ರಾಜ್ಯ ಸರ್ಕಾರದ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿ – ಟೈಲರ್ಸ್ ಎಸೊಸೀಯೇಶನ್

Spread the love

ರಾಜ್ಯ ಸರ್ಕಾರದ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿ – ಟೈಲರ್ಸ್ ಎಸೊಸೀಯೇಶನ್

ಮಂಗಳೂರು: ಅಸಂಘಟಿತ ಕಾರ್ಮಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಟೈಲರ್ ವೃತ್ತಿ ಬಾಂದವರಿಗೆ ರಾಜ್ಯ ಸರಕಾರ ಘೋಷಿಸಿದ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದು ಟೈಲರ್‌ಗಳು ತಾವು ಅಸಂಘಟಿತ ಕಾರ್ಮಿಕರು ಎಂದು ರುಜುವಾತು ಪಡಿಸಲು ಸರಕಾರ ಸೂಚಿಸಿದ ಅಧಿಕಾರಿಗಳ ಬಳಿ ಸಹಿ ಹಾಕಲು ಹೋದಾಗ ನೀವು ಲೈಸೆನ್ಸ್ ಮಾಡಿದ್ದೀರ ಅಂತ ಕೇಳುತ್ತಾರೆ. ನಾವು ಮನೆಯಲ್ಲಿಯೇ ಕೆಲಸ ಮಾಡುವುದು ಅಂತ ಪರಿ -ಪರಿಯಾಗಿ ಹೇಳಿದರೂ ಸಹಿ ಹಾಕದೆ ವಾಪಸ್ಸು ಕಳುಹಿಸುತ್ತಾರೆ. ಇದರಿಂದಾಗಿ ಟೈಲರ್‌ಗಳು ಸರಕಾರ ಘೋಷಿಸಿದ ಪ್ಯಾಕೇಜ್ ಪಡೆಯಲು ತೊಂದರೆಯಾಗುತ್ತಿದ್ದು ಈ ಗೊಂದಲವನ್ನು ನಿವಾರಿಸುವಂತೆ ಕೆಎಸ್‌ಟಿಎ ರಾಜ್ಯಾಧ್ಯಕ್ಷ ಆನಂದ ಕೆ.ಎಸ್. ಸರಕಾರವನ್ನು ಒತ್ತಾಯಿಸಿದರು. ನಗರದ ಗೋರಿಗುಡ್ಡೆಯಲ್ಲಿರುವ ಟೈಲರ್ ಭವನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಕೋವಿಡ್‌ನಿಂದಾಗಿ ಟೈಲರ್‌ಗಳು ಅಂಗಡಿ ಬಾಗಿಲು ತೆರೆಯದೇ ಮನೆಯಲ್ಲಿಯೇ ಉಳಿಯುವಂತಾಗಿದೆ. ಇಂತಹ ಕಷ್ಟದ ಸಮಯದಲ್ಲಿ ಸರಕಾರ ಘೋಷಣೆ ಮಾಡಿದ ಪ್ಯಾಕೇಜ್ ಮೊತ್ತ ೨ ಸಾವಿರ ರೂಪಾಯಿಯನ್ನು ಪಡೆಯಲು ಎಪಿಎಲ್ ಮತ್ತು ಬಿಪಿಎಲ್ ಎಂಬ ಮಾನದಂಡವನ್ನು ನಿಗದಿ ಪಡಿಸಿರುವುದು ಟೈಲರ್ ವೃತ್ತಿ ಬಾಂಧವರಲ್ಲಿ ತಾರತಮ್ಯ ಮಾಡಿದಂತಾಗಿದೆ. ದಯಾಮಾಡಿ ಸರಕಾರ ಈ ನಿಯಮವನ್ನು ಕೈ ಬಿಟ್ಟು ಎಲ್ಲಾ ಟೈಲರ್ ಗಳಿಗೂ ಪ್ಯಾಕೇಜ್ ಮೊತ್ತ ನೀಡುವಂತೆ ಅವರು ಒತ್ತಾಯಿಸಿದರು.

