ರಾಡ್‍ ನಿಂದ ಹಲ್ಲೆಗೈದು ಗೃಹಿಣಿಯ ಚಿನ್ನಾಭರಣ ಎಗರಿಸಿದ ಪ್ರಕರಣ: ಆರೋಪಿ ಬಂಧನ

Spread the love

ರಾಡ್‍ ನಿಂದ ಹಲ್ಲೆಗೈದು ಗೃಹಿಣಿಯ ಚಿನ್ನಾಭರಣ ಎಗರಿಸಿದ ಪ್ರಕರಣ: ಆರೋಪಿ ಬಂಧನ

  • ಆಲ್ಟರೇಶನ್ ಮಾಡಿರುವ ಸ್ನೇಹಿತನ ಬೈಕ್ ಕೃತ್ಯಕ್ಕೆ ಬಳಕೆ. ಸಿಸಿ ಟಿವಿ ಫೂಟೇಜ್ ಆಧರಿಸಿ ಪ್ರಕರಣ ಭೇದಿಸಿದ ಪೊಲೀಸರು. ಆರೋಪಿ ಇನ್ನೂ ಹಲವು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ.

ಕುಂದಾಪುರ: ವಾರದ ಹಿಂದೆ ಮಹಿಳೆಯ ತಲೆಗೆ ರಾಡ್‍ನಿಂದ ಹಲ್ಲೆ ನಡೆಸಿ ಬಳಿಕ ಚಿನ್ನಾಭರಣಗಳನ್ನು ಎಗರಿಸಿದ ಆರೋಪಿಯನ್ನು ಬುಧವಾರ ತ್ರಾಸಿಯ ಬಳಿ ಕುಂದಾಪುರ ಗ್ರಾಮಾಂತರ ಪೊಲೀಸರು ಸೆರೆ ಹಿಡಿದಿದ್ದಾರೆ.

ಬಂಧಿತ ಆರೋಪಿಯನ್ನು ತ್ರಾಸಿಯ ಭರತ್‍ನಗರ ನಿವಾಸಿ ಪ್ರವೀಣ್ (24) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿರುವ ಬೈಕ್, ಚಿನ್ನದ ಉಂಗುರ ಮತ್ತು ಗುಜ್ಜಾಡಿ ಸೊಸೈಟಿಯೊಂದರಲ್ಲಿ ಚಿನ್ನದ ಕರಿಮಣಿ ಸರ ಅಡವಿರಿಸಿ ಪಡೆದುಕೊಂಡ ನಗದು ಹಣ ಒಟ್ಟು ರೂ. 41,000 ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ ಸಂಜೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅಗಸ್ಟ್ 25ರವರೆಗೂ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ಹಿನ್ನೆಲೆ:
ಶಾಲಾ ಬಸ್ಸಿನಲ್ಲಿ ಬರುವ ತನ್ನ ಮಗನನ್ನು ಕರೆದುಕೊಂಡು ಹೋಗಲು ಅಗಸ್ಟ್ 5 ರಂದು ಸಂಜೆ ಕಾಡಿನಬೆಟ್ಟು ನಿವಾಸಿ ದೇವಕಿ ಪೂಜಾರಿ (32) ಅವರು ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಕೊರ್ಗಿ ಕ್ರಾಸ್ ಸಮೀಪ ಕಾಡಿನಬೆಟ್ಟು ಕಡೆಗೆ ಹೋಗುವ ರಸ್ತೆಯ ಬಳಿಯಲಿ ರಸ್ತೆಯ ಬದಿಯಲ್ಲಿ ಬಂದು ನಿಂತಿದ್ದ ವೇಳೆ ಆರೋಪಿ ದೇವಕಿಯವರ ತಲೆಗೆ ಕಬ್ಬಿಣದ ರಾಡ್‍ನಿಂದ ಗಂಭೀರವಾಗಿ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಬಳೆ ಹಾಗೂ ಉಂಗುರವನ್ನು ಎಗರಿಸಿ ಪರಾರಿಯಾಗಿದ್ದನು. ಹಾಡಹಗಲೇ ಈ ಪ್ರಕರಣ ನಡೆದಿದ್ದು, ಸ್ಥಳೀಯರನ್ನು ಭಯಭೀತರನ್ನಾಗಿ ಮಾಡಿತ್ತು.

