
ರಾಮನಗರ ಜಿಲ್ಲಾ ಆಸ್ಪತ್ರೆ ಲೋಕಾರ್ಪಣೆಯಲ್ಲಿ ಹೈಡ್ರಾಮಾ!
ರಾಮನಗರ: ನಗರದಲ್ಲಿ ಗುರುವಾರ ನಡೆದ ನೂತನ ಜಿಲ್ಲಾ ಆಸ್ಪತ್ರೆ ಲೋಕಾರ್ಪಣೆ ಸಮಾರಂಭವು ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿದೆ. ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರ ನಡೆ ನುಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರುಗಳು ಮೊದಲಿಗೆ ಆಗಮಿಸಿ ಜಿಲ್ಲಾಸ್ಪತ್ರೆ ಕಟ್ಟಡದ ಟೇಪು ಕತ್ತರಿಸಲು ಸಿದ್ಧರಾದರು. ಈ ವೇಳೆ ವೇದಿಕೆ ಬಳಿ ಜಮಾಯಿಸಿದ್ದ ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಮಾಡಬಾರದು, ಅವರು ಬರುವವರೆಗೆ ಕಾಯಬೇಕು ಎಂದು ಒತ್ತಾಯಿಸಿದರು.
ಆದರೂ ಜೆಡಿಎಸ್ ಕಾರ್ಯಕರ್ತರ ವಿರೋಧದ ನಡುವೆ ಸಚಿವದ್ವಯರು ಟೇಪ್ ಕತ್ತರಿಸಿದರು. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಸಚಿವರ ವಿರುದ್ಧ ದಿಕ್ಕಾರ ಕೂಗಿದರು. ಈ ವೇಳೆ ಸಚಿವ ಅಶ್ವತ್ಥ ನಾರಾಯಣ ಅವರು ಪ್ರತಿಕ್ರಿಯಿಸಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಬರುವುದು ತಡವಾಗಲಿದೆ ಎಂದು ತಿಳಿಸಿದ್ದರು ಅದಕ್ಕಾಗಿ ಟೇಪ್ ಕತ್ತರಿಸಿದ್ದೇವೆ. ವೇದಿಕೆ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಸ್ಪಷ್ಟನೆ ನೀಡಿದರು.
ಇದೇ ಸಮಯಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಎಂಟ್ರಿ ಆಯಿತು. ಜೆಡಿಎಸ್ ಕಾರ್ಯಕರ್ತರು ಎಚ್‌ಡಿಕೆ ಪರ ಘೋಷಣೆಗಳನ್ನು ಕೂಗಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಕೂಡ ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಜಿಲ್ಲಾ ಆಸ್ಪತ್ರೆಯ ನೆಲಮಹಡಿಯನ್ನು ವೀಕ್ಷಣೆ ಮಾಡಿದ ಎಚ್‌ಡಿಕೆ ದಂಪತಿ ವೇದಿಕೆ ಮುಂಬಾಗದ ಆಸನದಲ್ಲಿ ಬಂದು ಕುಳಿತರು. ಈ ವೇಳೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ ನಾವು ಬರುವುದು ತಡವಾಗುತ್ತದೆ ಹಾಗಾಗಿ ಉದ್ಘಾಟನೆ ಮಾಡಿ ಎಂದು ಹೇಳಿದ್ದೆವು. ಈ ವಿಚಾರ ನಮ್ಮ ಕಾರ್ಯಕರ್ತರಿಗೆ ತಿಳಿದಿರಲಿಲ್ಲ ಎಂದು ಸಮಜಾಯಿಷಿ ನೀಡಿದರು.