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ (ಕೆಎಸ್‌ಟಿಎ) ಕಳೆದ 21 ವರ್ಷದಿಂದ ಟೈಲರ್ ವೃತ್ತಿಯವರ ಶ್ರೇಯೋಭಿವೃದ್ದಿಗಾಗಿ ಕೆಲಸ ಮಾಡುತ್ತಿದೆ. ಸಂಘವನ್ನು ವಿಶ್ವಾಸಕ್ಕೆ ಪಡೆದುಕೊಂಡು ಸಂಘಟನೆಯ ಗುರುತು ಕಾರ್ಡ್ ತೋರಿಸಿದರೆ ಅಧಿಕಾರಿಗಳು ಸಹಿ ಹಾಕಿ ಟೈಲರ್‌ಗಳು ಪ್ಯಾಕೇಜ್ ಮೊತ್ತ ಪಡೆಯಲು ಪರಿಗಣಿಸಬೇಕು, ಈ ಬಗ್ಗೆ ಸರಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು. ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಲ್ಲಿ ಸ್ಮಾರ್ಟ್ ಕಾರ್ಡ್ ಮಾಡಲಾಗಿದೆ. 2018 ರಲ್ಲಿ ಅರ್ಜಿ ಕೊಟ್ಟವರಿಗೆ ಇನ್ನೂ ಕಾರ್ಡ್ ಬಂದಿಲ್ಲ. ಬಂದಿರುವ ಕಾರ್ಡ್‌ಗಳಲ್ಲಿ ಹೆಚ್ಚಿನವರ ವೃತ್ತಿ ಬದಲಾವಣೆಯಾಗಿದೆ. ಟೈಲರ್ ವೃತ್ತಿ ಮಾಡುತ್ತಿರುವವರಿಗೆ ಚಿಂದಿ ಆಯುವವರು ಎಂದು ಮುದ್ರಿತವಾಗಿದ್ದರೆ ಹಮಾಲಿಗಳು ಎಂದು ಮುದ್ರಿತವಾಗ ಬೇಕಾದ ಕಾರ್ಡ್ ಗಳಲ್ಲಿ ಟೈಲರ್‌ಗಳು ಎಂದು ತಪ್ಪಾಗಿ ಮುದ್ರಿಸಲಾಗಿದೆ. ಈ ವ್ಯತ್ಯಾಸಗಳನ್ನು ಆದಷ್ಟು ಬೇಗ ಸರಿಪಡಿಸಿ ಕೊಡುವ ಆಶ್ವಾಸನೆ ಕೊಟ್ಟಿದ್ದರೂ ಈವರೆಗೆ ಸರಿಯಾಗಲಿಲ್ಲ. ಇದರಿಂದಲೂ ಟೈಲರ್ ಗಳು ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗಿದೆ ಎಂದು ವಿವರಿಸಿದರು.

ಜಿಲ್ಲಾಧ್ಯಕ್ಷ ಪ್ರಜ್ವಲ್ ಕುಮಾರ್ ಮಾತನಾಡಿ ಸರಕಾರ ಟೈಲರ್‌ಗಳಿಗೆ ಘೋಷಿಸಿರುವ ಪ್ಯಾಕೇಜ್ ಮೊತ್ತವನ್ನು 2 ಸಾವಿರದಿಂದ 5 ಸಾವಿರಕ್ಕೆ ಏರಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಕೆಎಸ್‌ಟಿಎ ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಬಿ. ವಸಂತ್, ನಗರ ಸಮಿತಿ ಮಾಜಿ ಅಧ್ಯಕ್ಷೆ ಕುಸುಮ ದೇವಾಡಿಗ ಉಪಸ್ಥಿತರಿದ್ದರು.


Spread the love