
ರಾಮನಗರದಲ್ಲಿ ‘ಇದೇನ್ ಕರ್ಮ’ ಅಭಿಯಾನ ಶುರು
ರಾಮನಗರ: ಇಡೀ ರಾಮನಗರವೇ ಸಮಸ್ಯೆಗಳ ಆಗರವಾಗಿದ್ದು, ಪರಿಹಾರಕ್ಕೆ ಕ್ಷೇತ್ರದ ಶಾಸಕರು ಸ್ಪಂದಿಸುತ್ತಿಲ್ಲ. ಮೂರು ದಶಕಗಳಿಂದ ಅಧಿಕಾರದಲ್ಲಿರುವ ಎಚ್.ಡಿ.ದೇವೇಗೌಡರ ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿಲ್ಲ. ಕ್ಷೇತ್ರದ ಜನರು ಅನುಭವಿಸುತ್ತಿರುವ ನೋವು, ಸಂಕಷ್ಟದ ಭಾಗವಾಗಿ “ಇದೇನ್ ಕರ್ಮ” ಎಂಬ ಅಭಿಯಾನ ಆರಂಭಿಸಿರುವುದಾಗಿ ನಗರಸಭೆ ಮಾಜಿ ಅಧ್ಯಕ್ಷರೂ ಆದ ಹಾಲಿ ಸದಸ್ಯ ಕೆ.ಶೇಷಾದ್ರಿ (ಶಶಿ) ತಿಳಿಸಿದರು.
ನಗರದ ಟ್ರೂಪ್‌ಲೇನ್ ಬಡಾವಣೆಯಲ್ಲಿ ಅಭಿಯಾನ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಎಚ್.ಡಿ.ದೇವೇಗೌಡರು ನಂತರ ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ, ಸೊಸೆ ಅನಿತಾ ಕುಮಾರಸ್ವಾಮಿ ಈ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಆದರೆ ರಾಮನಗರದ ಅಭಿವೃದ್ಧಿಗೆ ಅವರು ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ ಎಂದು ದೂರಿದರು.
ನಗರದ ರೈಲ್ವೆ ನಿಲ್ದಾಣದ ಕೆಳಗೆ ಬರುವ ಟಿಪ್ಪುನಗರ, ಗೌಸಿಯಾನಗರ, ರಹಮಾನಿಯನಗರ, ಕೊತ್ತಿಪುರ, ಅರ್ಕೇಶ್ವರ ಕಾಲೋನಿ, ಯಾರಬ್ ನಗರ, ಟ್ರೂಪ್ ಲೇನ್, ಜಿಯಾವುಲ್ಲಾ ಬ್ಲಾಕ್, ಮೆಹಬೂಬ ನಗರ, ಫೂಲ್ ಬಾಗ್, ಈ ಭಾಗದಲ್ಲಿ ಎಸ್ಸಿ, ಎಸ್ಟಿ ಸಮುದಾಯ, ಅಲ್ಪಸಂಖ್ಯಾತರು ಹೆಚ್ಚಿನದಾಗಿ ವಾಸಿಸುತ್ತಿದ್ದಾರೆ. ಸುಮಾರು 90 ರಿಂದ 1 ಲಕ್ಷದವರೆಗೆ ಜನಸಂಖ್ಯೆಯುಳ್ಳ ಅತೀ ಹಿಂದುಳಿದ ಪ್ರದೇಶಗಳಾಗಿವೆ.
ಯುಜಿಡಿ, ರಸ್ತೆ, ಚರಂಡಿ, ಉದ್ಯಾನವನ, ಆಟದ ಮೈದಾನ ಸೇರಿದಂತೆ ಯಾವುದೇ ಸರಿಯಾದ ಸೌಲಭ್ಯ ದೊರಕಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ. ವಿಶೇಷ ಅನುದಾನ ತಂದು ಈ ಭಾಗದ ಅಭಿವೃದ್ದಿ ಮಾಡುವ ಕಾಳಜಿಯನ್ನು ಶಾಸಕರು ಮಾಡಲಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ವಿರುದ್ದ ಟೀಕಾ ಪ್ರಹಾರ ನಡೆಸಿದರು.
ಟ್ರೂಪ್‌ಲೇನ್ ಭಾಗದಲ್ಲಿ ವಾಸಿಸುತ್ತಿರುವ ಬಹುತೇಕ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದ ಬಡವರು. ಒಂದು ಚಿಕ್ಕ ಮನೆಯಲ್ಲಿ 10-12 ಮಂದಿ ವಾಸಿಸುತ್ತಿದ್ದಾರೆ. ಇವರಿಗೆ ಮನೆ ಕಟ್ಟಿಸಿಕೊಡುವ ಔದಾರ್ಯವನ್ನು ಶಾಸಕರು ಮಾಡಿಲ್ಲ. ಈ ಭಾಗಕ್ಕೆ ಸಂಪರ್ಕ ಕಲ್ಪಿಸಲು ರೈಲ್ವೆ ಅಂಡರ್ ಪಾಸ್ ಅಗತ್ಯವಿದೆ. ಕೆಲವು ತಿಂಗಳುಗಳ ಹಿಂದೆ ಈ ಭಾಗದಲ್ಲಿ ನೀರಿನ ಪ್ರವಾಹ ಬಂದು ರೈಲ್ವೆ ಅಂಡರ್ ಪಾಸ್ ಮುಚ್ಚಿ ಹೋಗಿ ಈ ಭಾಗಕ್ಕೆ ಸಂಪರ್ಕವೇ ಕಡಿದು ಹೋಗಿತ್ತು. ಎಚ್.ಡಿ.ಕುಮಾರಸ್ವಾಮಿ ಅವರು ಸಂಸದರಾಗಿದ್ದ ವೇಳೆ ರೈಲು ನಿಲ್ದಾಣದ ಬಳಿ ಫ್ಲೈ ಓವರ್ ನಿರ್ಮಾಣಕ್ಕೆ ಒತ್ತಾಯಿಸಲಾಗಿತ್ತು.
