
ರಾಮಾಂಜಿಗೆ ಬ್ಯಾಂಕ್ ಆಫ್ ಬರೋಡಾ ಸಾಧಕ ಪುರಸ್ಕಾರ
ಉಡುಪಿ : ಉಡುಪಿಯ ಉದಯೋನ್ಮುಖ ಪ್ರತಿಭೆ, ಕುಂದಾಪುರ ನಮ್ಮ ಭೂಮಿಯ ರಾಮಾಂಜಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಕೋರ್ಸ್ಗಳಲ್ಲಿ ಶಿಕ್ಷಣ, ಕ್ರೀಡೆ ಹಾಗೂ ಸರ್ವಾಂಗೀಣ ಕ್ಷೇತ್ರಗಳಲ್ಲಿ ಮಾಡಿದ ವಿಶೇಷ ಸಾಧನೆಗೆ ಬ್ಯಾಂಕ್ ಆಫ್ ಬರೋಡ ಸಾಧಕ ಪುರಸ್ಕಾರ ನೀಡಿ ಗೌರವಿಸುತ್ತಿದೆ.
ರಾಮಾಂಜಿ ಸೇರಿದಂತೆ ಅಂತಿಮ ಸ್ನಾತಕೋತ್ತರ ಮೂವರು ವಿದ್ಯಾರ್ಥಿಗಳು ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಮಾ.18 ರಂದು ಅಪರಾಹ್ನ 2.30 ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಪ್ರೊ. ಪಿ.ಎಸ್. ಎಡಪಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು.
ರಾಮಾಂಜಿ ಅವರು ಮಂಗಳೂರು ವಿವಿಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ೨೦೨೨-೨೩ನೇ ಸಾಲಿನ ಕನ್ನಡ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.೮೦.೦೩ ಫಲಿತಾಂಶ ಪಡೆದ ಸಾಧನೆ ತೋರಿದ್ದಾರೆ.
ರಾಮಾಂಜಿ ಅವರಿಗೆ ಕಲೆ, ಸಾಹಿತ್ಯ, ಸಂಸ್ಕೃತಿ, ಪರಿಸರ, ಶಿಕ್ಷಣ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಇತ್ತೀಗಷ್ಟೇ ಬೆಂಗಳೂರಿನ ಸಿದ್ಧಾರೂಢ ಮಿಷನ್ ಸಂಸ್ಥೆವತಿಯಿAದ `ಕರ್ನಾಟಕ ಕಲಾಭೂಷಣ ‘ ರಾಷ್ಟ್ರೀಯ ಪ್ರಶಸ್ತಿ ಪ್ರಾಪ್ತವಾಗಿತ್ತು. ರಾಮಾಂಜಿ ಉಡುಪಿಯ ಎಂಜಿಎA ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪತ್ರಿಕೋದ್ಯಮದಲ್ಲಿ ಪೂರೈಸಿದ್ದು, ನಂತರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಜ್ಯ ಯುವ ಸಂಘಟನೆಗಳ ಒಕ್ಕೂಟದಿಂದ ೭೫ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ರಂಗ`ಭೂಮಿ ಕ್ಷೇತ್ರದ ಸಾಧನೆಗಾಗಿ ` ರಾಜ್ಯ ಯುವ ಪ್ರಶಸ್ತಿ’ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ.