Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5ನೇ ಹಂತದ ಸ್ವಚ್ಛ ಮಂಗಳೂರು ಶ್ರಮದಾನದ 9ನೇ ಭಾನುವಾರದ ವರದಿ

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5ನೇ ಹಂತದ ಸ್ವಚ್ಛ ಮಂಗಳೂರು ಶ್ರಮದಾನದ 9ನೇ ಭಾನುವಾರದ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5ನೇ ಹಂತದ ಸ್ವಚ್ಛ ಮಂಗಳೂರು ಶ್ರಮದಾನದ 9ನೇ ಭಾನುವಾರದ ವರದಿ

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಮುಖ ಅಂಗವಾದ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 9ನೇ ಶ್ರಮದಾನ ಕಾರ್ಯಕ್ರಮ ನಾಗುರಿಯಲ್ಲಿ ನಡೆಯಿತು.

ಭಾನುವಾರ ಮುಂಜಾನೆ 7-30 ಕ್ಕೆ ನಾಗುರಿ ಮಾರುಕಟ್ಟೆ ಬದಿಯಲ್ಲಿ ಶ್ರಮದಾನಕ್ಕೆ ಅಯೋಧ್ಯಾ ರಾಮಕೃಷ್ಣ ಮಿಷನ್ನಿನ ಸ್ವಾಮಿ ಭಕ್ತಿಸುಧಾನಂದಜಿ ಹಾಗೂ ರಾಮಕೃಷ್ಣ ಮಿಷನ್ ಮುಖ್ಯ ಕೇಂದ್ರದಿಂದ ಆಗಮಿಸಿದ್ದ ಸ್ವಾಮಿ ತ್ರಿಗುಣೇಶಾನಂದಜಿ ಜಂಟಿಯಾಗಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಗರೋಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಧರ್ಮಪಾಲ, ಶುಭೋದಯ ಆಳ್ವ, ಮನಪಾ ಆರೋಗ್ಯ ಅಧೀಕ್ಷಕಿ ರಕ್ಷಿತಾ, ಸಂದೀಪ್ ಗರೋಡಿ, ಸುಭಾಷ ಪಡೀಲ್, ಸಂದೀಪ್ ಪಂಪವೆಲ್, ಪೂಜಾ ರಾಜ್ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶುಭಹಾರೈಸಿ ಮಾತನಾಡಿದ ಸ್ವಾಮಿ ಭಕ್ತಿಸುಧಾನಂದಜಿ “ಈಶ್ವರ ಪ್ರಾಪ್ರಿಗಾಗಿ ಜ್ಞಾನ ಅತ್ಯವಶ್ಯಕವಾಗಿದೆ. ಅಂತಹ ಜ್ಞಾನ ದೊರೆಯಬೇಕಾದರೆ ಚಿತ್ತಶುದ್ಧಿಯಾಗಬೇಕು. ಆ ಚಿತ್ತಶುದ್ಧಿಯ ಮೊದಲು ಬಾಹ್ಯ ಶುಚಿತ್ವ ಅತ್ಯಂತ ಅವಶ್ಯಕ. ಅಂತಹ ಕಾರ್ಯ ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವುದು ಬಹಳ ಹೆಮ್ಮೆಯ ಸಂಗತಿ. ಜನಮಾನಸಕ್ಕೆ ಸ್ವಚ್ಛತೆಯ ಜಾಗೃತಿಯನ್ನು ಉಂಟುಮಾಡುವುದು ಅತ್ಯಂತ ಶ್ರೇಷ್ಠ ಸೇವೆಯಾಗಿದೆ. ಇದೊಂದು ಕೇವಲ ಕಾರ್ಯಕ್ರಮವೆಂದು ಭಾವಿಸದೇ ಭಗವಂತನ ಕೈಂಕರ್ಯ ಎಂದು ಭಾವಿಸಿದರೇ ಉತ್ತಮ ಫಲ ಸಿಗುತ್ತದೆ. ಅಂತಹ ಕಾರ್ಯಕ್ಕೆ ದೇವರ ಅನುಗ್ರಹವೂ ಸಿಗುತ್ತದೆ.” ಎಂದು ತಿಳಿಸಿ ಶುಭ ಹಾರೈಸಿದರು.