ಇದೇ ಸಂದರ್ಭ ಸಂಸದ ಡಿ.ಕೆ.ಸುರೇಶ್ ಅವರ ಆಗಮನವಾಯಿತು. ಅವರನ್ನು ಹಿಂಬಾಲಿಸಿ ಬಂದ ಒಂದಷ್ಟು ಬೆಂಬಲಿಗರು ಆಸ್ಪತ್ರೆ ಒಳಪ್ರವೇಶಿಸಲು ಮುಂದಾದಾಗ ಅವರನ್ನು ಪೊಲೀಸರು ತಡೆದರು. ಹಾಗಿದ್ದರೂ ಒಂದಷ್ಟು ಕಾರ್ಯಕರ್ತರು ಒಳನುಗ್ಗಿದರು. ಸಚಿವರು ಹೊಸ ಆಸ್ಪತ್ರೆಯ ರೌಂಡ್ ಹಾಕುತ್ತಿದ್ದರು. ಈ ವೇಳೆ ಯಾರ್ರಿ ಅದು ಡೆಪ್ಯೂಟಿ ಕಮೀಷನರ್, ಕರೀರಿ ಇಲ್ಲಿ.. ಎಯ್ ಮಂತ್ರಿಗಳೇ ನಿಂತ್ಕೊಳ್ರಿ, ನಾನು ಒಬ್ಬ ರೆಫ್ರಡೆಂಟಿಟಿವ್ ಇಲ್ಲಿ, ನನಗೂ ಪ್ರೋಟೋ ಕಾಲ್ ಅನ್ವಯವಾಗುತ್ತೆ ನಿಮಗೊಬ್ಬರಿಗೆ ಅಲ್ಲ ಎಂದು ಏರು ದನಿಯಲ್ಲಿ ಗದರಿದರು.
ಇದಕ್ಕೆ ಸಚಿವ ಅಶ್ವತ್ಥ್ ನಾರಾಯಣ ಅವರು ಕೂಗಾಡುವುದೇನು ಬೇಕಾಗಿಲ್ಲ ಮಾತಾಡೋಣ ಎಂದಾಕ್ಷಣ ಅಲ್ಲಿದ್ದ ಕಾರ್ಯಕರ್ತರು ಇದೇನು ಬಿಜೆಪಿ ಕಾರ್ಯಕ್ರಮನಾ ಎಂದು ಗರಂ ಆದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿದರು. ಸಂಸದ ಸುರೇಶ್ ಅವರು ರಾತ್ರಿ ಆಹ್ವಾನ ಪತ್ರಿಕೆ ಕೊಟ್ಟು ಬೆಳಿಗ್ಗೆ ಉದ್ಘಾಟನೆ ಮಾಡಿದರೆ ಏನರ್ಥ? ಜಿಲ್ಲಾ ಉಸ್ತುವಾರಿ ಸಚಿವರಾದ ನಿಮಗೆ ಅಧಿಕಾರಿಗಳಿಗೆ ಸರಿಯಾದ ಮಾರ್ಗದರ್ಶನ ಕೊಡಬೇಕು ಅಂತ ಗೊತ್ತಾಗಲ್ವ? ಗೌರವಯುತವಾಗಿ ಆಹ್ವಾನಿಸಬೇಕು ತರಾಟೆಗೆ ತೆದುಕೊಂಡರು.
ಇದಕ್ಕೆ ಅಶ್ವಥ್ ನಾರಾಯಣ ಅವರು ನಿಮ್ಮನ್ನು ಬರಬೇಡಿ ಎಂದವರು ಯಾರು? ಎಂದು ಮರು ಪ್ರಶ್ನೆ ಹಾಕಿದಾಗ ಸಚಿವ ಡಾ.ಕೆ.ಸುಧಾಕರ್ ಅವರು ಸಮಾಧಾನ ಪಡಿಸಿ ಇಬ್ಬರನ್ನೂ ವೇದಿಕೆ ಕರೆದೋಯ್ದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಸಂಸದ ಡಿ.ಕೆ.ಸುರೇಶ್ ಅವರನ್ನು ಪಕ್ಕದ ಕುರ್ಚಿಯಲ್ಲೆ ಕೂರಿಸಿಕೊಂಡು ಇಬ್ಬರೂ ನಗುತಾ ಮಾತಾಡುತ್ತಿದ್ದುದು ಗಮನ ಸೆಳೆಯಿತು.