ತನಿಖೆಗೆ ಸಹಕಾರಿಯಾಯ್ತು ಸಿಸಿ ಟಿವಿ ಫೂಟೇಜ್:
ತಕ್ಷಣವೇ ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಆರಂಭಿಸಿದ್ದರು. ಅದೇ ದಿನ ಸಂಜೆ ರಸ್ತೆಯಲ್ಲಿ ಕೆಂಪು ಬಣ್ಣದ ಬೈಕ್ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಬೈಕ್ ಪತ್ತೆಗೆ ಮುಂದಾದ ಪೊಲೀಸರ ತಂಡಕ್ಕೆ ಬೈಕ್ ಆಲ್ಟರೇಶನ್ ಮಾಡಿದ್ದರಿಂದಾಗಿ ಆರಂಭದಲ್ಲಿ ಯಾವುದೇ ಸುಳಿವು ಲಭ್ಯವಾಗಿಲ್ಲ. ಅದೇ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಅಳವಡಿಸಿದ ಸಿಸಿ ಟಿವಿ ಫೂಟೇಜ್‍ನಲ್ಲಿ ಬೈಕ್ ಪತ್ತೆ ಹಚ್ಚಿದ ಪೊಲೀಸರು ಆ ಬೈಕ್ ಯಾವ ಮಾರ್ಗದಲ್ಲಿ ಸಂಚರಿಸಿದೆ ಎನ್ನುವುದರ ಕುರಿತು ಮಾಹಿತಿ ಕಲೆಹಾಕಿದ್ದರು. ಬೈಕ್ ಕುಂದಾಪುರ ಮಾರ್ಗವಾಗಿ ತ್ರಾಸಿಯ ಗಂಗೊಳ್ಳಿ ರಸ್ತೆಗೆ ಹೋಗಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಬೈಕ್ ಮಾಲೀಕನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಆರೋಪಿಯ ಸುಳಿವು ಸಿಕ್ಕಿದೆ.

ಸ್ನೇಹಿತನ ಬೈಕ್ ಕೃತ್ಯಕ್ಕೆ ಬಳಕೆ:
ಆರೋಪಿ ಪ್ರವೀಣ್ ಈ ಕೃತ್ಯಕ್ಕಾಗಿ ಬಳಸಿರುವುದು ಕೆಂಪು ಬಣ್ಣದ ಆಲ್ಟರೇಶನ್ ಮಾಡಿರುವ ಹೋಂಡಾ ಹಂಕ್ ಬೈಕ್. ಈತ ಮೀನುಗಾರಿಕಾ ವೃತ್ತಿ ಮಾಡಿಕೊಂಡಿದ್ದು, ಅದೇ ವೃತ್ತಿಯಲ್ಲಿರುವ ಆತನ ಸ್ನೇಹಿತನ ಬೈಕ್ ಅನ್ನು ಕೃತ್ಯ ನಡೆಸಿದ ದಿನ ಬಳಸಿಕೊಂಡಿದ್ದಾನೆ. ಈ ಬೈಕ್‍ಗೆ ಕೀ ಇಲ್ಲದ ಕಾರಣ ಯಾವ ಸಮಯದಲ್ಲಾದರೂ ಬೈಕ್ ಅನ್ನು ಪ್ರವೀಣ್ ತೆಗೆದುಕೊಂಡು ಹೋಗುತ್ತಿದ್ದ ಎನ್ನುವ ಅಂಶ ಪೊಲೀಸ್ ತನಿಖೆಯ ವೇಳೆ ಬಯಲಾಗಿದೆÉ.

ಎರಡು-ಮೂರು ದಿನಗಳಿಂದ ಹೊಂಚು:
ಕೃತ್ಯ ನಡೆಸುವ ಮೊದಲು ಆರೋಪಿ ಪ್ರವೀಣ್ ಎರಡು ಮೂರು ದಿನಗಳಿಂದ ಕೊರ್ಗಿ ಪರಿಸರಕ್ಕೆ ಬಂದು ಹೋಗುತ್ತಿದ್ದು, ದೇವಕಿಯವರ ಚಲನವಲನಗಳನ್ನು ಹತ್ತಿರದಿಂದಲೇ ಗಮನಿಸಿದ್ದ. ದೇವಕಿ ಅವರು ಮನೆಯಿಂದ ಹೊರಡುವ ಸಮಯ, ಶಾಲಾ ಬಸ್ ಬರುವ ಸಮಯ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಸಾಕಷ್ಟು ಪೂರ್ವ ತಯಾರಿ ನಡೆಸಿಕೊಂಡಿದ್ದ. ಕೃತ್ಯ ನಡೆಸುವ ಸ್ಥಳದಿಂದ ಅನತಿ ದೂರದಲ್ಲಿ ಬೈಕ್ ಅನ್ನು ನಿಲ್ಲಿಸಿ ರಾಡ್‍ನಿಂದ ಹಲ್ಲೆ ನಡೆಸಿ ಚಿನ್ನಾಭರಣವನ್ನು ಎಗರಿಸಿ ಆ ಬಳಿಕ ಬೈಕ್ ಮೂಲಕ ವಾಪಾಸ್ಸಾಗಿದ್ದ.

