
ರಾಮನಗರದಲ್ಲಿ ಮಹಿಳೆ ಅನುಮಾನಾಸ್ಪದ ಸಾವು
ರಾಮನಗರ: ತಾಲ್ಲೂಕಿನ ಕಸಬಾ ಹೋಬಳಿ ಜಯಪುರ ಗೇಟ್ ಸಮೀಪ ಹಾದು ಹೋಗಿರುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿದೆ.
ಜಾಲಮಂಗಲ ರಸ್ತೆಗೆ ಅಡ್ಡಲಾಗಿ ಜಯಪುರ ಗೇಟ್ ಬಳಿ ನಿರ್ಮಿಸಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆಯಲ್ಲಿ ಮಹಿಳೆಯ ಶವವು ಮಕಾಡೆಯಾಗಿ ಬಿದ್ದಿದ್ದು, ವಾಯು ವಿಹಾರಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಮೃತ ಮಹಿಳೆ ನಗರದ ಬಾಲಗೇರಿ ಬಡಾವಣೆಯ ವಾಸಿ ಸವಿತಾ ಎಂದು ಗುರುತಿಸಲಾಗಿದೆ. ಈಕೆಯ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಗಾರೆ ಕೆಲಸ ಮಾಡುತ್ತಿದ್ದ ಸವಿತಾ ರನ್ನು ಯಾರಾದರೂ ಬೇರೆ ಕಡೆ ಕೊಲೆ ಮಾಡಿ ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ತಂದು ಬಿಸಾಡಿ ಹೋಗಿದ್ದಾರೆಯೇ? ಅಥವಾ ಎಕ್ಸ್‌ಪ್ರೆಸ್ ಹೈವೆಯಲ್ಲಿ ಯಾವುದಾದರೂ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರ ತನಿಖೆಯಿಂದ ನಿಜಾಂಶ ಹೊರ ಬರಬೇಕಿದೆ.
ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರಾಮನಗರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ.