ರಾಜ್ಯದಲ್ಲಿ ಶುರುವಾಗಿದೆ ರಾಜಕೀಯದ ಅಸಲಿ ಆಟ

Spread the love

ರಾಜ್ಯದಲ್ಲಿ ಶುರುವಾಗಿದೆ ರಾಜಕೀಯದ ಅಸಲಿ ಆಟ

2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಲ ಸಮೀಪಿಸುತ್ತಿದೆ. ಹೀಗಾಗಿ ರಾಜಕೀಯದ ಜಾತ್ರೆ, ರಾಜಕಾರಣಿಗಳ ಮೆರವಣಿಗೆ ಈಗಾಗಲೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದು ಉತ್ತುಂಗ ಸ್ಥಿತಿಗೆ ತಲುಪಲಿದೆ. ಅದರಲ್ಲೂ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕವಂತು ಚುನಾವಣಾ ಪ್ರಚಾರ, ಸಮಾವೇಶಗಳು ಹೆಚ್ಚಾಗಲಿವೆ.

ಚುನಾವಣಾ ಅಧಿಸೂಚನೆ ಹೊರಡಿಸಿದ ಬಳಿಕ ಚುನಾವಣಾ ನೀತಿ ಸಂಹಿತೆ ಪಾಲನೆ ಮಾಡಬೇಕಾಗಿರುವುದರಿಂದ ನಾಯಕರ ಕೆಲವೊಂದು ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ. ಹೀಗಾಗಿ ಈಗಾಗಲೇ ಮತದಾರರಿಗೆ ಏನೆಲ್ಲ ಕೊಡಬಹುದೋ ಅದೆಲ್ಲವನ್ನು ಮಾಡಲಾಗುತ್ತಿದೆ. ತರಾವರಿ ಗಿಫ್ಟ್ ಗಳಿಂದ ಹಿಡಿದು ಬಾಡೂಟದವರೆಗೆ ನಡೆಯುತ್ತಿದೆ. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಈಗಾಗಲೇ ಆರೋಪ ಪ್ರತ್ಯಾರೋಪ, ರಾಜಕೀಯ ತಂತ್ರಗಳು ಶುರುವಾಗಿವೆ. ಜತೆಗೆ ಸಮಾವೇಶ, ಪ್ರಚಾರ ಭಾಷಣಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಈಗ ಏನಿದ್ದರೂ ರಾಜಕೀಯವಾಗಿ ಎಷ್ಟು ಲಾಭವಾಗುತ್ತದೆ ಎಂಬ ಲೆಕ್ಕಚಾರದಲ್ಲಿ ರಾಜಕಾರಣಿಗಳು ಇರುವುದರಿಂದಾಗಿ ಅವರ ಮಾತು, ನಡೆ, ಆಲೋಚನೆ, ಅವರು ಮಾಡುವ ಕೆಲಸಗಳು ಕೂಡ ರಾಜಕೀಯ ಲೆಕ್ಕಾಚಾರದಿಂದ ಕೂಡಿರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಧಿಕಾರಕ್ಕೆ ಬರುವುದಷ್ಟೆ ಮುಖ್ಯವಾಗಿರುವುದರಿಂದ ಭರವಸೆಗಳ ಸುರಿಮಳೆ ಸುರಿಯಲಾರಂಭಿಸಿದ್ದಾರೆ.

ಅನುಷ್ಠಾನಕ್ಕೆ ಬಾರದ ಯೋಜನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜತೆಗೆ ಗ್ರಾಮಮಟ್ಟದಿಂದ ಆರಂಭವಾಗಿ ನಗರದವರೆಗೆ ಉಚಿತ ಕೊಡುಗೆಗಳನ್ನು ಕೊಡಲಾರಂಭಿಸಿದ್ದಾರೆ. ಟಿವಿ, ಕುಕ್ಕರ್, ಯಾತ್ರೆಗೆ ಕಳುಹಿಸಲಾಗುತ್ತಿದೆ. ಮತದಾರರನ್ನು ಸೆಳೆಯಲು ಏನೆಲ್ಲ ತಂತ್ರಗಳನ್ನು ಮಾಡಬಹುದೋ ಅದೆಲ್ಲವನ್ನು ಮಾಡುತ್ತಿದ್ದಾರೆ. ಇನ್ನು ಹುಟ್ಟುಹಬ್ಬ, ಊರ ಜಾತ್ರೆ ನೆಪದಲ್ಲಿ ಬಾಡೂಟಗಳನ್ನು ಹಾಕಲಾಗುತ್ತಿದೆ.

