲಿನೊಂದಿಗೆ ಆಡಳಿತ ಪಕ್ಷ ರಾಜಕೀಯ ವಿರೋಧಿಗಳನ್ನು ಭಯಭೀತರನ್ನಾಗಿಸುತ್ತಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಹತ್ಯೆ ಮತ್ತು ಹಿಂಸಾಚಾರಕ್ಕೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸಲು ಮತ್ತು ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕಾದರೆ ತ್ರಿಪುರಾದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ.

ಜಿಯಾಂಗ್ ಝೆಮಿನ್ ನಿಧನ: ಸಿಪಿಐ(ಎಂ) ಸಂತಾಪ

ಚೀನಾ ಕಮ್ಯುನಿಸ್ಟ್ ಪಕ್ಷ(ಸಿಪಿಸಿ)ದ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಚೀನಾ ಜನತಾ ಗಣತಂತ್ರದ ಅಧ್ಯಕ್ಷ ಕಾಮ್ರೇಡ್ ಜಿಯಾಂಗ್ ಜೆಮಿನ್ ಅವರ ನಿಧನದ ಸುದ್ದಿಯ ಬಗ್ಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ಬ್ಯುರೊ ದುಃಖ ವ್ಯಕ್ತಪಡಿಸಿದೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಕಾಮ್ರೇಡ್ ಜಿಯಾಂಗ್ ಜೆಮಿನ್ ಅವರು ಸಿಪಿಸಿಯ ಮೂರನೇ ಪೀಳಿಗೆಗೆ ಸೇರಿದ ಪ್ರಮುಖ ನಾಯಕರಾಗಿದ್ದರು. ಅವರ ‘ಥಿಯರಿ ಆಫ್ ತ್ರೀ ರೆಪ್ರೆಸೆಂಟ್ಸ್’ (ಮೂರು ಪ್ರಾತಿನಿಧ್ಯಗಳ ಸಿದ್ಧಾಂತ) ಗೆ ಅವರನ್ನು ಸ್ಮರಿಸಕೊಳ್ಳಲಾಗುತ್ತಿದೆ. ಅವರು ವಿವಿಧ ಜವಾಬ್ದಾರಿಗಳಲ್ಲಿ ಪಕ್ಷ ಮತ್ತು ದೇಶಕ್ಕೆ ಸೇವೆ ಸಲ್ಲಿಸಿದರು ಮತ್ತು 1990ರ ದಶಕದಲ್ಲಿ ಚೀನಾ ಅಸಾಧಾರಣ ಆರ್ಥಿಕ ಶಕ್ತಿಯಾಗಿ ಬೆಳೆಯಲು ಅಡಿಪಾಯ ಹಾಕಿದರು.

ಕಾಮ್ರೇಡ್ ಜಿಯಾಂಗ್ ಝೆಮಿನ್ ಅವರ ನಿಧನಕ್ಕೆ ಸಿಪಿಐ(ಎಂ) ತನ್ನ ಆಳವಾದ ದುಃಖವನ್ನು ಮತ್ತು ಸಿಪಿಸಿ ಮತ್ತು ಚೀನಾದ ಜನರಿಗೆ ತನ್ನ ಹೃತ್ಪೂರ್ವಕ ಸಹಾನುಭೂತಿಯನ್ನು ವ್ಯಕ್ತಪಡಿಸಿದೆ.


Spread the love