
ರಾಮನಗರದಲ್ಲಿ “ಇದೇನ್ ಕರ್ಮ ಭಾಗ-2” ಶುರು
ರಾಮನಗರ: ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾದರೂ ಸಹ ಜಿಲ್ಲಾ ಕೇಂದ್ರದಲ್ಲಿ ಒಂದು ಸುಸಜ್ಜಿತವಾದ ಕ್ರೀಡಾಂಗಣ ಇಲ್ಲದಿರುವುದು ಹೆಚ್.ಡಿ. ಕುಮಾರಸ್ವಾಮಿ ಅವರ ಸುಳ್ಳು ಆಶ್ವಾಸನೆಗಳಿಗೆ ನಿದರ್ಶನವಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷರು ಆದ ಹಾಲಿ ಸದಸ್ಯ ಕೆ.ಶೇಷಾದ್ರಿ (ಶಶಿ) ಆರೋಪಿಸಿದರು.
“ಇದೇನ್ ಕರ್ಮ ಭಾಗ-2” ಸಂಬಂಧ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2005ರಲ್ಲಿ ನಿರ್ಮಾಣಗೊಂಡ ಈ ಕ್ರೀಡಾಂಗಣಕ್ಕೆ ಅಂದಿನ ಶಾಸಕರಾಗಿದ್ದ ಸಿ.ಎಂ.ಲಿಂಗಪ್ಪನವರು 10ಲಕ್ಷ ರೂ ಎಂಎಲ್‌ಸಿ ಜವರೇಗೌಡ ಅವರ 10ಲಕ್ಷ ರೂಗಳ ಅನುದಾನ ನೀಡಿದ್ದರು. ಕುಮಾರಸ್ವಾಮಿ ಅವರು ಈ ಕ್ರೀಡಾಂಗಣವನ್ನು ರಾಷ್ಟ್ರಮಟ್ಟಕ್ಕೆ ಏರಿಸುವುದಾಗಿ ಹೇಳಿದ್ದರು. ಆದರೆ ಕ್ರೀಡಾಂಗಣ ಅಭಿವೃದ್ದಿಯ ಬಗ್ಗೆ ಇದುವರೆಗೂ ಗಮನ ಹರಿಸಿಲ್ಲ. ಇಲ್ಲಿನ ಜನರ ಕಿವಿಗೆ ಹೂ ಇಟ್ಟು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕ್ಷೇತ್ರದ ಮತದಾರರ ಆಶೀರ್ವಾದದಿಂದ ರಾಜ್ಯದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರೂ ಸಹ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಹತ್ತಾರು ಜನ ಕ್ರೀಡಾಪಟುಗಳು ಜಿಲ್ಲೆಯಲ್ಲಿದ್ದರೂ ಸಹ ಅವರಿಗೆ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ಸ್ಥಳೀಯ ಪ್ರತಿಭೆಗಳು ಹೊರಬರಲು ಸಾಧ್ಯವಾಗಿಲ್ಲ. ಹೀಗಾಗಿ ಕ್ಷೇತ್ರಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರ ವಿಶೇಷ ಕೊಡುಗೆ ಏನೂ ಇಲ್ಲ ಎಂದು ದೂರಿದರು.
