ರಾಜ್ಯ ಕಾಂಗ್ರೆಸ್ ಸರಕಾರ ಸಂಘಿ ಅಜೆಂಡಾ ಜಾರಿಗೊಳಿಸುತ್ತಿದೆ: ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ಮಿಯಾಝ್ ಆರೋಪ
- ಅಧಿಕೃತ ಕಸಾಯಿಖಾನೆ ತೆರೆಯಲು ಆಗ್ರಹಿಸಿ ಡಿವೈಎಫ್ಐ ಪ್ರತಿಭಟನೆ
ಮಂಗಳೂರು: ರಾಜಕೀಯ ದುರುದ್ದೇಶದಿಂದ ಮುಚ್ಚಿರುವ ನಗರದ ಕುದ್ರೋಳಿಯಲ್ಲಿರುವ ಜಿಲ್ಲೆಯ ಏಕೈಕ ಅಧಿಕೃತ ಕಸಾಯಿಖಾನೆಯ ಬಡ ಮಾಂಸ ವ್ಯಾಪಾರಿಗಳ ಮೇಲೆ ಕೋಕ ಕಾಯ್ದೆ ಹಾಕಿ ರಾಜ್ಯ ಕಾಂಗ್ರೆಸ್ ಸರಕಾರ ಆರೆಸ್ಸೆಸ್ ನೀತಿಯನ್ನು ಪೊಲೀಸರ ಮೂಲಕ ಜಾರಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಡಿವೈಎಫ್ಐ ಮಂಗಳೂರು ನಗರ ಸಮಿತಿಯ ವತಿಯಿಂದ ಕುದ್ರೋಳಿಯಲ್ಲಿ ಅಧಿಕೃತ ಕಸಾಯಿಖಾನೆ ತೆರೆಯಲು ಒತ್ತಾಯಿಸಿ ಮತ್ತು ಸಂಸ್ಕರಿತ ಆಡು, ಕುರಿ, ದನದ ಮಾಂಸಾಹಾರಿಗಳಿಗೆ ಆಹಾರದ ಹಕ್ಕನ್ನು ನಿರಾಕರಿಸಿದ ಕ್ರಮವನ್ನು ಖಂಡಿಸಿ ಹಾಗೂ ದ.ಕ. ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಕುದ್ರೋಳಿ ಕಸಾಯಿಖಾನೆಯ ಮುಂದೆ ಶುಕ್ರವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮಾಂಸ ವ್ಯಾಪಾರಿಗಳನ್ನು ಕೋಕ ಕಾಯ್ದೆಯಡಿ ಬಂಧಿಸಿ ಜೈಲಿಗೆ ಅಟ್ಟುತ್ತಿದೆ. ಬಡವರ ಮನೆಗಳನ್ನು ಮುಟ್ಟುಗೋಲು ಹಾಕುತ್ತಿದೆ. ಬಿಜೆಪಿ ಜಾರಿಗೆ ತಂದಿರುವ ಜಾನುವಾರು ಪ್ರತಿಬಂಧಕ ಕಾಯ್ದೆಯಲ್ಲಿರುವ ಕೋಮುವಾದಿ ಅಜೆಂಡಾವನ್ನು ಕಿತ್ತು ಹಾಕದೆ ಮುಂದುವರಿಸುತ್ತಿರುವುದು ಖೇದಕರ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ಮಿಯಾಝ್ ಟೀಕಿಸಿದರು.
ದ.ಕ.ಜಿಲ್ಲಾಡಳಿತ ಸಂಘ ಪರಿವಾರದ ನಿಯಂತ್ರಣದಲ್ಲಿದೆಯಾ ಎಂಬ ಅನುಮಾನ ಕಾಡುತ್ತಿದೆ. ಜಿಲ್ಲೆಯ ಮಾಂಸಹಾರಿಗಳಿಗೆ ಸಂಸ್ಕರಿತ ಮಾಂಸ ಸರಬರಾಜು ಆಗಬೇಕಾದ ಅಧಿಕೃತ ಕಸಾಯಿಖಾನೆಯನ್ನು ಮುಚ್ಚಿರುವುದು ಕಾನೂನು ಬಾಹಿರವಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಕುದ್ರೋಳಿ ಕಸಾಯಿಖಾನೆ ತೆರೆಯದಿದ್ದರೆ ‘ನಗರ ಪಾಲಿಕೆ ಚಲೋ ಹೋರಾಟ’ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.