ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ

Spread the love

ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ “ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ”ಯನ್ನು ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಯೋಗ ಕಲಿಕೆಗೆ ಈಗ ಹೆಚ್ಚು ಒತ್ತು ನೀಡಲಾಗುತ್ತಿದೆ. ಯೋಗವನ್ನು ಮಾನಸಿಕ ಮತ್ತು ದೈಹಿಕ ವಿಕಸನದ ಸಾಧನವಾಗಿ ಗುರುತಿಸಲಾಗಿದೆ. ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಮತ್ತು ದೇಹ ಎರಡನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ವಿಶ್ವ ಯೋಗದಿನದಂದು ಮೈಸೂರಿಗೆ ಆಗಮಿಸುವ ಮೂಲಕ ಸಾಂಸ್ಕೃತಿಕ ನಗರಿಯ ಕೀರ್ತಿ ಮತ್ತಷ್ಟು ಹೆಚ್ಚಾಯಿತು ಎಂದರು.

ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ, ನಾಡಹಬ್ಬ ದಸರಾ ಹಬ್ಬದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಬಹಳ ಆಸಕ್ತಿ ಹೊಂದಿದ್ದು, ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡುತ್ತಿದ್ದಾರೆ. ಎರಡು ವರ್ಷಗಳಿಂದ ಕೋವಿಡ್, ನೆರೆಯ ಕಾರಣದಿಂದ ಅದ್ಧೂರಿ ದಸರಾ ಆಚರಣೆ ಮಾಡಲಾಗಿರಲಿಲ್ಲ. ಈ ಬಾರಿ ಮುಖ್ಯ ಮಂತ್ರಿಗಳ ಒಪ್ಪಿಗೆ ಪಡೆದು ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷವಾಗಿ ಆಯೋಜನೆ ಮಾಡಿದ್ದಾರೆ ಎಂದು ಹೇಳಿದರು.

ಇದೇ ವೇಳೆ ನಾಲ್ಕು ಯೋಗಾಪಟುಗಳು ಯೋಗ ಪ್ರದರ್ಶನ ಮಾಡಿದರು. 12 ವರ್ಷ ಮೇಲ್ಪಟ್ಟವರಿಂದ 65 ವರ್ಷದವರವರೆಗಿನ ಬಾಲಕರು, ಬಾಲಕಿಯರು, ಪುರುಷರು, ಮಹಿಳೆಯರು ನಾಲ್ಕು ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಶೇಷಚೇತನರು ಸೇರಿದಂತೆ ಸುಮಾರು 1000 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೇ ಶ್ರೀನಿವಾಸ್, ಜಂಗಲ್ಸ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷರಾದ ಅಪ್ಪಣ್ಣ, ದಸರಾ ಸಾಹಸ ಕ್ರೀಡಾ ಉಪಾಧ್ಯಕ್ಷರಾದ ಶಿವರಾಜ್, ಯೋಗದಸರಾ ಉಪವಿಶೇಷಾಧಿಕಾರಿ ಸೀಮಂತಿನಿ, ಯೋಗಾ ಫೌಂಡೇಶನ್ ಕಾರ್ಯದರ್ಶಿ ಶಶಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


Spread the love