ರಾಮನಗರ ಕ್ಷೇತ್ರಕ್ಕೆ ಅನಿತಾಕುಮಾರಸ್ವಾಮಿ ಅವರು ಆದರ್ಶ ಶಾಸಕಿಯಾಗಿ ಕೆಲಸ ಮಾಡಿದ್ದಾರೆ ಎನ್ನುವುದಾದರೆ ಅವರು ಈಗ ಏಕಾಏಕಿ ಕ್ಷೇತ್ರದಿಂದ ಪಲಾಯನ ಏಕೆ ಮಾಡುತ್ತಿದ್ದಾರೆ? ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಎಂದು ಘೋಷಿಸುವ ಮುನ್ನ ಕ್ಷೇತ್ರದ ಜನರ ಅಭಿಪ್ರಾಯ ಕೇಳಿದ್ದಾರೆಯೇ? ಅವರ ಇಷ್ಟದಂತೆ ಅಭ್ಯರ್ಥಿಯನ್ನು ಘೋಷಣೆ ಮಾಡಿಕೊಳ್ಳಲು ರಾಮನಗರ ಕ್ಷೇತ್ರವನ್ನು ಗುತ್ತಿಗೆ ಪಡೆದಿದ್ದಾರಾ? ಎಂದು ಪ್ರಶ್ನಿಸಿದರು. ಕುಟುಂಬ ರಾಜಕಾರಣಕ್ಕಾಗಿ ರಾಮನಗರದ ಜನರನ್ನು ಗುಲಾಮರಂತೆ ಕಾಣುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ಷಕ್ಕೊಮ್ಮೆ ನಡೆಯುವ ಚಾಮುಂಡೇಶ್ವರಿ ಜಾತ್ರೆಯಲ್ಲಿ ಜನರಿಗೆ ಮುಖ ತೋರಿಸಿ ಭಾವನಾತ್ಮಕವಾಗಿ ಮಾತನಾಡಿ ಹೋಗುವಂತಹ ಇವರಿಗೆ ಈ ಬಾರಿ ಜನರು ಸರಿಯಾದ ಪಾಠ ಕಲಿಸಲಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತವಾಗಿದೆ. ಕನಕಪುರ ಕ್ಷೇತ್ರದ ಶಾಸಕರು ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಹಾಗೂ ರಾಮನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರ ಗೆಲುವಿಗಾಗಿ ಪಕ್ಷದ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ದುಡಿಯಲು ಪಣ ತೊಟ್ಟಿದ್ದೇವೆ ಎಂದರು.
ಇಡೀ ರಾಜ್ಯದ ಜನರಿಗೆ ಸುಳ್ಳು ಹೇಳಿಕೊಂಡು ಹೋಗುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ಸುಳ್ಳಿನ ಆಶ್ವಾಸನೆ ಕೊಡುವುದನ್ನು ಬಿಡಬೇಕು. ಇವರ ವೈಫಲ್ಯಗಳನ್ನು ಜನಸಾಮಾನ್ಯರ ಮುಂದೆ ತಿಳಿಸಿ ಜಾಗೃತಿ ಮೂಡಿಸುವುದು ಹಾಗೂ ಒಂದು ಬಾರಿ ಕ್ಷೇತ್ರದ ಬದಲಾವಣೆ ಮಾಡುವ ಉದ್ದೇಶದಿಂದಲೇ ಇದೇನ್ ಕರ್ಮ ಭಾಗ-1 ಮತ್ತು 2 ಅಭಿಯಾನ ಹಮ್ಮಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ನಿವೇಶನ ಮತ್ತು ವಸತಿ ವಂಚಿತರ ಪರ ಆಯಾ ಸ್ಥಳಗಳಲ್ಲಿಯೇ ಸುದ್ದಿಗೋಷ್ಠಿ ನಡೆಸಲಾಗುವುದು ಎಂದು ಕೆ.ಶೇಷಾದ್ರಿ ತಿಳಿಸಿದರು.
ನಗರಸಭೆ ಅಧ್ಯಕ್ಷೆ ಪವಿತ್ರ ಲಕ್ಷ್ಮಿಕಾಂತ್, ಮಾಜಿ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೇತನ್‌ಕುಮಾರ್, ನಗರಸಭೆ ಸದಸ್ಯರಾದ ದೌಲತ್ ಷರೀಪ್, ನಿಜಾಮುದ್ದೀನ್ ಷರೀಪ್, ಅಜ್ಮತ್ ಮುಹೀಬ್ ಖುರೇಷಿ, ಸೋಮಶೇಖರ್(ಮಣ), ಮುಖಂಡರಾದ ಶಿವಕುಮಾರಸ್ವಾಮಿ, ಗುಡ್ಡೆ ವೆಂಕಟೇಶ್, ಶಿವಶಂಕರ್, ಸಾಹುಕಾರ್ ಅಮ್ಜದ್, ಅನಿಲ್ ಜೋಗಿಂದರ್, ದೊಡ್ಡಿ ಸೂರಿ, ಶಿವಲಿಂಗಯ್ಯ ಮುಂತಾದವರು ಹಾಜರಿದ್ದರು.