
ರಾಷ್ಟ್ರೀಯ ಸೀನಿಯರ್ ಬಾಲ್ಬ್ಯಾಡ್ಮಿಂಟನ್ – ಕರ್ನಾಟಕ ಪುರುಷರಿಗೆ ಕಂಚು, ಮಹಿಳೆಯರು ರನ್ನರ್ಸ್ ಅಪ್
ಬಾಲ್ಬ್ಯಾಡ್ಮಿಂಟನ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಕೇರಳ ಬಾಲ್ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಶ್ರಯದಲ್ಲಿ ಕೇರಳದ ಕೊಲ್ಲಂನಲ್ಲಿ ಡಿ.24ರಿಂದ 28ರವರೆಗೆ ನಡೆದ 68ನೇ ರಾಷ್ಟ್ರೀಯ ಸೀನಿಯರ್ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ಮಹಿಳೆಯರ ತಂಡ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು ಹಾಗೂ ಡಬಲ್ಸ್ನಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿತು. ಕರ್ನಾಟಕ ಪುರುಷರ ತಂಡ ಕಂಚಿನ ಪದಕವನ್ನು ಪಡೆದುಕೊಂಡಿತು.
ಕರ್ನಾಟಕ ಪುರುಷರ ತಂಡ ಕೇರಳ ತಂಡವನ್ನು 35-29, 35-26 ಅಂಕಗಳಿಂದ ಮಣಿಸಿ ಕಂಚಿನ ಪದಕವನ್ನು ಪಡೆದುಕೊಂಡಿತು. ಪುರುಷರ ವಿಭಾಗದ ಸೆಮಿಫೈನಲ್ಸ್ನಲ್ಲಿ ಕರ್ನಾಟಕ ಪುರುಷರ ತಂಡ ತಮಿಳುನಾಡು ತಂಡದೊಂದಿಗೆ 35-30, 26-35, 31-35 ಅಂಕಗಳಿಂದ ಪರಾಭವಗೊಂಡಿತು. ಇಂಡಿಯನ್ ರೈಲ್ವೇಸ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಮಹಿಳೆಯರ ವಿಭಾಗದ ಸೆಮಿಫೈನಲ್ಸ್ನಲ್ಲಿ ಕರ್ನಾಟಕ ಮಹಿಳೆಯರ ತಂಡ ಆಂಧ್ರಪ್ರದೇಶ ತಂಡವನ್ನು 35-11, 35-24 ಅಂಕಗಳಿಂದ ಸೋಲಿಸಿ ಫೈನಲ್ಸ್ಗೆ ಅರ್ಹತೆಯನ್ನು ಪಡೆದುಕೊಂಡಿತ್ತು. ಫೈನಲ್ಸ್ನಲ್ಲಿ ಕರ್ನಾಟಕ ಮಹಿಳಾ ತಂಡ ತಮಿಳುನಾಡು ತಂಡದೊಂದಿಗೆ 38-36, 28-35, 32-35 ಅಂಕಗಳಿಂದ ಪರಾಭವಗೊಂಡು ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ಮಹಿಳೆಯರ ಡಬಲ್ಸ್ನಲ್ಲಿ ಕರ್ನಾಟಕ ಮಹಿಳೆಯರ ತಂಡ ತಮಿಳುನಾಡು ತಂಡವನ್ನು 36-34, 35-32 ಅಂಕಗಳಿಂದ ಪರಾಭವಗೊಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಪುರುಷರ ವಿಭಾಗದಲ್ಲಿ ಚೇತನ್.ಬಿ.ಕೆ. ಹಾಗೂ ಮಹಿಳೆಯರ ವಿಭಾಗದಲ್ಲಿ ಜಯಲಕ್ಷ್ಮಿ.ಜಿ. “ಸ್ಟಾರ್ ಆಫ್ ಇಂಡಿಯಾ” ಪ್ರಶಸ್ತಿಯನ್ನು ಪಡೆದುಕೊಂಡರು.