ರಾಜ್ಯದಲ್ಲಿ ಮತಾಂತರ ತಡೆಗೆ ಕಾಯ್ದೆ ತರಲು ಚಿಂತನೆ: ಆರಗ ಜ್ಞಾನೇಂದ್ರ

Spread the love

ರಾಜ್ಯದಲ್ಲಿ ಮತಾಂತರ ತಡೆಗೆ ಕಾಯ್ದೆ ತರಲು ಚಿಂತನೆ: ಆರಗ ಜ್ಞಾನೇಂದ್ರ

ಬೆಂಗಳೂರು: ರಾಜ್ಯದಲ್ಲಿ ಮತಾಂತರ ತಡೆಗೆ ಕಾಯ್ದೆ ತರಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಬಿಜೆಪಿಯ ಗೂಳಿಹಟ್ಟಿ ಶೇಖರ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ಆಮಿಷ ಒಡ್ಡಿ ಮತಾಂತರ ಮಾಡುವುದು ಶಿಕ್ಷಾರ್ಹ ಅಪರಾಧ. ಬೇರೆ ಬೇರೆ ರಾಜ್ಯಗಳ ಕಾಯ್ದೆ ಪರಿಶೀಲನೆ ಮಾಡಿ ನಮ್ಮಲ್ಲೂ ಅಂತಹ ಕಾಯ್ದೆ ತರಲು ಸಾಧ್ಯವೇ ಎಂದು ಪರಿಶೀಲನೆ ಮಾಡುತ್ತೇವೆ. ಬೇರೆ ಯಾವ ರೂಪದಲ್ಲಿ ನಿಯಂತ್ರಣ ಮಾಡಬಹುದು ಎಂಬುದನ್ನೂ ಪರಿಶೀಲನೆ ಮಾಡುತ್ತಿದ್ದೇವೆ’ ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಬೇರೆ ಬೇರೆ ರಾಜ್ಯಗಳು ಮತಾಂತರ ನಿಷೇಧಕ್ಕೆ ಕಠಿಣ ಕಾಯ್ದೆಗಳನ್ನು ತಂದಿವೆ. ನಮ್ಮಲ್ಲೂ ಅಂತಹ ಕಾಯ್ದೆಗಳನ್ನು ಜಾರಿಗೆ ತರಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿಯ ಕೆ.ಜಿ.ಬೋಪಯ್ಯ, ‘ರಾಜ್ಯದಲ್ಲಿ ಮತಾಂತರ ಪಿಡುಗು ವ್ಯಾಪಕವಾಗಿದೆ. ಇದರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಕೆ.ಜೆ.ಜಾರ್ಜ್, ‘ಅತ್ಯಾಚಾರ ಪ್ರಕರಣ ದಾಖಲಿಸುತ್ತೇವೆ ಎಂದು ಚರ್ಚ್‌ನವರು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ. ಯಾವ ಚರ್ಚ್‌ನವರು ಬೆದರಿಕೆ ಹಾಕಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ಸಲಹೆ ನೀಡಿದರು.

ಜೆಡಿಎಸ್‌ನ ದೇವಾನಂದ ಚವ್ಹಾಣ್‌, ‘ವಿಜಯಪುರ ಜಿಲ್ಲೆಯ ಬಂಜಾರಾ ಕಾಲೊನಿಗಳಲ್ಲಿ ಚರ್ಚ್‌ಗಳನ್ನು ನಿರ್ಮಿಸಿ ಜನರ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ನನ್ನ ತಾಯಿಯನ್ನೂ ಆಮಿಷ ಒಡ್ಡಿ ಮತಾಂತರ ಮಾಡಲಾಗಿದೆ: ಗೂಳಿಹಟ್ಟಿ ಶೇಖರ್‌

ಬೆಂಗಳೂರು: ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಮಂದಿ ಮತಾಂತರ ಆಗಿದ್ದಾರೆ. ನನ್ನ ತಾಯಿ ಸಹ ಮತಾಂತರಗೊಂಡಿದ್ದಾರೆ. ಅವರನ್ನು ಆಮಿಷ ಒಡ್ಡಿ ಮತಾಂತರ ಮಾಡಲಾಗಿದೆ ಎಂದು ಗೂಳಿಹಟ್ಟಿ ಶೇಖರ್‌ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಮತಾಂತರ ತಡೆಗೆ ಕಾಯ್ದೆ ತರುವ ಬಗ್ಗೆ ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಮಾತನಾಡಿದ ಬಿಜೆಪಿಯ ಗೂಳಿಹಟ್ಟಿ ಶೇಖರ್‌, ಆಮಿಷ ಒಡ್ಡಿ ಮತಾಂತರ ಮಾಡಿದ ಬಗ್ಗೆ ಪ್ರಶ್ನಿಸಿದರೆ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವುದಾಗಿ ಚರ್ಚ್‌ನವರು ಬೆದರಿಕೆ ಒಡ್ಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹೇರಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯದಲ್ಲಿ ಮತಾಂತರ ತಡೆಗೆ ಕಾಯ್ದೆ ತರಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.


Spread the love