ಶ್ರಮದಾನ: ಪಂಪವೆಲ್‍ನಿಂದ ಆರಂಭಿಸಿ ನಾಗುರಿ ಪಡೀಲ್‍ವರೆಗಿನ ರಸ್ತೆಯ ಬದಿಯ ಐದು ಸ್ಥಳಗಳಲ್ಲಿ ಕಾರ್ಯಕರ್ತರು ಗುಂಪುಗಳನ್ನು ರಚಿಸಿಕೊಂಡು ಶ್ರಮದಾನ ಮಾಡಿದರು. ಮೊದಲಿಗೆ ನಾಗುರಿ ಮಾರುಕಟ್ಟೆ ಬಳಿಯ ಕಸದ ರಾಶಿಯನ್ನು ತೆರವು ಮಾಡಲಾಯಿತು. ನಂತರ ಮಾರುಕಟ್ಟೆ ಹಿಂಬದಿಯ ಗೋಡೆಯನ್ನು ತೊಳೆದು ಬಣ್ಣ ಹಚ್ಚಲಾಯಿತು. ಬಳಿಕ ಅಲ್ಲಿ ಯಾರೂ ಕಸಹಾಕದಂತೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಸ್ಥಳವನ್ನು ಸುಂದರವಾಗಿರುವಂತೆ ಮಾಡಲು ಹೂಗಿಡಗಳ ಕುಂಡಗಳನ್ನು ಅಲ್ಲಿರಿಸಲಾಯಿತು. ಅಭಿಯಾನದ ಪ್ರಮುಖ ದಿಲ್‍ರಾಜ್ ಆಳ್ವ, ಉದಯ ಕೆ ಪಿ ಹಾಗೂ ಪ್ರಕಾಶ್ ಗರೋಡಿ ನೇತೃತ್ವ ವಹಿಸಿದ್ದರು. ಇನ್ನೊಂದೆಡೆ ಪಂಪವೆಲ್ ಹೂವಿನ ಮಾರುಕಟ್ಟೆ ಎದುರಿನ ಸ್ಥಳವೊಂದರಲ್ಲಿ ತ್ಯಾಜ್ಯದ ರಾಶಿಯನ್ನು ಪೆÇ್ರ. ಶೇಷಪ್ಪ ಅಮೀನ್, ಸುಧೀರ್ ವಾಮಂಜೂರು, ಉಮಾಕಾಂತ್ ಸುವರ್ಣ ಮತ್ತಿತರ ಕಾರ್ಯಕರ್ತರು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಮೂರನೇ ತಂಡ ಅರಣ್ಯ ಭವನದ ಬಳಿಯ ಗ್ಯಾಲರಿ ಅಪಾರ್ಟಮೆಂಟ್ ಎದುರಿಗಿದ್ದ ತ್ಯಾಜ್ಯದ ರಾಶಿಯನ್ನು ತೆಗೆದು ಸ್ವಚ್ಛ ಮಾಡಿದರು. ರಾಮಚಂದ್ರ ಶೆಟ್ಟಿ, ಕಮಲಾಕ್ಷ ಪೈ ಇವರುಗಳು ಮಾರ್ಗದರ್ಶನ ನೀಡಿದರು. ವಿಠಲದಾಸ್ ಪ್ರಭು, ಪ್ರಶಾಂತ ಯಕ್ಕೂರು, ಬಾಲಕೃಷ್ಣ ನಾೈಕ್ ಹಾಗೂ ಸ್ವಯಂ ಸೇವಕರು ಪಡೀಲ್ ವೃತ್ತ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿದ್ದ ಕಸ ಗುಡಿಸಿ ಸ್ವಚ್ಛಗೊಳಿಸಿದರು.

ಬಸ್ ತಂಗುದಾಣಗಳ ಸ್ವಚ್ಛತೆ: ಪಡೀಲ್ ಜಂಕ್ಷನ್‍ನಲ್ಲಿರುವ ಬಸ್ ತಂಗುದಾಣವನ್ನು ಕಳೆದ ವರ್ಷ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದಡಿ ನೂತನವಾಗಿ ನಿರ್ಮಿಸಲಾಗಿತ್ತು. ಇಂದು ಅದನ್ನು ಶುಚಿಗೊಳಿಸಿ, ಕುಳಿತುಕೊಳ್ಳುವ ಆಸನ ಹಾಗೂ ಕಂಬಗಳಿಗೆ ಸುಂದರವಾಗಿ ಬಣ್ಣಬಳಿದು ಅಂದಗೊಳಿಸಲಾಯಿತು. ಅಲ್ಲದೇ ಸ್ವಚ್ಛತೆಯ ಜಾಗೃತಿಯನ್ನುಂಟುಮಾಡುವ ಸಂದೇಶಗಳುಳ್ಳ ಫಲಕ ಹಾಗೂ ಮಡಕೆ ಗೊಬ್ಬರದ ಪ್ರಚಾರಕ್ಕಾಗಿ ಸುಂದರ ಗ್ರಾಫಿಕ್ಸ್ ಇರುವ ಫಲಕ ಅಳವಡಿಸಲಾಗಿದೆ. ಜೊತೆಗೆ ತಂಗುದಾಣದ ಸುತ್ತಮುತ್ತಲಿನ ಕಸವನ್ನು ತೆಗೆದು ಶುಚಿ ಮಾಡಲಾಯಿತು.

