ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸುವ ಸಂಕಲ್ಪ:ಸಿಎಂ ಬೊಮ್ಮಾಯಿ 

Spread the love

ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸುವ ಸಂಕಲ್ಪ:ಸಿಎಂ ಬೊಮ್ಮಾಯಿ 

ಬೆಂಗಳೂರು: 67 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸುವ ಸಂಕಲ್ಪವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ತಿಳಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ.1ರಂದು ಸಂಜೆ ದಿ. ಡಾ. ಪುನೀತ್ ರಾಜ್ ಕುಮಾರ್ ಅವರಿಗೆ “ಕರ್ನಾಟಕ ರತ್ನ ಪ್ರಶಸ್ತಿ” ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡುತ್ತಾ, ನ.1ರಂದು ನಾಡಿನಾದ್ಯಂತ ಗ್ರಾಮಗಳಲ್ಲಿ, ನಗರಗಳಲ್ಲಿ, ಶಾಲೆ ಹಾಗೂ ಇತರೆ ಸಂಘ ಸಂಸ್ಥೆಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ರಾಜ್ಯೋತ್ಸವವನ್ನು ಆಚರಿಸಿ, ಕನ್ನಡದ ಧ್ವಜಗಳನ್ನು ಹಾರಿಸಬೇಕು.

ದಿ. ಡಾ: ಪುನೀತ್ ರಾಜ್ ಕುಮಾರ್ ಅವರಿಗೆ “ಕರ್ನಾಟಕ ರತ್ನ ಪ್ರಶಸ್ತಿ” ಪ್ರದಾನ ಮಾಡಲಾಗುವುದು. ಸಮಾರಂಭವನ್ನು ನಾಳೆ ಸಂಜೆ 4.00 ಗಂಟೆಗೆ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಹಮ್ಮಿಕೊಳ್ಳಲಾಗಿದೆ. ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ಸರ್ಕಾರ ಕೊಡಮಾಡುತ್ತಿದ್ದು, ಅಭಿಮಾನಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.

ನ.1ರಂದು ಸಂಜೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎಲ್ಲಾ ಶ್ರೇಷ್ಠ ವ್ಯಕ್ತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನವೆಂಬರ್ 2, 3 4 ರಂದು ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಜಗತ್ತಿನಾದ್ಯಂತ ಪ್ರಮುಖ ಉದ್ಯಮಿಗಳು, ಉದ್ದಿವ್ಮೆದಾರರು ಈ ಸಮಾವೇಶದಲ್ಲಿ ಭಾಗವಹಿಸಿದ್ದು, ಜೊತೆಗೆ 5 ಲಕ್ಷ ಕೋಟಿ ರೂ. ಗಳಿಗೂ ಹೆಚ್ವಿನ ಬಂಡವಾಳ ಹೂಡಿಕೆಯ ನಿರೀಕ್ಷೆ ಇದೆ. ಈಗಾಗಲೇ ಬಹಳಷ್ಟು ಜನ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದು, ಅವರ ಯೋಜನೆಗಳ ಅನುಮೋದನೆಯನ್ನೂ ಮಾಡಲಾಗಿದೆ. ಭರವಸೆ ಪತ್ರವನ್ನೂ ವಿತರಿಸಲಿದ್ದಾರೆ.

ಮುಂದಿನ 3 ದಿನಗಳ ಕಾಲ ಹಲವಾರು ಕ್ಷೇತ್ರಗಳಲ್ಲಿ ಆಗುತ್ತಿರುವ ಪ್ರಗತಿ ಹಾಗೂ ನವೀಕರಿಸಬಹುದಾದ ಇಂಧನ, ಸೆಮಿಕಂಡಕ್ಟರ್, ಏರೋಸ್ಪೇಸ್, ರಕ್ಷಣಾ ಕ್ಷೇತ್ರ ಮುಂತಾದ ಪ್ರಮುಖ ಕ್ಷೇತ್ರಗಳ ಸವಾಲುಗಳು ಹಾಗೂ ಬೆಳವಣಿಗೆಯ ಬಗ್ಗೆ ಚರ್ಚಾ ಗೋಷ್ಠಿಗಳು ನಡೆಯಲಿವೆ. ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದ ಎಲ್ಲಾ ಪರಿಣಿತರು ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಈ ಕಾರ್ಯಕ್ರಮ ರಾಜ್ಯದಲ್ಲಿ ಮುಂದಿನ 5 ವರ್ಷಗಳ ಕಾಲ ಆರ್ಥಿಕ ಚಟುವಟಿಕೆಗಳಿಗೆ ದಿಕ್ಸೂಚಿಯಾಗಲಿದೆ. ಸಮಾವೇಶದಲ್ಲಿ ಆಸಕ್ತರು, ಉದ್ಯಮಿಗಳು ಹಾಗೂ ಸಣ್ಣ ಕೈಗಾರಿಕೋದ್ಯಮಿಗಳಿಗೆ ಅವಕಾಶವಿದೆ. ಹೆಸರುಗಳನ್ನು ನೋಂದಾಯಿಸಿಕೊಂಡು ಭಾಗವಹಿಸಬೇಕು. ನೋಂದಣಿ ಮೂಲಕ ಮಾತ್ರವೇ ಸಮಾವೇಶಕ್ಕೆ ಪ್ರವೇಶವಿದೆ ಎಂದರು.

ನವೆಂಬರ್ 11ರಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್, ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ವಂದೇ ಭಾರತ್ – ಚೆನೈ, ಬೆಂಗಳೂರು- ಮೈಸೂರಿಗೆ , ಹೈಸ್ಪೀಡ್ ರೈಲನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಕೂಡ ಪ್ರಧಾನಿಗಳೇ ಉದ್ಘಾಟಿಸುತ್ತಿದ್ದು, ಬೆಂಗಳೂರು ನಿರ್ಮಾತೃ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ಸಹ ಉದ್ಘಾಟನೆ ಮಾಡಲಾಗುವುದು. ಕೆಂಪೇಗೌಡರು ಪ್ರಗತಿಯ ಸಂಕೇತವಾಗಿದ್ದು, “ಪ್ರಗತಿಯ ಪ್ರತಿಮೆ” ಎಂದು ಹೆಸರಿಡಲಾಗಿದೆ. ಲಕ್ಷಾಂತರ ಜನ ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಅಂದು ಸನ್ಮಾನ್ಯ ಪ್ರಧಾನ ಮಂತ್ರಿಗಳು ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದು ವಿವರಿಸಿದರು.


Spread the love