ಸ್ನೇಹಿತರಿಂದ ಅಡಮಾನ:
ಶುಕ್ರವಾರ ಆರೋಪಿ ಪ್ರವೀಣ್ ಸುಲಿಗೆ ಮಾಡಿ ತಂದಿರುವ ಚಿನ್ನಾಭರಣವನ್ನು ಹಣದ ಅವಶ್ಯಕತೆ ಇದೆ ಎಂದು ತನ್ನ ಸ್ನೇಹಿತನ ಬಳಿ ಬ್ಯಾಂಕ್‍ನಲ್ಲಿ ಅಡವಿಟ್ಟು ಹಣ ತಂದು ಕೊಂಡಲು ತಿಳಿಸಿದ್ದ. ಅಂತೆಯೇ ಸ್ನೇಹಿತ ಸ್ಥಳೀಯ ಸೊಸೈಟಿಯೊಂದರಲ್ಲಿ ಅಡವಿಟ್ಟು ಹಣ ತಂದು ಕೊಟ್ಟಿದ್ದ. ಬುಧವಾರ ತ್ರಾಸಿ ಸಮೀಪ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಾಗ ಆತನ ಜೇಬಿನಲ್ಲಿ ಉಂಗುರವಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯ ಸುತ್ತ ಅನುಮಾನಗಳ ಹುತ್ತ:
ಆರೋಪಿ ಪ್ರವೀಣ್ ಈ ಹಿಂದೆಯೂ ಗಂಗೊಳ್ಳಿ ಹಾಗೂ ಮುಂತಾದ ಕಡೆಗಳಲ್ಲಿ ಇದೇ ರೀತಿಯ ಸುಲಿಗೆ ನಡೆಸಿರುವ ಬಲವಾದ ಅನುಮಾನಗಳು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರೆಸುವ ಸಾಧ್ಯತೆಗಳಿವೆ. ಆದರೆ ಇದೇ ಮೊದಲ ಬಾರಿಗೆ ಪ್ರವೀಣ್ ಪೊಲೀಸ್ ಅತಿಥಿಯಾಗಿದ್ದಾನೆ.

ಸ್ಥಳೀಯರು ನಿರಾಳ:
ಹಾಡಹಗಲೇ ಕೊರ್ಗಿ ಸುಲಿಗೆ ಪ್ರಕರಣ ನಡೆದಿರುವ ಕುರಿತು ಸಾರ್ವಜನಿಕರು ಭಯಭೀತರಾಗಿದ್ದರು. ಒಬ್ಬಂಟಿ ಹೆಣ್ಣು ಮಕ್ಕಳು ತಿರುಗಾಡುವುದೇ ಕಷ್ಟ ಎನ್ನುವ ಮಾತುಗಳು ಸ್ಥಳೀಯವಾಗಿ ಹರಿದಾಡತೊಡಗಿತ್ತು. ಆದರೆ ಗ್ರಾಮಾಂತರ ಠಾಣೆಯ ಪೊಲೀಸರು ಕೊಂಚವೂ ಸುಳಿವಿಲ್ಲದೇ ಕಗ್ಗೆಂಟಾಗಿ ಉಳಿದಿದ್ದ ಪ್ರಕರಣವನ್ನು ಭೇದಿಸುವ ಮೂಲಕ ಸಾರ್ವಜನಿಕರಲ್ಲಿದ್ದ ಭಯವನ್ನು ದೂರವಾಗಿಸಿದ್ದಾರೆ. ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ನಿರಂಜನ್ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್.ಕೆ. ಕುಂದಾಪುರ ಉಪವಿಭಾಗ ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್.ರವರ ನೇತೃತ್ವದಲ್ಲಿ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ್ ಗೌಡ ಬಿ. ಎಸ್, ಸಿಬ್ಬಂದಿಗಳಾದ ರಾಜು.ಬಿ, ಅನಿಲ್ ಕುಮಾರ್, ಚಿದಾನಂದ, ಜೀಪು ಚಾಲಕ ಆನಂದ, ಕುಂದಾಪುರ ಉಪವಿಭಾಗ ಅಪರಾಧ ಪತ್ತೆ ದಳದ ರಾಮು ಹೆಗ್ಡೆ ಮತ್ತು ರಾಘವೇಂದ್ರ ಉಪ್ಪುಂದ, ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಕಾರ್ಯಾಚರಣೆಯಲ್ಲಿ ಇದ್ದರು.


Spread the love