ಜಾಗೃತಿ ಕಾರ್ಯ: ನಾಗುರಿ ಮಾರುಕಟ್ಟೆಯ ಬಳಿ ಅಪಾರವಾಗಿ ಬೀಳುತ್ತಿದ ಕಸದ ರಾಶಿಯನ್ನು ಇಂದು ಜೆಸಿಬಿ ಹಾಗೂ ಟಿಪ್ಪರಗಳ ಸಹಾಯದಿಂದ ತೆರವು ಮಾಡಲಾಗಿದೆ. ಹಾಗೂ ಅಲ್ಲಿದ್ದ ಅಂಗಡಿ ವರ್ತಕರಿಗೆ ಸುತ್ತಮುತ್ತಲಿನ ಸಾರ್ವಜನಿಕರಿಗೆ ಅಲ್ಲಿ ಮತ್ತೆ ಕಸ ಹಾಕದಂತೆ ತಿಳಿಹೇಳಲಾಯಿತು. ಕಸವನ್ನು ಮಹಾನಗರ ಪಾಲಿಕೆಯ ವಾಹನಕ್ಕೆ ಕೊಡಬೇಕಾಗಿ ತಾಕೀತು ಮಾಡಲಾಯಿತು. ಮನಪಾ ಪರಿಸರ ಅಭಿಯಂತರ ಮಧು ಮನೋಹರ್ ನಿರ್ದೇಶನದಲ್ಲಿ ಆರೋಗ್ಯ ಅಧೀಕ್ಷಕಿ ರಕ್ಷಿತಾ ದುರ್ಗೇಶ್, ಪ್ರವೀಣ ಚಂದ್ರ, ಅಬ್ದುಲ್ ಅರೀಶ್ ಹಾಗೂ ಸ್ವಯಂಸೇವಕರು ಹಲವಾರು ಜನ ವರ್ತಕರನ್ನು ಭೇಟಿಯಾಗಿ ಜಾಗೃತಿ ಉಂಟುಮಾಡಿದರು. ಸ್ಥಳಿಯ ಮನಪಾ ಸದಸ್ಯೆ ಶ್ರೀಮತಿ ಆಶಾ ಡಿಸಿಲ್ವಾ ಕಾರ್ಯಕ್ರಮದ ನೇತೃತ್ವ ವಹಿಸಿ ಸೂಕ್ತ ಮಾರ್ಗದರ್ಶನ ನೀಡಿದರು.

ಸ್ವಚ್ಛತಾ ಅಭಿಯಾನದ ಸ್ವಯಂ ಸೇವಕರಾದ ಅನಿರುದ್ಧ ನಾಯಕ್, ಅಭಿಷೇಕ್ ವಿಎಸ್, ಪುನೀತ್ ಪೂಜಾರಿ ಸೌರಜ್ ಮಂಗಳೂರು ಮತ್ತಿತರರು ಶ್ರಮದಾನದಲ್ಲಿ ಭಾಗಿಯಾಗಿದ್ದರು. ಹಿಂದೂ ಜಾಗರಣ ವೇದಿಕೆಯ ಸದಸ್ಯರು ಶ್ರಮದಾನದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡರು. ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಉಮಾನಾಥ್ ಕೋಟೆಕಾರ್, ಸತ್ಯಜಿತ್ ಸುರತ್ಕಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ವûಚ್ಛ ಸೋಚ್ ವಿಚಾರ ಸಂಕಿರಣಗಳು: ಜನವರಿ 29, 30 ಮತ್ತು 31, 2019 ರಂದು ಒಟ್ಟು ಆರು ಕಾಲೇಜುಗಳಲ್ಲಿ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಯಿತು. ಎಸ್‍ಡಿಎಂ ಬಿಸಿನೆಸ್ ಮೇನೆಜ್‍ಮೆಂಟ್ ಕಾಲೇಜು, ಶ್ರೀದುರ್ಗಾಪರಮೇಶ್ವರಿ ಪದವಿ ಕಾಲೇಜು ಕಟೀಲು, ಡಾ. ಎಂ ವಿ ಶೆಟ್ಟಿ ಸ್ಪೀಚ್ ಆಂಡ್ ಹಿಯರಿಂಗ್ ಕಾಲೇಜು, ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಮಂಗಳೂರು, ಎಂ ವಿ ಶೆಟ್ಟಿ ಕಾಲೇಜ್ ಆಫ್ ಸೋಶಿಯಲ್ ವರ್ಕ್ ಹಾಗೂ ವಿಜಯಾ ಕಾಲೇಜು ಮೂಲ್ಕಿ ಈ ವಿದ್ಯಾಸಂಸ್ಥೆಗಳಲ್ಲಿ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಯಿತು.

ಸುಮಾರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೆಮಿನಾರ್‍ನಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ಸಂಪನ್ಮೂಲ ವ್ಯಕ್ತಿಗಳಾಗಿ ರಂಜನ್ ಬೆಳ್ಳರಪಾಡಿ, ಪೆÇ್ರ. ರಾಜಮೋಹನ್ ರಾವ್, ಗೋಪಿನಾಥ್ ರಾವ್, ಸುರೇಶ್ ಶೆಟ್ಟಿ ಸಂಕಿರಣಗಳನ್ನು ನಡೆಸಿಕೊಟ್ಟರು. ಗುರುಪ್ರಸಾದ ರಾವ್ ಸೆಮಿನಾರ್‍ಗಳನ್ನು ಸಂಯೋಜಿಸಿದರು. ಈ ಎಲ್ಲ ಕಾರ್ಯಕ್ರಮಗಳಿಗೆ ಎಂ.ಆರ್.ಪಿ.ಎಲ್ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.


Spread the love

Exit mobile version