ಕೆಲವು ನಾಯಕರಂತು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಪಕ್ಷಗಳ ನಡುವೆ, ನಾಯಕರ ನಡುವೆ ಕಿತ್ತಾಟಗಳು ಏನೇ ನಡೆಯುತ್ತಿದ್ದರೂ ಅದು ರಾಜ್ಯದ ಹಿತ ದೃಷ್ಟಿಯಿಂದ ನಡೆಯುತ್ತಿದೆ ಎನ್ನುವುದಕ್ಕಿಂತಲೂ ಅದರ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ ಎಂಬುದು ಮತದಾರರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಇನ್ನು ಮತದಾರರನ್ನು ಸೆಳೆಯುವ ಸಲುವಾಗಿ ಕಣ್ಣೀರಿಡುವ, ಜನರ ಉದ್ಧಾರದ ಬಗ್ಗೆ ಮಾರುದ್ದ ಭಾಷಣ ಬಿಗಿಯುವ, ಭಾವನಾತ್ಮಕವಾಗಿ ಸೆಳೆಯುವ ನಾಯಕರಿಗೇನು ಕೊರತೆಯಿಲ್ಲ.

ಐದು ವರ್ಷಗಳ ಕಾಲ ಭೂಗತರಾಗಿದ್ದ ನಾಯಕರು ಇದೀಗ ಜನರ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳಷ್ಟು ಕ್ಷೇತ್ರಗಳಲ್ಲಿ ಇನ್ನೂ ಅಭ್ಯರ್ಥಿಗಳು ಯಾರೆಂಬುದೇ ನಿರ್ಧಾರವಾಗದ ಕಾರಣ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಚಲನಶೀಲರಾಗಿ ತಮ್ಮ ಕ್ಷೇತ್ರಗಳಲ್ಲಿ ಅಡ್ಡಾಡುತ್ತಿದ್ದು, ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಇನ್ನು ಕೆಲವರು ಸಮಾಜಸೇವೆ ಮೂಲಕ ಪ್ರಚಾರ ಪಡೆದು ಪಕ್ಷದ ಹಿರಿಯ ನಾಯಕರ ಮನಸೆಳೆಯುವ ಯತ್ನಗಳನ್ನು ಮಾಡುತ್ತಿದ್ದಾರೆ.

ಒಟ್ಟಾರೆ ರಾಜ್ಯದ ರಾಜಕಾರಣ ರಂಗೇರಲು ಆರಂಭಿಸಿದ್ದು, ಇದೀಗ ಟಿಕೆಟ್ ಆಕಾಂಕ್ಷಿಗಳಾಗಿರುವವರು ಮುಂದೆ ಟಿಕೆಟ್ ಘೋಷಣೆಯಾದ ಬಳಿಕ ಒಂದು ವೇಳೆ ಟಿಕೆಟ್ ಸಿಗದೆ ಹೋದರೆ ಪಕ್ಷಕ್ಕಾಗಿ ಇದೇ ಜೋಷ್ ನಲ್ಲಿ ಕೆಲಸ ಮಾಡುತ್ತಾರೋ ಗೊತ್ತಿಲ್ಲ. ಆದರೆ ಈಗ ಟಿಕೆಟ್ ಸಿಗಬಹುದೆಂಬ ಲೆಕ್ಕಾಚಾರದಲ್ಲಿ ಕ್ಷೇತ್ರದ ತುಂಬಾ ಓಡಾಡುತ್ತಿದ್ದಾರೆ. ಚುನಾವಣೆ ಸಂದರ್ಭ ಮತದಾರರನ್ನು ನೆನಪು ಮಾಡಿಕೊಳ್ಳುವ ರಾಜಕೀಯ ನಾಯಕರು ಮತ್ತೆ ಮರೆತು ಬಿಡುತ್ತಾರೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬಂದಿದೆ. ಹೀಗಾಗಿ ಮತದಾರರು ಏನು ತೀರ್ಮಾನ ಮಾಡುತ್ತಾರೆ ಎಂಬುದು ಚುನಾವಣಾ ಫಲಿತಾಂಶದ ಬಳಿಕವೇ ಗೊತ್ತಾಗಲಿದೆ.


Spread the love