ಹಾಸನದ ಅಭಿವೃದ್ಧಿಯ ವಿಚಾರವಾಗಿ ಪದೇ ಪದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವ ದೇವೇಗೌಡರು, ರಾಮನಗರ ನಮ್ಮ ಕುಟುಂಬಕ್ಕೆ ಕರ್ಮಭೂಮಿ ಎಂದು ಢಂಗೂರ ಸಾರುವ ಮಾನ್ಯ ಕುಮಾರಸ್ವಾಮಿರವರು ಕೇಂದ್ರ ರೈಲ್ವೆ ಸಚಿವರನ್ನು ಮನವೊಲಿಸಿ ಈ ಕೆಲಸ ಮಾಡಿಸಬಹುದಿತ್ತು. ಆದರೆ ಅವರ ಮಲತಾಯಿ ಧೋರಣೆಯಿಂದ ಈ ಭಾಗದ ಜನತೆಗೆ ದ್ರೋಹವೆಸಗಿದ್ದಾರೆ ಎಂದು ಹರಿಹಾಯ್ದರು.
2005ರಲ್ಲಿ ಒಮ್ಮೆ ಸೀರಹಳ್ಳದಲ್ಲಿ ಬಂದ ಪ್ರವಾಹ ಪರಿಸ್ಥಿತಿಯಿಂದ ಈ ಭಾಗಕ್ಕೆ ಸಮಸ್ಯೆ ಆಗಿತ್ತು. 2022ರಲ್ಲಿ ಈ ಪರಿಸ್ಥಿತಿ ಮರುಕಳಿಸಿದೆ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಸಮಸ್ಯೆ ನೀಗಿಸಲು 17 ವರ್ಷ ಬೇಕಾ ಎಂದು ಅವರು ಪ್ರಶ್ನಿಸಿದರು.
ಸಂಸದರಾಗಿ ಡಿ.ಕೆ.ಸುರೇಶ್ ಅವರ ಕೊಡುಗೆ ಏನು ಎಂದು ಜೆಡಿಎಸ್ ಮುಖಂಡರು ಪ್ರಶ್ನಿಸಿದ್ದಾರೆ. ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಇಡೀ ದೇಶದ ಗಮನ ಸೆಳೆದು ಇಡೀ ದೇಶದಲ್ಲಿ ಸುರೇಶ್ ಮಾದರಿಯಾಗಿದ್ದಾರೆ. ಇಂದು ಅವರ ಮಾದರಿಯನ್ನು ದೇಶದ ಅನೇಕ ರಾಜ್ಯಗಳು ಅಳವಡಿಸಿಕೊಂಡಿವೆ. ನಿರಂತರ ಕೆಡಿಬಿ ಸಭೆಗಳನ್ನು, ದಿಶಾ ಸಭೆಗಳನ್ನು ಮಾಡಿ ಅಧಿಕಾರಿಗಳಿಂದ ಯೋಜನೆಗಳ ಅನುಷ್ಠಾನ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಸಂಸದರಾಗಿ ಒಂದೇ ಒಂದು ದಿಶಾ ಸಭೆಯನ್ನು ಮಾಡಲಿಲ್ಲ ಎಂದರು.
ರಾಮನಗರ ವಿಧಾನಸಭಾ ಕ್ಷೇತ್ರದ ಈ ಸಮಸ್ಯೆಗಳಿಗೆ ಮುಕ್ತಿ ಯಾವಾಗ ಎಂದು ಜನತೆ ಪ್ರಶ್ನಿಸಿದ್ದಾರೆ. ನಿರಂತರ ಅಧಿಕಾರದಲ್ಲಿರುವ ಕುಟುಂಬಕ್ಕೆ ಬುದ್ದಿ ಕಲಿಸಲು ಜನ ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಮನಗರದಿಂದ ಇಕ್ಬಾಲ್ ಹುಸೇನ್ ಆಯ್ಕೆಯಾದರೆ ಸರ್ಕಾರದ ಮೇಲೆ ಒತ್ತಡ ತಂದು ರಾಮನಗರ ಕ್ಷೇತ್ರದ ಅಭಿವೃದ್ದಿ ಮಾಡಿಸುವ ಬದ್ದತೆಯನ್ನು ಕಾಂಗ್ರೆಸ್ ನಗರಸಭಾ ಸದಸ್ಯರು ಹೊಂದಿದ್ದಾರೆ ಎಂದು ಕೆ.ಶೇಷಾದ್ರಿ ತಿಳಿಸಿದರು.
ಈ ವೇಳೆ ನಗರಸಭಾಧ್ಯಕ್ಷೆ ಬಿ.ಕೆ.ಪವಿತ್ರ, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಪ್ರಮುಖರಾದ ಶಿವಕುಮಾರಸ್ವಾಮಿ, ಸಾಹುಕಾರ್ ಅಮ್ಜದ್, ದೌಲತ್ ಷರೀಪ್, ಮುತ್ತುರಾಜ್, ಸೋಮಶೇಖರ್ (ಮಣಿ), ಫೈರೋಜ್ ಪಾಷ, ದೊಡ್ಡಿ ಸೂರಿ, ನಾಗಮ್ಮ, ಅನಿಲ್ ಜೋಗಿಂದರ್, ಶಿವಶಂಕರ್, ಹರೀಶ್