ರಾಮನಗರದಲ್ಲಿ ಪ್ರವಾಸೋದ್ಯಮ ಉತ್ತೇಜನ:ಡಿಸಿ ಡಾ.ಅವಿನಾಶ್ ಮೆನನ್

Spread the love

ರಾಮನಗರದಲ್ಲಿ ಪ್ರವಾಸೋದ್ಯಮ ಉತ್ತೇಜನ:ಡಿಸಿ ಡಾ.ಅವಿನಾಶ್ ಮೆನನ್

ರಾಮನಗರ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಮುಂದೆ ಬಂದು ಮನವಿ ಸಲ್ಲಿಸಿದರೆ ಪರಿಗಣಿಸಲಾಗುವುದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರವಾಸೋಧ್ಯಮ ಉತ್ತೇಜಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಹಂದಿಗುಂದಿ, ಕೈಲಾಂಚ, ಸಾವನದುರ್ಗ, ಚುಂಚಿ ಫಾಲ್ಸ್ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಬರುವ ಸಂಘ-ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಟ್ರಕ್ಕಿಂಗ್, ರಾಕಿಂಗ್, ಹೈ ರೋಪ್ ಕೋರ್ಸ್, ಕಾನ್ ಫಿ ರಾಕ್ ಮತ್ತು ಜಿಪ್ ಲೈನ್, ಬೋಟ್ ರೈಡಿಂಗ್, ಮೈಕ್ರೋ ಹೇರೋ ಸ್ಪೋರ್ಸ್, ಪ್ಯಾರಾ ಮೋಟಾರ್‍ಸ್, ಹಾಟ್ ಏರ್ ಬಲೂನ್, ಬಂಜಿ ಜಂಪಿಂಗ್ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸಲು ಇರುವಂತಹ ಚಟುವಟಿಕೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಇದರಿಂದ ಜಿಲ್ಲೆಯಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಿದಂತಾಗುತ್ತದೆ ಹಾಗೂ ಸ್ಥಳೀಯರಿಗೆ ಉದ್ಯೋಗ ಒದಗಿಸುವಂತಾಗುತ್ತದೆ ಎಂದರು.

ಮೇಕೆದಾಟು ಸ್ಥಳವನ್ನು ಪ್ರಸ್ತುತ ಒಂದು ಬದಿಯಲ್ಲಿ ಮಾತ್ರ ಪ್ರವಾಸಿಗರು ಹೋಗಿ ಬರಲು ಸಾಧ್ಯವಾಗುತ್ತಿದ್ದು, ಸಂಪೂರ್ಣ ಮೇಕೆದಾಟನ್ನು ವೀಕ್ಷಿಸಲು ಆಗುತ್ತಿಲ್ಲ. ಆದ್ದರಿಂದ ಅವಶ್ಯವಿರುವ ಕಡೆ ರೂಪ್ ವೇ ನಿರ್ಮಿಸಿ ಸಂಪೂರ್ಣ ಮೇಕೆದಾಟನ್ನು ವೀಕ್ಷಿಸುವಂತೆ ಮಾಡಿದರೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಂತಾಗುತ್ತದೆ ಎಂದರು.

ಚನ್ನಪಟ್ಟಣ ಬಳಿ ಇರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ಟ್ರೀ-ಪಾರ್ಕ್‌ನಲ್ಲಿ ಜಿಪ್ ಲೈನ್ ಅಳವಡಿಸಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಬಹುದು ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತೆ ಇರುವ ಪ್ರದೇಶಗಳನ್ನು ಗುರುತಿಸಿ ಅವುಗಳ ಮಾಹಿತಿಯನ್ನು ನೀಡುವಂತೆ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ವಾಣಿಜ್ಯೋದ್ಯಮಕ್ಕೆ ಸಂಬಂಧಿಸಿದ ಅಂಗಡಿಗಳು, ಹೋಟೆಲ್‌ಗಳು, ಹೋಂ ಸ್ಟೇಗಳು, ರೆಸಾರ್ಟ್‌ಗಳು ಸೇರಿದಂತೆ ಅಗತ್ಯವಿರುವವರು ಕೂಡಲೇ ಅಗ್ನಿ ಶಾಮಕ ದಳ ಇಲಾಖೆಯಿಂದ ನಿರಾಪೇಕ್ಷಣಾ ಪತ್ರವನ್ನು ಕಡ್ಡಾಯವಾಗಿ ಪಡೆಯುವಂತೆ ಹಾಗೂ ಜಿಲ್ಲೆಯಲ್ಲಿ ರೆಸಾರ್ಟ್ ಮತ್ತು ಹೋಂ ಸ್ಟೇಗಳನ್ನು ಸ್ಥಾಪಿಸಲು ಇಚ್ಛಿಸುವವರು ಅರ್ಜಿಗಳನ್ನು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಮಾರುತಿ ಪ್ರಸನ್ನ ಅವರು ಮಾತನಾಡಿ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು, ಅದನ್ನು ಸಂಪರ್ಕಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಬರುವ ಮನವಿಗಳನ್ನು ಸಕಾಲ ಮತ್ತು ಎಕ್ಸ್‌ಪ್ರೆಸ್ ವೇ ಅಡಿಯಲ್ಲಿ ನಿರಾಪೇಕ್ಷಣ ಪತ್ರವನ್ನು ನೀಡಲು ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಜಿಲ್ಲಾ ಅರಣ್ಯಾಧಿಕಾರಿ ದೇವರಾಜು, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ರೂಪಾ ಸೇರಿದಂತೆ ಇತರರು ಉಪಸ್ಥಿತರಿದ್ದರು.


Spread the love